ಸಿಎಂ ಖುರ್ಚಿ ಉಳಿಸಿಕೊಂಡ ಮಮತಾ ಬ್ಯಾನರ್ಜಿ : ದಾಖಲೆ ಅಂತರದಲ್ಲಿ ಗೆಲವು

ಕೋಲ್ಕತಾ : ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಸಿಎಂ ಸ್ಥಾನದಲ್ಲಿ ಮುಂದುವರಿಯಲು ಬಹಳ ಮುಖ್ಯವಾಗಿದ್ದ ಭವಾನಿಪುರ್ ಉಪಚುನಾವಣೆಯ ಫಲಿತಾಂಶ ಘೋಷಣೆ ಆಗಿದೆ. ಮಮತಾ ಬ್ಯಾನರ್ಜಿ ಅವರು ದಾಖಲೆ ಅಂತರದಲ್ಲಿ ಗೆದ್ದಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ 58 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ತಮ್ಮ ಸಮೀಪದ ಬಿಜೆಪಿ ಅಭ್ಯರ್ಥಿಯನ್ನ ಸೋಲಿಸಿದ್ದಾರೆ. ಉಳಿದ ಎರಡು ಕ್ಷೇತ್ರಗಳಲ್ಲಿ ಟಿಎಂಸಿ ಮುನ್ನಡೆ ಸಾಧಿಸಿದೆ.

2011ರಲ್ಲಿ ಇದೇ ಭಬಾನಿಪುರ್ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು 54,213 ಮತಗಳ ಅಂತರದಿಂದ ಗೆದ್ದಿದ್ದರು. ಹತ್ತು ವರ್ಷಗಳ ಬಳಿಕ ಅವರ ಗೆಲುವಿನ ಅಂತರ ಇನ್ನೂ ಹೆಚ್ಚಾಗಿದೆ. ಈ ಗೆಲುವಿನ ಮೂಲಕ ಮಮತಾ ಬ್ಯಾನರ್ಜಿ ಅವರ ಸಿಎಂ ಸ್ಥಾನ ಭದ್ರಗೊಂಡಂತಾಗಿದೆ.

ಸುವೇಂದು ವಿರುದ್ಧ ಸೋತಿದ್ದ ಮಮತಾ ಬ್ಯಾನರ್ಜಿ : ಈ ಮೊದಲು ನಡೆದಿದ್ದ ಚುನಾವಣೆಯಲ್ಲಿ ಮಮತಾ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದರು. ಆದರೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವು ಬಹುಮತ ಪಡೆದು ಸರ್ಕಾರ ರಚಿಸಿತ್ತು. ಮುಖ್ಯಮಂತ್ರಿಯಾಗಿ ಮಮತಾ ಪ್ರಮಾಣ ವಚನ ಸ್ವಿಕರಿಸಿದ್ದರು. ಆದರೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಅನಿವಾರ್ಯತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಭವಾನಿಪುರ ಕ್ಷೇತ್ರದಲ್ಲಿ ಗೆದ್ದಿದ್ದ ತಮ್ಮ ಆಪ್ತನ ರಾಜೀನಾಮೆ ಪಡೆದು ಅಲ್ಲಿ ಉಪಚುನಾವಣೆ ಮೂಲಕ ಕಣಕ್ಕೆ ಇಳಿದಿದ್ದರು. ಈ ಕ್ಷೇತ್ರ ರಚನೆಯಾದಾಗಿನಿಂದಲೂ ಭವಾನಿಪುರದಲ್ಲಿ ಟಿಎಂಸಿ ಬಲವಾದ ಹಿಡಿತ ಹೊಂದಿದೆ.

ಮಮತಾ ಬ್ಯಾನರ್ಜಿ 85,263 ಗಳಿಸಿದ್ದು, ಬಿಜೆಪಿಯ ಪ್ರಿಯಾಂಕಾ ಟೆಬ್ರಿವಾಲ್‌ 26,428 ಮತಗಳನ್ನು, ಸಿಪಿಐಎಂನ ಶ್ರೀಜಿಬ್‌ ಬಿಸ್ವಾಸ್‌ 4,226  ಮತಗಳನ್ನು ಪಟೆದಿದ್ದಾರೆ.

ಸೆಪ್ಟೆಂಬರ್ 30ರಂದು ನಡೆದಿದ್ದ ಉಪ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಲ್ಲಿ ಶೇಕಡಾ 53.32ರಷ್ಟು ಮತದಾನವಾಗಿತ್ತು. ಸಂಸರ್ ಗಂಜ್ ಕ್ಷೇತ್ರದಲ್ಲಿ ಶೇಕಡಾ 78.60 ಮತ್ತು ಜಂಗೀಪುರ ಕ್ಷೇತ್ರದಲ್ಲಿ ಶೇಕಡಾ 76.12ರಷ್ಟು ಮತದಾನವಾಗಿತ್ತು.

ಭವಾನಿಪುರದ ಮತದಾರರ ತೀರ್ಪು ನಂದಿಗ್ರಾಮದಲ್ಲಿ ನನ್ನ ವಿರುದ್ಧ ರೂಪಿಸಲಾದ ಪಿತೂರಿಗೆ ಉತ್ತರವಾಗಿದೆ. ನಾನು ಭವಾನಿಪುರ ಪೌರ ಸಂಸ್ಥೆಯ ಎಲ್ಲಾ ವಾರ್ಡ್‌ಗಳಿಂದ ಮುನ್ನಡೆ ಕಾಯ್ದುಕೊಂಡಿದ್ದೇನೆ “ಎಂದು ಉಪಚುನಾವಣೆಯಲ್ಲಿ ಗೆದ್ದ ನಂತರ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *