ಬೆಂಗಳೂರು: ಕೊರೊನಾದಿಂದ ಬಹುತೇಕ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಲಾಕ್ಡೌನ್ ಜಾರಿಯಿದ್ದ ಕಾರಣ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ಮಧ್ಯೆ ಖಾಸಗಿ ಶಾಲೆಗಳು ಅಮಾನವೀಯವಾಗಿ ವರ್ತಿಸುತ್ತಿವೆ. ಈಗಾಗಲೇ ಸರ್ಕಾರ ಮತ್ತು ಖಾಸಗಿ ಶಾಲೆಗಳ ನಡುವಿನ ಫೀಸ್ ಸಮರ ಕೋರ್ಟ್ ಅಂಗಳಕ್ಕೆ ತಲುಪಿದ್ದು, ಇಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಈ ನಡುವೆ ಒಂದೇ ಕಂತಿನಲ್ಲಿ ಪೂರ್ಣ ಶುಲ್ಕವನ್ನು ಪಾವತಿಸುವಂತೆ ಬೆಂಗಳೂರಿನ ಬನಶಂಕರಿಯ ಬಿಎನ್‌ಎಂ ಶಾಲೆ ಕಿರುಕುಳ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಒಂದೇ ಕಂತಿನಲ್ಲಿ ಪೂರ್ಣ ಶುಲ್ಕವನ್ನು ಕಟ್ಟಬೇಕು. ಶುಲ್ಕ ಪಾವತಿಸದಿದ್ದರೆ ಆನ್ಲೈನ್ ಕ್ಲಾಸ್ ಬಂದ್ ಮಾಡುತ್ತೇವೆ ಎಂದು ಆಡಳಿತ ಮಂಡಳಿ ಹೇಳಿರುವುದನ್ನು ವಿರೋಧಿಸಿ ಪೋಷಕರು ಇಂದು ಪ್ರತಿಭಟನೆ ನಡೆಸಿದ್ದಾರೆ. 50 ಕ್ಕೂ ಹೆಚ್ಚು ಪೋಷಕರು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಕಳೆದ ವರ್ಷ ಲಕ್ಷ ಲಕ್ಷ ಫೀಸ್ ತಗೊಂಡ್ರು. ಆದರೆ ಆನ್ಲೈನ್ ಕ್ಲಾಸ್ ಮಾತ್ರ ಮಾಡಿಲ್ಲ. ಯೂಟ್ಯೂಬ್ ಮೂಲಕ ವೀಡಿಯೋ ಮಾಡಿ ಕಳುಹಿಸಿದ್ದರು. ಮನೆಯಲ್ಲೇ ಪೋಷಕರಿಗೆ ಹೆಚ್ಚು ತೊಂದರೆಯಾಗ್ತಿದೆ. ಟೀಚರ್ಸ್ಗಿಂತ ಮಕ್ಕಳ ಜೊತೆ ಕೂತು ನಾವೇ ಪಾಠ ಹೇಳಿ ಕೊಡುತ್ತಿದ್ದೇವೆ. ನಾವ್ಯಾಕೆ ಫುಲ್ ಫೀಸ್ ಕಟ್ಟಬೇಕು? ಎರಡೇ ಕಂತಿನಲ್ಲಿ 70 ಸಾವಿರ ಕಟ್ಟಿ ಅಂತ ಹೇಳುತ್ತಿದ್ದಾರೆ. ಇಬ್ಬರು ಮಕ್ಕಳು ಒಂದೇ ಶಾಲೆಯಲ್ಲಿ ಓದುತ್ತಿದ್ದಾರೆ. ಅಷ್ಟೊಂದು ಹಣವನ್ನು ಎಲ್ಲಿಂದ ತರೋದು ಅಂತ ಪೋಷಕರೊಬ್ಬರು ಪ್ರಶ್ನಿಸಿದ್ದಾರೆ.
ನೀವು ಏನಾದ್ರೂ ಮಾಡಿ ಫೀಸ್ ತನ್ನಿ ಅಷ್ಟೆ ಅಂತ ಟಾರ್ಚರ್ ಮಾಡುತ್ತಿದ್ದಾರೆ. ಕೆಲಸ ಕಳೆದುಕೊಂಡು ಕಷ್ಟದಲ್ಲಿರುವಾಗ ಶುಲ್ಕ ಎಲ್ಲಿಂದ ಕಟ್ಟೋದು? ಶೇ.50ರಷ್ಟು ಸಂಬಳ ತೆಗೆದುಕೊಳ್ಳುತ್ತಿದ್ದೇವೆ. ಶೇ.100ರಷ್ಟು ಫೀಸ್ ಕಟ್ಟುವುದು ಹೇಗೆ? ಎಂದು ಖಾಸಗಿ ಶಾಲೆಗಳ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಶುಲ್ಕದ ಪೂರ್ಣ ಪ್ರಮಾಣದ ಮಾಹಿತಿ ನೀಡಬೇಕು ಎಂದು ಪೋಷಕರು ಪಟ್ಟು ಹಿಡಿದಿದ್ದರು. ಕೊನೆಯಲ್ಲಿ ಆಡಳಿತ ಮಂಡಳಿಯ ಪ್ರತಿನಿಧಿಯೊಬ್ಬರು ಪೋಷಕರ ಮನವಿಯನ್ನು ಆಲಿಸಿ. ಬುಧವಾರ ಅಂತಿಮ ತೀರ್ಮಾನ ಹೇಳುವುದಾಗಿ ಮನವೊಲಿಸುವ ಪ್ರಯತ್ನ ನಡೆಸಿದರು. ಪಟ್ಟು ಸಡಿಲಿಸದ ಪೋಷಕರು ಶುಲ್ಕದ ಮಾಹಿತಿ ನೀಡುವಂತೆ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.