ಸರಣಿ ಕಟ್ಟಡ ಕುಸಿತ : ಆತಂಕದಲ್ಲಿ ಸಿಲಿಕಾನ್ ಸಿಟಿ ಜನ

ಬೆಂಗಳೂರು ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕಟ್ಟಡಗಳು ಕುಸಿಯುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಸಿಲಿಕಾನ್ ಸಿಟಿ ಮಂದಿ ಭಯದಲ್ಲಿ ಜೀವನ ಕಳೆಯುವಂತಾಗಿದೆ.

ನಗರದ ಕಮರ್ಷಿಯಲ್ ಸ್ಟ್ರೀಟ್ ಬಳಿಯ ಮುಖ್ಯರಸ್ತೆಯಲ್ಲೇ ಹಳೇ ಕಟ್ಟಡದ ಗೋಡೆ ಕುಸಿತವಾಗಿದ್ದು, ಅಕ್ಟೋಬರ್ 15 ರಿಂದ ಹಂತ ಹಂತವಾಗಿ ಕಟ್ಟಡ ಕುಸಿತ ಸಂಭವಿದೆ. ಕುಸಿತವಾಗಿರುವ ಬಿಲ್ಡಿಂಗ್​ 100 ವರ್ಷದ ಹಳೆಯದಾಗಿದ್ದು, 2 ವರ್ಷದ ಹಿಂದೆಯೇ ಬಿಬಿಎಂಪಿ ನೋಟಿಸ್​ ನೀಡಿ ಖಾಲಿ ಮಾಡಿ ಕಟ್ಟಡ ತೆರವು ಮಾಡಲು ಮಾಲೀಕರಿಗೆ ಸೂಚನೆ ನೀಡಲಾಗಿತ್ತು. ಆದರೆ ಕುಟುಂಬಿಕ ವ್ಯಾಜ್ಯವಿದ್ದ ಕಾರಣ ಕಟ್ಟಡವನ್ನು ಖಾಲಿ ಮಾಡಿರಲಿಲ್ಲ. ರಸ್ತೆ ತುಂಬಾ ಚಿಕ್ಕದಾಗಿರುವ ಕಾರಣ ಯಂತ್ರಗಳಿಂದ ಕಟ್ಟಡ ತೆರವು ಕಾರ್ಯ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮ್ಯಾನುವಲ್​ ಆಗಿ ಕಟ್ಟಡ ತೆರವು ಮಾಡುವ ಕಾರ್ಯ ಮಾಡುತ್ತೇವೆ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದ್ದಾರೆ.

5 ಅಂತಸ್ತಿನ ಕಟ್ಟಡ ಕುಸಿತ : ಅಕ್ಟೋಬರ್ 07ರಂದು ನಗರದ ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಈ ಘಟನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಸಮಯಪ್ರಜ್ಞೆ ಮೆರೆದಿದ್ದು 15 ಜನರನ್ನು ಪಾರು ಮಾಡಿದ್ದಾರೆ. ಕಟ್ಟಡ ಕುಸಿಯುವ ಸೂಚನೆ ಸಿಗುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಸೆಕ್ಯೂರಿಟಿ ಗಾರ್ಡ್ 15 ಜನರನ್ನು ಸೇಫ್ ಮಾಡಿದ್ದರು.

4 ಅಂತಸ್ತಿನ ಕಟ್ಟಡ ನೆಲಸಮ : ಭಾರೀ ಮಳೆಯಿಂದಾಗಿ ಕುಸಿಯುತ್ತಿದ್ದ 4 ಅಂತಸ್ತಿನ ಮನೆಯನ್ನು ಬಿಬಿಎಂಪಿ ಅಧಿಕಾರಿಗಳೇ ಸ್ವತಃ ಧರೆಗುರುಳಿಸಿದ ಘಟನೆ ಬೆಂಗಳೂರಿನ ಕಮಲಾನಗರದ ವೃಷಭಾವತಿ ವಾರ್ಡ್ ನಲ್ಲಿ ನಡೆದಿದೆ. ಮಹಾಲಕ್ಷ್ಮಿ‌ಪುರಂ‌ ವಿಧಾನಸಭಾ‌ ಕ್ಷೇತ್ರದ ವೃಷಭವತಿ ವಾರ್ಡ್ ನ ಎನ್ ಜಿ.ಓ ಬಡಾವಣೆಯಲ್ಲಿ ರಾತ್ರಿಯಿಂದಲೇ ಮನೆಯ ತಳಭಾಗ ಕುಸಿಯಲು ಆರಂಭಿಸಿತ್ತು. ಕಟ್ಟಡದಲ್ಲಿ 5-6 ಕುಟುಂಬಗಳಿದ್ದು, ಸಮೀಪದ ಶಾಲೆಯಲ್ಲಿ ಎಲ್ಲರಿಗೂ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ

ಕುಸಿಯುವ ಭೀತಿಯಲ್ಲಿ ಪೊಲೀಸ್ ಕಟ್ಟಡ: ಎರಡು ವರ್ಷದ ಹಿಂದೆ ನಿರ್ಮಾಣ ವಾಗಿದ್ದ ಬಿನ್ನಿಪೇಟೆ ಪೊಲೀಸ್ ವಸತಿ ಸಂಕೀರ್ಣದ ಬಹುಮಟ್ಟಡ ಕಟ್ಟಡ ಬಿರುಕು ಬಿಟ್ಟಿದ್ದು, ಪೊಲೀಸ್ ಕುಟುಂಬಗಳಲ್ಲಿ ಆತಂಕ ಮನೆ ಮಾಡಿದೆ. ಬೆಂಗಳೂರಿನಲ್ಲಿ ಸರಣಿ ಕಟ್ಟಡಗಳು ಕುಸಿದು ಬಿದ್ದ ಬೆನ್ನಲ್ಲೇ ಇದೀಗ ಬಿನ್ನಿಪೇಟೆ ವಸತಿ ಸಂಕೀರ್ಣದಲ್ಲಿರುವ ಪೊಲೀಸ್ ಕುಟುಂಬಗಳು ಜೀವ ಕೈಯಲ್ಲಿಟ್ಟುಕೊಂಡು ಪರದಾಡುತ್ತಿವೆ.

ಎರಡು ವರ್ಷದ ಹಿಂದೆಷ್ಟೇ ನಿರ್ಮಣವಾಗಿದ್ದ ಕಟ್ಟಡ ಸಂಪೂರ್ಣ ಬಿರುಕು ಬಿಟ್ಟಿದೆ. ಏಳು ಅಂತಸ್ತಿನ ಕಟ್ಟಡ ಸುಮಾರು ಒಂದು ಅಡಿಯಷ್ಟು ಬಿರುಕು ಬಿಟ್ಟು ಸಂಪೂರ್ಣ ವಾಲಿಕೊಂಡಿದೆ. ಜಪಾನ್ ಟೆಕ್ನಾಲಜಿ ಬಳಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದ ಇಂಜಿನಿಯರ್ ಗಳ ಬಂಡವಾಳ ಈಗ ಬಯಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ಏಳು ಹಂತಸ್ತಿನ ಪೊಲೀಸ್ ಕಟ್ಟಡ ಕುಸಿದು ಬೀಳುವ ಮುನ್ಸೂಚನೆ ನೀಡಿದೆ. ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ದೂರು ನೀಡಿದ್ದು, ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಇನ್ನು ಶಿಥಿಲಾವಸ್ಥೆಯಲ್ಲಿವೆ 175 ಕಟ್ಟಡಗಳು: ನಗರದಲ್ಲಿ 2019ರಲ್ಲಿ ಮಾಡಿದ್ದ ಸಮೀಕ್ಷೆಯಲ್ಲಿ ಗುರುತಿಸಿದ್ದ 185 ಶಿಥಿಲಾವಸ್ಥೆಯ ಕಟ್ಟಡಗಳ ಪೈಕಿ ಈಗಾಗಲೇ 10 ಕಟ್ಟಡಗಳನ್ನು ನೆಲಸಮ ಮಾಡಿದೆ.

ಕೊರೊನಾ ಕಾರಣದಿಂದಾಗಿ ನೆಲಸಮ ಪ್ರಕ್ರಿಯೆ, ಅಗತ್ಯಕ್ರಮವನ್ನು ನಿಲ್ಲಿಸಲಾಗಿದೆ.  ಇನ್ನು ಸಮೀಕ್ಷೆ ಎರಡು ವರ್ಷದ ಹಿಂದೆ ನಡೆದಿದ್ದು, ಕಳೆದ ವಾರ ಪುನಃ ಹೊಸ ಸಮೀಕ್ಷೆ ನಡೆಸಿ ಮತ್ತಷ್ಟು ಶಿಥಿಲಗೊಂಡ ಕಟ್ಟಡಗಳನ್ನು ಪತ್ತೆ ಮಾಡಲಾಗುತ್ತಿದೆ. ಇದಕ್ಕಾಗಿ ವಿವಿಧ ವಲಯಗಳ ಜಂಟಿ ಆಯುಕ್ತರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುತ್ತದೆ.

30 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ವರದಿ ನೀಡುವಂತೆ ಜಂಟಿ ಆಯುಕ್ತರುಗಳಿಗೆ ತಿಳಿಸಲಾಗಿದೆ. ಆ ವರದಿ ಆಧರಸಿ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಮುಖ್ಯ ಆಯುಕ್ತರು ತಿಳಿಸಿದ್ದರು. ಕಟ್ಟಡ ಕುಸಿತ ಪ್ರಕಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಮೀಕ್ಷೆ ಬೇಗಪೂರ್ಣಗೊಳಿಸಿ ತುರ್ತು ಕ್ರಮ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಸಚಿವರು ಎಲ್ಲಿದ್ದಾರೆ? : ಸಿಲಿಕಾನ್​ ಸಿಟಿಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ವರುಣಾರ್ಭಟಕ್ಕೆ ದಿನಕ್ಕೊಂದರಂತೆ ಕಟ್ಟಡಗಳು ನೆಲಕಚ್ಚುತ್ತಿವೆ. ಕಳೆದೊಂದು ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ನಾಲ್ಕೈದು ಕಟ್ಟಡಗಳು ಕುಸಿತ ಕಂಡು ಸಾಕಷ್ಟು ಅವಾಂತರಗಳು ನಡೆಯುತ್ತಿದ್ದರೂ ಕೂಡ ಬೆಂಗಳೂರು ನಗರ ಪ್ರತಿನಿಧಿಸುವ 7 ಸಚಿವರು ಮಾತ್ರ ಕಂಡು ಕಾಣದಂತೆ ಇದ್ದಂತೆ ಕಾಣುತ್ತಿದೆ. ಅಥವಾ ಈ ಗೋಜು ನಮಗ್ಯಾಕೆ ಎಂದು ಕಾಣೆಯಾದಂತೆ ಕಾಣುತ್ತಿದೆ.

ಇನ್ನು ಬೆಂಗಳೂರಿಗೆ ಪ್ರಸ್ತುತ ಉಸ್ತುವಾರಿ ಸಚಿವರು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಆಗಿರುವುದರಿಂದ, ಸಚಿವರುಗಳು ಬೆಂಗಳೂರು ಬಗ್ಗೆ ಉತ್ಸಾಹ ಕಳೆದುಕೊಂಡಿದ್ದಾರೆ ಎಂಬ ಆರೋಪಗಳು ಇವೆ. ಉಪಚುನಾವಣೆ, ಸಚಿವಸ್ಥಾನದ ಲಾಭಿಗಾಗಿ ದೆಹಲಿ ಓಡಾಟ, ಸಂಪುಟ ವಿಸ್ತರಣೆ ಎಂದು ಮಂತ್ರಿ ಸಚಿವರು ಓಡಾಡುತ್ತಿದ್ದಾರೆ. ಆದರೆ ಬೆಂಗಳೂರು ಜನ‌ ಮಾತ್ರ ಜೀವವನ್ನು ಕೈಯಲ್ಲಿಡಿದು ಕುಳಿತಿದ್ದಾರೆ. ಸರಕಾರ ಹಾಗೂ ಬಿಬಿಎಂಪಿ ನಿರ್ಲಕ್ಷ್ಯ ಬಿಟ್ಟು ಜನರ ರಕ್ಷಣೆಗೆ ಮುಂದಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *