ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ಹಲವೆಡೆ ಜಲಾವೃತವಾಗಿರುದ್ದು, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಸಿದರು ಮತ್ತು ಸ್ಥಳೀಯರೊಂದಿಗೆ ಚರ್ಚಿಸಿದರು.
ಬೆಂಗಳೂರು ಮಹಾ ನಗರದಲ್ಲಿ ಮಳೆ ಹಾನಿ ಸಮಸ್ಯೆಗೆ ಕಾಂಗ್ರೆಸ್ ಕಾರಣ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಕ್ಕೆ ಪ್ರತಿಕ್ರಿಯಿದ ಸಿದ್ದರಾಮಯ್ಯ ಅವರು, 17 ವರ್ಷದಲ್ಲಿ ಐದು ವರ್ಷ ನಾವಿದ್ವಿ, ಉಳಿದ ಕಾಲ ಅವರೇ ಇದ್ದದ್ದು ಅಲ್ವಾ? ಜನರ ದಿಕ್ಕು ತಪ್ಪಿಸಲು ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಎಂದರು. ಒತ್ತುವರಿ ಆಗಲು ಯಾರು ಕಾರಣ? ಶಾಸಕರೇ ಅಲ್ವಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ವಿಧಾನಸಭೆಯಲ್ಲಿ ಇದನ್ನು ನಾನು ಪ್ರಸ್ತಾಪ ಮಾಡುತ್ತೇನೆ ಎಂದಿದ್ದಾರೆ.
ಬೆಂಗಳೂರಿನ ಮಹದೇವಪುರ ಕ್ಷೇತ್ರದ ಬೆಳ್ಳಂದೂರು ಹಾಗೂ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಮಳೆ ಹಾನಿಯಿಂದಾಗಿ ಇವತ್ತು ನಾಗರಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಜನರು ಮಳೆ ಹಾನಿಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಈ ಭಾಗದ ಶಾಸಕ ಅರವಿಂದ ಲಿಂಬಾವಳಿ ಅವರೇನು ಮಾಡ್ತಿದ್ದಾರೆ? ಬೈರತಿ ಬಸವರಾಜು, ಸತೀಶ್ ರೆಡ್ಡಿ ಏನು ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು.
ಬೋಟ್‌ನಲ್ಲಿ ಸುತ್ತಾಡಿದ ಸಿದ್ದರಾಮಯ್ಯ
ಮಳೆ ನೀರಿನಿಂದಾಗಿ ಸಂಪೂರ್ಣ ಮುಳುಗಡೆಯಾಗಿರುವ ಇಪ್ಸಿಲಾನ್ ಬಡಾವಣೆಯಲ್ಲಿ ಟ್ಯೂಬ್ ಬೋಟ್‌ನಲ್ಲಿ ತೆರಳಿದ ಸಿದ್ದರಾಮಯ್ಯ ಅವರು ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಳಗೆರೆಯ ದಿಶಾ ಅಪಾರ್ಟ್‌ಮೆಂಟ್‌ನ ನಿವಾಸಿಗಳ ಸಮಸ್ಯೆ ಆಲಿಸಿದರು. ಮುನ್ನೇಕೊಳಾಲ ಗ್ರಾಮಕ್ಕೆ ಭೇಟಿ ನೀಡಿ ನೀಡಿದಾಗ ಅಲ್ಲಿನ ಕೊಳಗೇರಿ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.
ಐಟಿ ಕಂಪನಿಯಿಂದ ಸಿಎಂಗೆ ಪತ್ರ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಪತ್ರ ಬರುವುದಕ್ಕೆ ಮುಂಚಿತವಾಗಿಯೇ ಕ್ರಮವಹಿಸಬೇಕಾದ್ದು ಸರ್ಕಾರದ ಕರ್ತವ್ಯವೆಂದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಒಂದು ಖ್ಯಾತಿ ಇದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ನಾವು ಮಾಡಬೇಕು. ಮೂಲಭೂತ ಸೌಕರ್ಯ ನೀಡಬೇಕಲ್ಲ.. ನಷ್ಟ ಆದರೆ ಅವರು ಯಾಕೆ ಉಳಿಯುತ್ತಾರೆ ಎಂದು ಪ್ರಶ್ನಿಸಿದರು.
ಕೆರೆಗಳ ಒತ್ತುವರಿಯ ಬಗ್ಗೆ, ಎ ಟಿ ರಾಮಸ್ವಾಮಿ ವರದಿ ಮೇಲೆ ಒತ್ತುವರಿ ತೆರವು ಮಾಡಿದ್ವಿ. ಜವಾಬ್ದಾರಿಯಿಂದ ನುಣಚಿಕೊಳ್ಳಲು ಹಿಂದಿನ ಸರ್ಕಾರದ ಬಗ್ಗೆ ಹೇಳ್ತಾರೆ. ಬೆಂಗಳೂರು ನಗರ ವ್ಯಾಪ್ತಿಯನ್ನು ಅನಗತ್ಯವಾಗಿ ಹೆಚ್ಚು ಮಾಡಿದರು. 110 ಹಳ್ಳಿಗಳನ್ನು ಸೇರಿಸಿದರು. ಒಂದೂವರೆ ಕೋಟಿ ಜನಸಂಖ್ಯೆ ಇಲ್ಲಿದೆ. ಒಬ್ಬರೇ ಕಮಿಷನರ್ ಹೇಗೆ ನಿರ್ವಹಣೆ ಮಾಡಲು ಸಾಧ್ಯ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಯಮಲೂರು ಇಪ್ಸಿಲಾನ್ ಬಡಾವಣೆ, ಬೆಳ್ಳಂದೂರು ರಿಂಗ್ ರಸ್ತೆ ಎಕೋ ಸ್ಪೇಸ್ ಬಡಾವಣೆ, ರೈನ್ ಬೋ ಬಡಾವಣೆ ಮುಂತಾದ ಸ್ಥಳಗಳಿಗೂ ಸಹ ಭೇಟಿ ನೀಡಿದರು. ಅವರೊಂದಿಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಕಾಂಗ್ರೆಸ್ ಕಾರ್ಯಕರ್ತರು ಜೊತೆಗಿದ್ದರು.
ಸರ್ಕಾರ ಬಂದು ಮೂರು ವರ್ಷವಾದರೂ, ಒತ್ತುವರಿ ತೆರವಿಗೆ ಕ್ರಮ ವಹಿಸಲಿಲ್ಲ. ಎಷ್ಟು ರಾಜಕಾಲುವೆ ಒತ್ತುವರಿ ತೆರವು ಮಾಡಿದ್ದೀರಿ ಅನ್ನೋದರ ಲೆಕ್ಕ ಕೊಡಲಿ. ನಾವು ಏನ್ ಕೆಲಸ ಮಾಡಿದ್ದೀವಿ ಅಂತ ಹೇಳಿದ್ದೀವಿ. ಅವರು ಏನು ಮಾಡಿದ್ದಾರೆ ಅಂತಾ ಹೇಳೋದು ಬಿಟ್ಟು, ಹಿಂದಿನ ಸರ್ಕಾರದ ಬಗ್ಗೆಯಷ್ಟೇ ಆರೋಪ ಮಾಡಿದರೆ ಸಾಕೇ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.