ಜಾತಿ ಆಧರಿಸಿ ಲಸಿಕೆ ವಿತರಣೆ : ಡಿಸಿಎಂ ವಿರುದ್ಧ ದೂರು ದಾಖಲು

ಬೆಂಗಳೂರು: ಮಲ್ಲೇಶ್ವರಂ ಕ್ಷೇತ್ರದಲ್ಲಿ ಡಿಸಿಎಂ ಅಶ್ವಥ್​ ನಾರಾಯಣ ಅವರು ಅರ್ಚಕರಿಗೆ ಪ್ರತ್ಯೇಕವಾಗಿ ಲಸಿಕೆ ಕೊಡಿಸಿದ್ದಾರೆ ಎಂಬ ಆರೋಪ ವಿವಾದಕ್ಕೆ ಕಾರಣವಾಗಿದೆ. ಜಾತಿ ಆಧಾರದ ಮೇಲೆ ಲಸಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್​ ಕಾರ್ಯಕರ್ತರು ಈ ಸಂಬಂಧ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆಶಾ ಕಂಪ್ಲೇಂಟ್​​ ದಾಖಲಿಸಿದ್ದಾರೆ. ನಿನ್ನೆ ಮಲ್ಲೇಶ್ವರಂನಲ್ಲಿ ವ್ಯಾಕ್ಸಿನೇಷನ್‌ ಡ್ರೈವ್ ವೇಳೆ ಜಾತಿ ಆಧಾರದ ಮೇಲೆ ಲಸಿಕೆ ನೀಡಿದ್ದಾರೆ. ಲಸಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ಡಿಸಿಎಂ ಅಶ್ವಥ್ ನಾರಾಯಣ ಅವರು ಖುದ್ದು ಒಂದು ಜಾತಿಗೆ ಮಾತ್ರ ಲಸಿಕೆ ಕೊಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸರತಿ ಸಾಲಿನಲ್ಲಿ ನಿಂತ ಕೆಲವರನ್ನ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ತಡೆದಿದ್ದಾರೆ.
ಇಲ್ಲಿ ವ್ಯಾಕ್ಸಿನೇಷನ್‌ ನೀಡುವುದಿಲ್ಲ, ಕಾರ್ಪೋರೇಷನ್ ಆಸ್ಪತ್ರೆಗೆ ಹೋಗಿ ಎಂದು ಕಳುಹಿಸಿದ್ದಾರೆ. ಈ ಬಗ್ಗೆ ವಿಡಿಯೋ ಚಿತ್ರೀಕರಿಸಲು ಮುಂದಾದಾಗ ಮೊಬೈಲ್ ಕಸಿದು ಗಲಾಟೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ಸ್ಥಳದಲ್ಲಿದ್ದ ಬಿಜೆಪಿ‌ ಕಾರ್ಯಕರ್ತರನ್ನ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ : ಆರ್ಥಿಕ ಸಂಕಷ್ಟ : ಚಾಮರಾಜನಗರದ ಒಂದೇ ಕುಟುಂಬದ ನಾಲ್ವರೂ ಅತ್ಮಹತ್ಯೆ

ಅಶ್ವಥ್‌ ನಾರಾಯಣ ಸ್ಪಷ್ಟನೆ : ಜಾತಿ ಆಧಾರಿತ ಲಸಿಕೆ ನೀಡಲಾಗಿದೆ ಎಂಬ ವಿವಾದ ಭುಗಿಲೇಳುತ್ತಲೇ ಡಿಸಿಎಂ ಅಶ್ವಥ್​ ನಾರಾಯಣ ಅವರು ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್​ ಮುಖಂಡ ಬಿ.ಕೆ.ಹರಿಪ್ರಸಾದ್ ನನ್ನ ವಿರುದ್ಧ ಜಾತಿ ಆಧಾರಿತ ಲಸಿಕೆ ಹಂಚಿಕೆ ಆರೋಪ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲಿ ಜಾತಿ ಆಧರಿತ ವ್ಯವಸ್ಥೆ ಮಾಡಿಲ್ಲ. ಇಂತಹ ಯೋಚನೆ ಕೂಡ ಮಾಡಿಲ್ಲ. ಜಾತಿ, ಧರ್ಮ ಆಧರಿತ ರಾಜಕಾರಣ ಕಾಂಗ್ರೆಸ್​​ನವರದ್ದು ಎಂದು ತಿರುಗೇಟು ನೀಡಿದರು.

ನನ್ನ ಕ್ಷೇತ್ರದ ಪ್ರತಿ ಸ್ಲಂಗಳಿಗೆ ತೆರಳಿ, ಅಲ್ಲಿರುವ ಜನರಿಗೆ ಲಸಿಕೆ ಬಗ್ಗೆ ಮಾಹಿತಿ ನೀಡಿದ್ದೇನೆ. ಮುಂಚೂಣಿ‌ ಆದ್ಯತೆ ಅನುಗುಣವಾಗಿ ಲಸಿಕೆ ನೀಡಲಾಗಿದೆ. ಬೀದಿಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಆದ್ಯತೆ ಮೇರೆಗೆ ಲಸಿಕೆ ನೀಡಿದ್ದೇವೆ. ಜಾತಿ ಕೇಳಿ ಲಸಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು. ದೇಶದಲ್ಲಿ ಲಸಿಕೆ ಕಾರ್ಯಕ್ರಮ ಶುರುವಾದಾಗ ಲಸಿಕೆ ಬಗ್ಗೆ ವದಂತಿ, ಅನುಮಾನ ಬಿತ್ತಿದ್ದು ಕಾಂಗ್ರೆಸ್​ನವರು. ಲಸಿಕೆ‌ ಕಾರ್ಯಕ್ರಮ ಯಶಸ್ವಿಯಾಗಬಾರದು, ಹಾಳು ಮಾಡಬೇಕು ಎಂಬುವುದು ಕಾಂಗ್ರೆಸ್ ಹುನ್ನಾರ ಎಂದು ಉಪ ಮುಖ್ಯಮಂತ್ರಿ ಆರೋಪಿಸಿದರು. ನಿನ್ನೆ ಲಸಿಕೆ ಕಾರ್ಯಕ್ರಮದಲ್ಲಿ ಕೇವಲ ಬ್ರಾಹ್ಮಣರಿಗೆ ಮಾತ್ರವಲ್ಲ. ಆಟೋ ಚಾಲಕರಿಗೆ, ಕಾರ್ಮಿಕರಿಗೂ ಲಸಿಕೆ ನೀಡಿದ್ದೇವೆ. ಅರ್ಚಕರಿಗೆ ಕೂಡ ಅದೇ ರೀತಿ ನೀಡಲಾಗಿದೆ. ಸಾಕಷ್ಟು ಅರ್ಚಕರು ಸಂಪರ್ಕಕ್ಕೆ ಬರುತ್ತಾರೆ, ಹೀಗಾಗಿ ಅವರಿಗೆ ಲಸಿಕೆ ನೀಡಲಾಗಿದೆ. ಬ್ರಾಹ್ಮಣರು ಕೂಡ ಮನುಷ್ಯರೇ, ಅವರಿಗೆ ಲಸಿಕೆ ನೀಡಬಾರದಾ? ಬ್ರಾಹ್ಮಣರಿಗೆ ಲಸಿಕೆ ನೀಡಬಾರದೆಂಬುವುದು ಕಾಂಗ್ರೆಸ್ ಉದ್ದೇಶನಾ ಎಂದು ಅಶ್ವಥ್​ ನಾರಾಯಣ ಅವರು ಕಾಂಗ್ರೆಸ್​ಗೆ ಮರು ಪ್ರಶ್ನೆ ಹಾಕಿದ್ದಾರೆ.?

ಇದಕ್ಕೂ ಮುನ್ನ ಕಾಂಗ್ರೆಸ್​ ನಾಯಕ ಬಿ.ಕೆ ಹರಿಪ್ರಸಾದ್ ಸಹ ಜಾತಿ ಆಧಾರದ ಮೇಲೆ ಲಸಿಕೆ ವಿತರಣೆಯಾಗ್ತಿದೆ ಎಂದು ಆರೋಪಿಸಿ  ಅಶ್ವಥ್‌ ನಾರಾಯಣ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.  ಮಲ್ಲೇಶ್ವರ್ ಗರ್ಲ್ಸ್ ಹೈಸ್ಕೂಲ್ ನಲ್ಲಿ ಜಾತಿ ಆಧಾರದ ಮೇಲೆ ಲಸಿಕೆ ಹಾಕಲಾಗ್ತಿದೆ. ನಿನ್ನೆ ದಲಿತರು ಲಸಿಕೆ ಪಡೆಯಲು ಸ್ಕೂಲ್ ಬಳಿ ಹೋದಾಗ ನಿಮಗೆ ಇಲ್ಲಿ ಲಸಿಕೆ ಹಾಕಲ್ಲ ಎಂದು ಹೇಳಿ ಕಳಿಸಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್ ಜಾತಿ ಆಧಾರದ ಮೇಲೆ ಲಸಿಕೆ ಹಾಕಿಸುತ್ತಿದ್ದಾರೆ. ಹೀಗೆ ಮಾಡಬಾರದು, ಇದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಜಾತಿ ಆಧಾರದ ಮೇಲೆ ವ್ಯಾಕ್ಸಿನ್ ನೀಡುತ್ತಿದ್ದಾರೆ. ಈ ರೀತಿ ಮಲ್ಲೇಶ್ವರಂ ಕ್ಷೇತ್ರದಲ್ಲಿ ಡಿಸಿಎಂ ಮಾಡ್ತಿದ್ದಾರೆ. ಮಲ್ಲೇಶ್ವರಂನ ಗರ್ಲ್ಸ್ ಸ್ಕೂಲ್ ಲ್ಲಿ ದಲಿತರಿಗೆ ವ್ಯಾಕ್ಸಿನ್ ಕೊಟ್ಟಿಲ್ಲ. ಕಾರ್ಪೊರೇಷನ್ ಆಸ್ಪತ್ರೆಗೆ ಹೋಗಿ ಎಂದು ಹೇಳಿದ್ದಾರೆ. ಒಂದು ಜಾತಿಗೆ ವ್ಯಾಕ್ಸಿನ್ ಕೊಡುವುದು ಸರಿಯಲ್ಲ. ಅವರಿಗೂ ಕೊಡಬಾರದು ಎಂದು ಹೇಳುವುದು ಸರಿಯಲ್ಲ. ನಮ್ಮ ಕಾರ್ಯಕರ್ತರು ದೂರು ಕೊಟ್ಟರೆ ಪೊಲೀಸರು ತೆಗೆದುಕೊಳ್ಳುತ್ತಿಲ್ಲ. ಪೊಲೀಸರು ದೇಶಕ್ಕೆ ಕೆಲಸ ಮಾಡಬೇಕು,ಬಿ ಜೆಪಿ ನಾಯಕರಿಗೆ ಅಲ್ಲ ಎಂದು ಬಿ.ಕೆ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿದರು

Donate Janashakthi Media

Leave a Reply

Your email address will not be published. Required fields are marked *