ಬೆಂಗಳೂರು: ಮಣಿಪುರದಲ್ಲಿ ಯುವತಿಯರಿಬ್ಬರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಲ್ಲದೆ, ಅವರ ಮೇಲೆ ಅತ್ಯಚಾರ ನಡೆಸಿರುವ ದುರ್ಘಟನೆ ವಿರೋಧಿಸಿ ನಗರದ ಟೌನ್ಹಾಲ್ ಮುಂದೆ ಶುಕ್ರವಾರ ಸಂಜೆ 4:30ಕ್ಕೆ ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, “ಮಣಿಪುರದಲ್ಲಿ ಕಳೆದ ಮೇ 4 ರಂದು ಮಹಿಳೆಯರನ್ನು ಬೆತ್ತಲೆ ಮಾಡಿ, ಖಾಸಗಿ ಅಂಗಾಂಗಗಳ ಒಳಗೆ ಕೈ ಹಾಕಿ ಮೆರವಣಿಗೆ ಮಾಡಲಾಗಿದೆ, ಜೊತೆಗೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ತಡವಾಗಿ ಬೆಳಕಿಗೆ ಬಂದ ಈ ದಾರುಣ ಘಟನೆಯನ್ನು ಖಂಡಿಸಿ ತಪ್ಪಿತಸ್ಥರಿಗೆ ಉಗ್ರ/ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು” ಎಂದು ಹೇಳಿದೆ.
“ಸಂಸ್ಕೃತಿಯ ಹೆಸರಿನಲ್ಲಿ ಜನಾಂಗೀಯ ದ್ವೇಷ ಕಾರುವ ಕೋಮುವಾದಿಗಳ ಅಟ್ಟಹಾಸ ಹಿಮ್ಮೆಟ್ಟಿಸಬೇಕಿದ್ದು, ದುಡಿಯುವ ಜನಗಳ ಐಕ್ಯತೆ ಎತ್ತಿ ಹಿಡಿದು ಕೋಮು ಸಾಮರಸ್ಯ ಹರಡಬೇಕಿದೆ. ಬೆಂಗಳೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಲಿದ್ದು, ರಾಜ್ಯದಾದ್ಯಂತ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಜುಲೈ 25ರ ಮಂಗಳವಾರ ಪ್ರತಿಭಟನೆ ನಡೆಯಲಿದೆ” ಎಂದು ಒಕ್ಕೂಟ ಹೇಳಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ | ಯುವತಿಯರ ಬೆತ್ತಲೆ ಮೆರವಣಿಗೆ; ಸಾಮೂಹಿಕ ಅತ್ಯಾಚಾರ
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ವಿಡಿಯೊ ಬೆಳಕಿಗೆ ಬಂದಿದ್ದು, ಘಟನೆಯು ಎರಡು ತಿಂಗಳು ಹಳೆಯದು ಎಂದು ವರದಿಯಾಗಿದೆ. ಪ್ರಮುಖ ಆರೋಪಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಯನ್ನು ಹೆರಾದಾಸ್ (32) ಎಂದು ಗುರುತಿಸಲಾಗಿದೆ. ವಿಡಿಯೊದಲ್ಲಿ ಆರೋಪಿ ಹಸಿರು ಟಿ-ಶರ್ಟ್ ಧರಿಸಿದ್ದು ಕಂಡು ಬಂದಿದ್ದು, ವೀಡಿಯೊದ ಸಹಾಯದಿಂದ ತೌಬಲ್ ಜಿಲ್ಲೆಯಿಂದ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ವಿಡಿಯೋ ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಮಣಿಪುರ ಹಿಂಸಾಚಾರದ ತೀವ್ರತೆ ವಿಶ್ವವನ್ನೆ ಬೆಚ್ಚಿಬೀಳಿಸಿದೆ. ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಒಂದು ದಿನದ ನಂತರ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಮಾನವೀಯ ವೀಡಿಯೊದ ವೈರಲ್ ಆಗುತ್ತಿದ್ದಂತೆ, ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್, ಅಪರಾಧಿಗಳ ವಿರುದ್ಧ ಸರ್ಕಾರವು “ಮರಣ ದಂಡನೆ”ಯನ್ನು ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ಮಣಿಪುರ ಧಗಧಗಿಸುತ್ತಿರುವುದೇಕೆ? ಕೈ ಕೊಟ್ಟ ಡಬಲ್ ಇಂಜಿನ್ ಸರ್ಕಾರ! Janashakthi Media