ಬೆಂಗಳೂರು ಶಹರ ಮತ್ತು ಸಾಂಸ್ಕೃತಿಕ ಹೈ ಕಮಾಂಡಿನ ಆಟಾಟೋಪಗಳು

ಮಲ್ಲಿಕಾರ್ಜುನ ಕಡಕೋಳ

ಒಂದಾನೊಂದು ಕಾಲಕ್ಕೆ ಗುಲಾಬಿ ನಗರ ಎಂದು ಪ್ರಸಿದ್ದವಾಗಿತ್ತು. ಗುಲಾಬಿಯ ಆರಂಭದ ಅಕ್ಷರ ಗು ಎಂಬುದೆಲ್ಲೋ, ಎಂದೋ ಉದುರಿ ಬಿದ್ದು ಅದು ಲಾಬಿ ನಗರವಾಗಿ ಬಹಳೇ ವರ್ಷಗಳು ಉರುಳುತ್ತಿವೆ. ಆಗಿನ ಕಾಲದಲ್ಲಿ “ಲಾಬಿ’’ ಅನ್ನಲಾಗದಿದ್ದರೂ ನಿತ್ಯ ಜೀವನಾಗತ್ಯದ ಏನೆಲ್ಲ ಕೆಲಸ ಕಾರ್ಯಗಳಿಗೆ ಬಲ್ಲವರ ಮೂಲಕ ಹೇಳಿಸಿ ಈಡೇರಿಸಿಕೊಳ್ಳುವ ತುರ್ತುಅಗತ್ಯದ ಶಿಫಾರಸು ಅವಾಗಿರ್ತಿದ್ದವು.

ಇನ್ನೇನು ವಿಧಾನಸಭೆ ಚುನಾವಣೆಗಳು  ಹತ್ತಿರ ಬರುತ್ತಿವೆ. ಈಗಾಗಲೇ ಪ್ರಜಾಧ್ವನಿ ಮತ್ತು ಪಂಚರತ್ನ ಯಾತ್ರೆಗಳು ಮುಗಿಯುತ್ತಾ ಬಂದು `ವಿಜಯ ಸಂಕಲ್ಪ’ ಯಾತ್ರೆ ಕಲ್ಯಾಣ ನಾಡಿನ ತುದಿಯಿಂದ ಚಾಲೂ ಆಗಿ ಅದು ಮುಗಿದ ಮರುದಿನವೇ ಪ್ರಾಯಶಃ ಇದೇ ಮಾರ್ಚ್ ಇಪ್ಪತ್ತೆಂಟರಂದು ವಿಧಾನಸಭೆ ಚುನಾವಣೆಗಳು ಘೋಷಣೆ ಆಗಬಹುದು. ಯಾತ್ರೆಗಳಿಗೆ ರಾಜಕೀಯ ಪಕ್ಷಗಳು ಅಗ್ಗ ಪ್ರಹಸನದ ಎಲ್ಲ ವಾಮ ಮಾರ್ಗಗಳನ್ನು ಯಾವ ಎಗ್ಗಿಲ್ಲದೇ ಬಳಸಿಕೊಳ್ಳುತ್ತಿವೆ. ಸಾಂಸ್ಕೃತಿಕ ಲೋಕವನ್ನು “ಭಳಾರೆ ವಿಚಿತ್ರಂ’’ ಎಂಬಂತೆ ಬಳಸಿ ಕೊಳ್ಳುತ್ತಲಿವೆ. ಯಾತ್ರೆಗಳಿಗೆ ಒತ್ತಾಸೆಯಾಗಿ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ದಲ್ಲಾಳಿಗಳು ಒಳಗೊಳಗೆ ಗುಳುಗುಳು ಆಟ ಆಡುತ್ತಲೇ ಇರುತ್ತಾರೆ.

ಬೆನ್ನುಹುರಿಯನ್ನೇ ಕಳಕೊಂಡಿರುವ ಪೇಡ್ ನ್ಯೂಜ್ ಮಾಧ್ಯಮಗಳು. ನರುಗಂಪಿನ ಪ್ರತಿರೋಧ ತೋರುವ ಕೆಲವಕ್ಕೆ ಕಿರುಚಾಟದ ಸೋಗಲಾಡಿ ತೆವಲುಗಳು. ಅದರಲ್ಲೂ ಇದೆಲ್ಲದಕ್ಕೂ “ಹೈ ಫೈ ಡವ್” ತೋರುವುದಕ್ಕೆ ಬೆಂಗಳೂರು ಶಹರವೇ ರಾಜಧಾನಿ. ಅಬ್ಬಬ್ಬಾ ಯಾತ್ರೆಹೋಕರು, ಅವರಿಗೆ ಹೊಯ್ ಕೈಯಾಗಿರುವ ಸಾಂಸ್ಕೃತಿಕ ಲೋಕದ ಹೈಕಮಾಂಡ್ ಎಲ್ಲವನ್ನೂ ತನ್ನ ಮುಷ್ಟಿಯಲ್ಲಿ ಇರಿಸಿಕೊಂಡಂತಹ ವರ್ತನೆ. ಅದಕ್ಕೆಂದೇ ಇರಬಹುದು: ಕಸಾಪ ಅಧ್ಯಕ್ಷ ಮಹೋದಯ ಮಹಿಳೆಯೊಬ್ಬರ ಸದಸ್ಯತ್ವ ರದ್ದುಗೊಳಿಸಿ, ಅವರಿಗೆ ಘೋಷಿಸಿದ್ದ ಪ್ರಶಸ್ತಿಯನ್ನು ಹಿಂಪಡೆವ ಅಹಮಿಕೆ ಮೆರೆದಿರುವುದು. ಇದು ಕೊಳಕು ರಾಜಕಾರಣದಲ್ಲಿ ಅದ್ದಿ  ತೆಗೆದಂತಿದೆ. ರಾಜಕೀಯ ಪಕ್ಷಗಳು ಪಕ್ಷವಿರೋಧಿ ಚಟುವಟಿಕೆ ಪರಿಭಾಷೆಯಲ್ಲಿ ಉಚ್ಛಾಟಿಸುವಂತೆ ಕಿತ್ತುಹಾಕಲಾಗಿದೆ. ಅದೆಲ್ಲ ರಾಜಕೀಯ ಪಕ್ಷಗಳ ಹೈ ಕಮಾಂಡ್ ವರಸೆಯೇ ಆಗಿದೆ. ಅದೇ ವರಸೆಯ ಚಾಳೀಸಿನಲ್ಲಿ ಬೆಂಗಳೂರೇತರ ಕರ್ನಾಟಕ ನೋಡುವ ಉಪರಾಟಿ ಪರಿಪಾಟದ ಬೆಂಗಳೂರು ಕಲ್ಚರಲ್ ಹೈಕಮಾಂಡ್ ಬೆಳೆದು ಬಿಟ್ಟಿದೆ.

ಬೆಂಗಳೂರು…,

ಒಂದಾನೊಂದು ಕಾಲಕ್ಕೆ ಗುಲಾಬಿ ನಗರ ಎಂದು ಪ್ರಸಿದ್ದವಾಗಿತ್ತು. ಗುಲಾಬಿಯ ಆರಂಭದ ಅಕ್ಷರ ಗು ಎಂಬುದೆಲ್ಲೋ, ಎಂದೋ ಉದುರಿ ಬಿದ್ದು ಅದು ಲಾಬಿ ನಗರವಾಗಿ ಬಹಳೇ ವರ್ಷಗಳು ಉರುಳುತ್ತಿವೆ. ಆಗಿನ ಕಾಲದಲ್ಲಿ “ಲಾಬಿ’’ ಅನ್ನಲಾಗದಿದ್ದರೂ ನಿತ್ಯ ಜೀವನಾಗತ್ಯದ ಏನೆಲ್ಲ ಕೆಲಸ ಕಾರ್ಯಗಳಿಗೆ ಬಲ್ಲವರ ಮೂಲಕ ಹೇಳಿಸಿ ಈಡೇರಿಸಿಕೊಳ್ಳುವ ತುರ್ತುಅಗತ್ಯದ ಶಿಫಾರಸು ಅವಾಗಿರ್ತಿದ್ದವು.

ಸೋಜಾಗಿ ಹೇಳುವುದಾದರೆ ಹಳ್ಳಿಗಳಲ್ಲಿ ಚೆಂದಗೆ ಪೆಟಗಿ ಬಾರಿಸಿ ಅಂದರೆ ಹಾರ್ಮೋನಿಯಂ ನುಡಿಸಿ, ಸಂಗೀತ, ನಾಟಕ ಕಲಿಸುವ ಮಾಸ್ತರ, ಬಯಲಾಟ, ಕೋಲಾಟ ಆಡುವ ಹಿರೀಕ ಕಲಾವಿದರು, ಹಗಲುರಾತ್ರಿ ಏಕಾಗಿಸಿ ತತ್ವಪದಗಳ ಭಜನೆ ಕಲಾವಿದರು, ಸೋಬಾನೆಪದ, ಬೀಸುವಕಲ್ಲುಪದ ಹಾಡುವ ಮಹಿಳೆಯರು ಇರ್ತಿದ್ರು.

ಪ್ರತಿಭಾಶಾಲಿಗಳಾದ ಅಂಥವರನ್ನು ಸ್ಥಳೀಯ ಶಾಲಾಮಾಸ್ತರನೋ, ಮಠದ ಅಯ್ಯನವರೋ ಸೇರಿದಂತೆ ಅಂಥವರೋರ್ವರು ಬೆಂಗಳೂರಿನ ಸರಕಾರದ ಗಮನಕ್ಕೆ ತಂದು ಅವರನ್ನು ಗುರುತಿಸಿ ಗೌರವಿಸುವ, ಸಾಧ್ಯವಾದರೆ ಅಂಥವರಿಗೆ ಮಾಸಾಶನ ಕೊಡಿಸುವ ಸತ್ಕಾರ್ಯಗಳು ಮುಗ್ದತೆಯಿಂದ ಜರುಗುತ್ತಿದ್ದವು. ಎಲ್ಲಿ ಹೋದವೋ ಜವಾರಿತನದ ಮತ್ತು ಯಥಾರ್ಥ ಪ್ರೀತಿಯ ಆ ದಿನಗಳು ಎಂದು ವರ್ತಮಾನದಲ್ಲಿ ಹಳಹಳಿಸುವಂತಾಗಿದೆ.

ಅಷ್ಟೇಯಾಕೆ ಅದಕ್ಕಾಗಿ ಅಂದು ಅಧಿಕಾರಿ ಮತ್ತು ರಾಜಕೀಯ ವಲಯಗಳಲ್ಲಿ ಸುಮಧುರ ಸಂಸ್ಕೃತಿ ಬೆಸೆಯುವ, ನಿಸ್ವಾರ್ಥ ಮತ್ತು ಶುದ್ಧ ಜವಾರಿತನದ ಕಾಲಮಾನ ಅದಾಗಿತ್ತು. ಸಂಸ್ಕೃತಿ ಕುರಿತು ಮಾತನಾಡುವುದೆಂದರೆ ಆಗ ಪಾವಿತ್ರ್ಯತೆಯ ಸಂಬಂಧಗಳ ಕುರಿತು ಮಾತನಾಡುವ ಗೌರವಭಾವ ಉಕ್ಕಿ ಹರಿಯುತ್ತಿತ್ತು. ಹಾಗೇನೇ ಸಾಹಿತಿ, ಕಲಾವಿದರೆಂದರೆ ಆಗ ನಮಗೆಲ್ಲ ಲೈವ್ ಕ್ಯಾರಕ್ಟರುಗಳು.

ಎಂಥವರಲ್ಲೂ ಅನನ್ಯತೆ ಉಕ್ಕಿಸುವ, ಸಾತ್ವಿಕತೆ ಸೂಸುವ ಆದರದ ಭಾವ ತುಂಬಿ ತುಳುಕುತ್ತಿದ್ದವು. ಬರಬರುತ್ತಾ ಅದೆಲ್ಲ ಕ್ಷೀಣಿಸಿ ಅದರ ಸಾಧ್ಯತೆಯ ಕ್ಷಿತಿಜಗಳು ಯದ್ವಾತದ್ವಾ ಚೆಲ್ಲಿಕೊಳ್ಳುತ್ತಾ ಅದರ ಹಿಡಿತಗಳು ಸಾಂಸ್ಕೃತಿಕ ಲೋಕವನ್ನೂ ಬಿಡದೇ ಅಕ್ಟೋಫಸ್ ತರಹ ಆವರಿಸಿಕೊಂಡು ಬಿಟ್ಟಿವೆ. ನೋವಿನ ಸಂಗತಿಯೆಂದರೆ ಅದೊಂದು ರಿಯಲ್ ಎಸ್ಟೇಟ್ ಬಿಜಿನೆಸ್ಸಿನಂತೆ ವರ್ಚಸ್ಸು ಮತ್ತು ಆಮದಾನಿ ತರುವಂತಹ ದಂಧೆಯಾಗತೊಡಗಿದೆ.

ನೇರವಾಗಿ ರಿಯಲ್ ಎಸ್ಟೇಟ್ ಎಂದು ಕರೆದು ಬಿಟ್ಟರೆ ಸಹಜವಾಗಿ “ದಲ್ಲಾಳಿಗಳೆಂದೇ” ಅರ್ಥೈಸಿದರೆ, ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯ ಮೂಡುವುದಿಲ್ಲ. ಅಂತೆಯೇ ಲಾಬಿಕೋರರು ಅದರ ಬದಲು ಸಾಂಸ್ಕೃತಿಕ ಲೋಕದಸೇವೆ ಎಂದು ಕರೆದುಕೊಂಡಿದ್ದು. ಅವರದು ಕಲ್ಚರಲ್ ಎಸ್ಟೇಟ್ ದಂಧೆ ಎಂಬ ಬನಾವಟಿ ಯಾರಿಗೂ ತಿಳಿಯಲ್ಲ. ಎಷ್ಟಾದರೂ ಸಾಹಿತ್ಯ, ಸಂಗೀತ, ಕಲೆ, ಪರಂಪರೆ, ಜಾನಪದ, ನಾಡು, ನುಡಿ, ಇವುಗಳನ್ನೊಳಗೊಂಡ ಸಂಸ್ಕೃತಿ ದಿಗ್ಗಜರ ಒಡನಾಟದ ಲೋಕವದು.

ಅದರಿಂದಾಗಿ ಯಾರಿಗಾದರೂ ಎಳ್ಳರ್ಧ ಕಾಳಿನಷ್ಟೂ ಅಪಾರ್ಥ ಮಾಡಿಕೊಳ್ಳದ ಒಂದು ಗೌರವಯುತವಾದ ಸ್ಟೇಟಸ್. ಲೋಕದ ಕಣ್ಣಲ್ಲಿ ಕನ್ನಡ ಸಂಸ್ಕೃತಿಯ ಪರಿಚಾರಿಕೆ. ಯಾವುದೇ ರಿಸ್ಕ್ ಇಲ್ಲದೇ ಹಣ, ಹೆಸರು, ಕೀರ್ತಿ ವಗೈರೆಗಳು ಸಲೀಸಾಗಿ ಸಿಗುವ ಬಂಡವಾಳರಹಿತ ಹೈಟೆಕ್ ಬಿಜಿನೆಸ್. ಇದು ಕೆಲವರ ಪಾಲಿಗೆ  ಪ್ರತಿಷ್ಠಿತ ಉದ್ದಿಮೆಯೇ ಆಗಿದೆ. ಆದರೆ ಮೇಲ್ನೋಟದಲ್ಲಿ ಇದೊಂದು ಲಾಬಿ ಮತ್ತು ಲಾಭಕೋರತೆಯ ಕಲ್ಚರಲ್ ಟ್ರೇಡಿಂಗ್ ಟ್ರೆಂಡ್ ಅಂತ ಅನ್ನಿಸೋದೇ ಇಲ್ಲ. ಅದೊಂಥರ ಕಾರ್ಪೊರೇಟ್ ವ್ಯವಹಾರ. ಅದರ ನೇಪಥ್ಯ ಹುನ್ನಾರ ಯಾರಿಗೂ ತಿಳಿಯುವುದೇ ಇಲ್ಲ.

ಹಾಂಗಂತ ಸಾಂಸ್ಕೃತಿಕ ಲೋಕಿಗರಿಗೆ ರಾಜಕೀಯಪ್ರಜ್ಞೆ  ಬೇಡವೆಂಬುದು ಖಂಡಿತವಾಗಿಯೂ ನನ್ನ ಅಭಿಪ್ರಾಯವಲ್ಲ. ಸಂಸ್ಕೃತಿ ಚಿಂತಕರಿಗೆ ಪರಿಪೂರ್ಣವಾದ ರಾಜಕೀಯ ಮತ್ತು ಸಾಮಾಜಿಕಪ್ರಜ್ಞೆ, ಪರಿಜ್ಞಾನ ಇರಬೇಕು. ಆದರೆ ಚಾಲ್ತಿಯಲ್ಲಿರುವ ಭಟ್ಟಂಗಿಗಳ ಒಳಹೇತು, ಕೊಳಕು ಹುನ್ನಾರದ ದ್ರಾಬೆ ರಾಜಕಾರಣದಿಂದ ಸಂಸ್ಕೃತಿ ಚಿಂತಕರು ದೂರವಿರಬೇಕಿದೆ.

ವೈಪರೀತ್ಯದ ಸಂಗತಿ ಎಂದರೆ ಇಲ್ಲಿ ಯಾವುದಕ್ಕೆ ದೂರ, ಯಾವುದಕ್ಕೆ ಹತ್ತಿರ ಇರಬೇಕಾಗಿದೆ ಎಂಬುದರ ತದ್ವಿರುದ್ಧದ ವೈರುಧ್ಯಗಳದ್ದೇ ಅಟ್ಟಹಾಸ. ಸರಕಾರ ಯಾವುದೇ ಪಕ್ಷದ್ದಿರಲಿ, ಅವಕಾಶವಾದಿ ದಲ್ಲಾಳಿಗಳದ್ದೇ… ಕ್ಷಮಿಸಿ, ಕ್ಷಮಿಸಿ ಲಾಬೀಕೋರರದ್ದೇ ಯಾವಾಗಲೂ ಮೇಲುಗೈ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಹಿತ ‘ಅಂಥವರು’ ಎಲ್ಲ ಪಕ್ಷಗಳ ಸರಕಾರಗಳಲ್ಲೂ ಸಲ್ಲುತ್ತಲೇ ಇರ್ತಾರೆ.

ಯಾಕೆಂದರೆ ಅವರು ಎಲ್ಲ ಕಾಲಕ್ಕೂ ಸಲ್ಲುವಂತಹ ಚಾಲಾಕಿತನದ ರಕ್ಷಾಕವಚ ಧರಿಸಿರುತ್ತಾರೆ. ಸರಕಾರವೆಂದರೆ ಇವರಿಗೆ ದರಕಾರವಿಲ್ಲ. ಇಂಥವರ ನೆರವಿಗೆ ಜಾತಿ, ಮತ, ಮಠ, ಐಭೋಗ ಎಲ್ಲವೂ ಮೇಳೈಸಿರುತ್ತವೆ. ಕೆಲವು ಮಠಗಳು  ಇಂತಹ ಪರಮಭಟ್ಟಂಗಿ ಪುಂಗಿದಾಸರನ್ನು ಬಂಗಾರದಂತೆ ಗೌರವಿಸಿ ಆಸ್ಥಾನದ ವಿದುಷ ಸ್ಥಾನದಲ್ಲಿರಿಸಿಕೊಂಡಿವೆ. ಅಷ್ಟಕ್ಕೂ ಇವರು ‘ರವಷ್ಟು’ ಸಾಂಸ್ಕೃತಿಕ ಲೋಕಜ್ಞಾನ ಹೊಂದಿರುತ್ತಾರೆ, ಅವರ ದಂಧೆಗೆ ಅಷ್ಟು ಸಾಕು. ರಾಜಕೀಯ ಪಕ್ಷಗಳ ಪಾಲಿಗೆ ಇಂತಹ ಲಾಬಿಕೋರರು ಇವನಾರವ, ಇವನಾರವ ಎಂದೆನಿಸದೇ ಎಂದಿಗೂ ಇವ ನಮ್ಮವನೆಂದೆನಿಸಯ್ಯ ಎಂಬ ಅನುಕೂಲಸಿಂಧು ವಚನ ಪ್ರಮಾಣಪತ್ರ ಪಡಕೊಂಡಿರುತ್ತಾರೆ.

ಹೀಗೆ ಇವರು ವಿಧಾನಸೌಧದ ಮೂರನೇ ಮಹಡಿಯ ಬೃಹಸ್ಪತಿಗಳನ್ನು ತಲೆದೂಗಿಸುತ್ತಾರೆಂದರೆ ಸರಕಾರಿ, ಅರೆ ಸರಕಾರಿ ಇಲಾಖೆಗಳ ಮಹಡಿ, ಬಹುಮಹಡಿ ಕಟ್ಟಡಗಳವರದ್ದು ಇನ್ಯಾವಲೆಕ್ಕ.? ಅಷ್ಟಕ್ಕೂ ಇವರು ಅದೆಂಥ  ಚಾಲಾಕಿಗಳೆಂದರೆ  ಆಯಕಟ್ಟಿನ ಇಲಾಖೆಗಳಲ್ಲಿ ಅಂತಸ್ತಿಗನುಗುಣವಾಗಿ ಸಾಹೇಬ್ರೇ, ಧಣಿ, ಅಕ್ಕಾ, ಅಣ್ಣಾ ಅನ್ನುತ್ತಲೇ ಕೈ *ಬಿಸಿ* ಮಾಡುತ್ತಾ ಕೆಲಸ ಮಾಡಿಸಿಕೊಳ್ಳುವ ಮಹಾಬೆರಕಿಗಳು.

ಇವರ ಚಾಲಾಕಿತನಕ್ಕೆ ಸರ್ಕಾರದ ಅನುದಾನಗಳು ಮಾತ್ರ ಗುರಿಯಲ್ಲ. ಸಾಂಸ್ಕೃತಿಕ ಲೋಕದ ಉತ್ಸವ,  ವಿಶ್ವಮೇಳ, ಪರಿಷೆ, ಪ್ರಾಧಿಕಾರ, ಪ್ರತಿಷ್ಠಾನ, ಅಕಾಡೆಮಿಗಳ ನೇಮಕಾತಿ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡಕೊಳ್ಳುವ ಇಲ್ಲವೇ ಹೊಡಕೊಳ್ಳುವಲ್ಲಿ ಇವರದು ಎತ್ತಿದ ಕೈ. ಅಷ್ಟು ಮಾತ್ರವಲ್ಲದೇ ಸರಕಾರದ ವತಿಯಿಂದ ವಿದೇಶ ಯಾತ್ರೆ ಮತ್ತು ಜಾತ್ರೆಗಳ ವಿಶೇಷ ಸೌಲಭ್ಯ, ಸವಲತ್ತುಗಳನ್ನು ಕೊಡಿಸುವಲ್ಲೂ, ಪಡೆಯುವಲ್ಲೂ ಇವರದು ಮುಂಚೂಣಿ ನಾಯಕತ್ವ. ಒಮ್ಮೊಮ್ಮೆ ವಂದಿಮಾಗಧರಾಗಿ, ಮತ್ತೊಮ್ಮೆ ಪ್ರತಿಭಟನೆಯ ಪೋಷಾಕು ಧರಿಸುವ ಇವರು ಯಾವುದೇ ಸಾಂಸ್ಕೃತಿಕ ಬದ್ಧತೆ ಹೊಂದಿರಲಾರರು.

ಸಮಯಕ್ಕೆ ತಕ್ಕವೇಷ, ಸಭೆಗೆತಕ್ಕ ರಾಗ ಹಾಡುವ ನಿಪುಣಕಲೆ ರೂಢಿಸಿ ಕೊಂಡಿರುತ್ತಾರೆ. ಇಂಥವರ ಕೈಗೆ ಎಡಚ, ಎಬಡನಂತಹ ಮಂತ್ರಿಯೇನಾದರು ಸಿಕ್ಕರೆ ಸಾಕು ಅವನನ್ನು ಆಟ ಆಡಿಸುವಲ್ಲಿ ಇವರನ್ನು ಮೀರಿಸುವವರೇ ಇರಲ್ಲ. ಅಷ್ಟಕ್ಕೂ ಈ ಹೊಲಬುಗೇಡಿಗಳು ಅಡ್ಡಕಸುಬಿಗಳೇನಲ್ಲ. ಎಲ್ಲ ಕಲೆಗಳ ತಟಕು ತಟಕು ಪರಿಚಯವುಳ್ಳ ಸಕಲಕಲಾ ಪರಾಕ್ರಮಿ ಗೋಸುಂಬೆಗಳು.

ಆದಾಗ್ಯೂ ಎಮರ್ಜೆನ್ಸಿಗೆ ಇರಲೆಂದು ಕಲೆಯ ಯಾವುದಾದರೊಂದು ಪ್ರಕಾರದಲ್ಲಿ ಸಣ್ಣದೊಂದು ಸಾಧನೆಯ ಸರ್ಟಿಫಿಕೆಟನ್ನು ಆಧಾರ್ ಕಾರ್ಡಿನಂತೆ ಇಟ್ಟುಕೊಂಡಿರುತ್ತಾರೆ. ಒಂದೆರಡು ಸಂಘ ಸಂಸ್ಥೆ, ಟ್ರಸ್ಟ್, ಪ್ರತಿಷ್ಠಾನಗಳ ಅಧಿಕೃತ ನೊಂದಣಿ ಮಾಡಿಟ್ಟುಕೊಂಡು ತಪ್ಪದೇ ಅವುಗಳ ಹೆಸರಲ್ಲಿ ಇಲ್ಲಿಯ ಮತ್ತು ದಿಲ್ಲಿಯ ಸರಕಾರದ ಖಜಾನೆಗಳಿಂದ ಬಳಬಳ ಅಂತ ಅನುದಾನ ಉದುರಿಸಿ ಕೊಳ್ಳುತ್ತಾರೆ.

ಅದಕ್ಕೆಲ್ಲ ಜಿಎಸ್ಟಿ ಸಮೇತವಾದ ಬಿಲ್ಲು ಬಾಣಗಳನ್ನು ಅತ್ಯಂತ ವ್ಯವಸ್ಥಿತವಾಗಿ ತಯಾರಿಸಿ ಕೊಡುವಲ್ಲಿ ಇವರು ಸಿಕ್ಕಾಪಟ್ಟೆ ಶ್ಯಾಣೇರು. ಈ ಕಠಿಣ ಪರಿಶ್ರಮವನ್ನು ಸಾಂಸ್ಕೃತಿಕ ಸಂಘಟನೆ ತಮಗೆ ದಶಕಗಳಿಂದ ಕಲಿಸಿ ಕೊಟ್ಟಿದೆಯೆಂದು ವಿಧಾನಸೌಧದ ಕಾರಿಡಾರುಗಳಲ್ಲೂ ಪುಂಗಿ ಊದುತ್ತಾರೆ. ಮೊದ ಮೊದಲು ಬೆಂಗಳೂರಿನಲ್ಲಿ ಕಾಣಿಸಿಕೊಂಡ ಈ ರೋಗ ಬೆಂಗಳೂರಿಗಷ್ಟೇ ಸೀಮಿತಗೊಳ್ಳಲಿಲ್ಲ. ತಾಲ್ಲೂಕು, ಜಿಲ್ಲೆಗಳಿಗೂ ಪೀಡೆಯಂತೆ ಅಮರಿಕೊಂಡಿದೆ.

ಇದು ಕೊರೊನಾ ವೈರಾಣು ತರಹ ಎಲ್ಲ ಕಡೆಗೂ ಸಾಂಕ್ರಾಮಿಕ ರೋಗವಾಗಿ  ಹಬ್ಬಿದೆ. ಕೆಲವರು ತಮ್ಮ ಸಾರಿಗೆ ಸಂವಹನದ ಅನುಕೂಲ ಸರಳಗೊಳ್ಳಲೆಂದು ಅಂಥವರು ಬೆಂಗಳೂರಿಗರಾಗಿದ್ದು, ಮತ್ತೆ ಕೆಲವರು ಅನಿವಾಸಿ ಬೆಂಗಳೂರಿಗರು. ರಾಜಧಾನಿಯ ಈ ಲಾಬಿಕೋರರು ಜಿಲ್ಲೆ, ತಾಲೂಕುಗಳಲ್ಲೂ ಶಾಖಾಮಠಗಳಂತೆ ( ಗೆಳೆಯರೊಬ್ಬರ ಪ್ರಕಾರ ಅಲಿಬಾಬಾ ಮತ್ತು ೪೦…)  ತಮ್ಮ ಶಿಷ್ಯಬಳಗ ಸಾಕಿ ಕೊಂಡಿರುತ್ತಾರೆ. ತಾವು ಕಲ್ಚರಲ್ ಹೈಕಮಾಂಡ್ ತರಹ ರಾಜಧಾನಿಯಲ್ಲಿ ಬಿಡಾರ ಹೂಡಿದ್ದಾರೆ.

ಆ ಮೂಲಕ ಅವರ ಬಿಜಿನೆಸ್ ನಾಡಿನ ತುಂಬೆಲ್ಲ ಹರಡಲು ಅನುಕೂಲ. ಸಿರಿಗನ್ನಡದ ಪ್ರಾಂಜಲ ಕಲೆ, ಸಂಸ್ಕೃತಿಗೆ, ಬೋಳೆತನದ ಕಲಾವಿದರಿಗೆ ಇಂಥವರಿಂದ ಬಿಡುಗಡೆಯೇ ಇಲ್ಲ ಎನ್ನುವಷ್ಟು ಇವರ ಕಬಂಧ ಬಾಹುಗಳು ಬಲಾಢ್ಯಗೊಂಡಿವೆ. ಕೆಲವು ಮಠಾಧೀಶರು, ಪತ್ರಕರ್ತರು ಇಂತಹ ಲಾಬಿಕೋರರ ಪರನಿಂತು  ಲಾಬಿಮಾಡುವುದು, ಆಶೀರ್ವದಿಸುವುದು ಅಷ್ಟೇನು ನಿಗೂಢವಲ್ಲದ ಸಾಂಸ್ಕೃತಿಕ ದುರಂತ. ಒಂದರ್ಥದಲ್ಲಿ ಇದು ಸಾಂಸ್ಕೃತಿಕ ಕ್ರೌರ್ಯವೇ ಆಗಿದೆ.

ಅನರ್ಹರಿದ್ದೂ ತಮ್ಮ ಪಾಲಿನ ಸಂಘ, ಸಂಸ್ಥೆಗಳ ಅನುದಾನ, ಪ್ರಶಸ್ತಿ ಹೊಡಕೊಂಡಿದ್ರೆ ಮುಂಡಾ ಮೋಚಲೆನ್ನಬಹುದಿತ್ತು. ಆದರೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಅನುದಾನ, ಸಹಾಯಧನ, ಆಪದ್ಧನ, ಪ್ರಶಸ್ತಿಗಳನ್ನು ಇತರೆ ಅನರ್ಹರಿಗೇ ಕೊಡಿಸುವ ದಲ್ಲಾಳಿತನದಲ್ಲಿ ಇವರದು ಹೆಸರಾಂತ ಹೆಸರು. ಕೆಲವರ ಪಾಲಿಗದು ಕಾಯಕವೇ ಆಗಿಬಿಟ್ಟಿದೆ. ಸರಕಾರದ ಎಲ್ಲ ಮಜಲುಗಳ ಒಳಕೀಲು, ಕೀಲಿಕೈಗಳ ದಟ್ಟಪರಿಚಯ ಇವರಿಗೆ ಕರತಲಾಮಲಕ. ಏನೊಂದು ಅನುಮಾನಕ್ಕೆಡೆ ಇಲ್ಲದಂತೆ,  “ಪುಣ್ಯಾತ್ಮರಿವರು” ಎಂಬ ತಮ್ಮ ಇಮೇಜಿಗೆ ಧಕ್ಕೆ ಬಾರದಂತೆ  ಹವಾ ಮೇನ್ಟೇನ್ ಮಾಡುವಲ್ಲಿ ಇವರನ್ನು ಮೀರಿಸುವವರೇ ಇಲ್ಲ.

ಸಂಸ್ಕೃತಿಯ ಗಂಧಗಾಳಿಯಿಲ್ಲದ ಭ್ರಷ್ಟ ಅಧಿಕಾರಿಗಳು, ಕೀರ್ತಿಕಾಮುಕ ರಾಜಕಾರಣಿಗಳಿಗೆ ಸಹಜವಾಗಿ ಇಂತಹ ಕಲರ್ಫುಲ್ ಪುಂಗೀದಾಸರೇ ಬೇಕು. ಇಂಥವರ ಪುಂಗಿದಾಸನಿಷ್ಠೆ ಮೆಚ್ಚಿ ಯಾವನಾದರು ಹುಚಪ್ಯಾಲಿ ಮಂತ್ರಿ ಮಹಾಶಯ ಇವರನ್ನು ವಿಧಾನ ಪರಿಷತ್ತಿಗೋ, ರಾಜ್ಯಸಭೆಗೋ ನೇಮಣೂಕಿ ಮಾಡುವ ಸಾದೃಶ್ಯ ಪವಾಡಗಳು ಜರುಗಿದರೇನು ಅಚ್ಚರಿ ಪಡಬೇಕಿಲ್ಲ.! ಆಗ ಜೈ ಹೋ ಲಾಬಿ, ಜೈಹೋ..! ಎನ್ನವುದೊಂದೇ ಬಾಕಿ. ಜೋಕಲ್ಲ ಇವರನ್ನು ದಲ್ಲಾಳಿಗಳು ಅನ್ನುವಂಗಿಲ್ಲ ಜೋಕೆ…!!  ಹೌದು ಕಳ್ಳರಿಗೆ ಕಳ್ಳರೆಂದು ಕರೆದರೆ ಅವರಿಗೆ ಬರಬಾರದ ಸಿಟ್ಟು ಬಾರದಿರುತ್ತದೆಯೇ.?

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *