ಕೆಜಿಎಫ್ : ಕೋಲಾರ ಜಿಲ್ಲೆಯ ಸಾರ್ವಜನಿಕ ಉದ್ಯಮವಾದ ಬೆಮಲ್ ಕಾರ್ಖಾನೆಯ ಖಾಸಗೀಕರಣ ವಿರೋಧಿಸಿ ಬೆಮಲ್ ನಿವೃತ್ತ ನೌಕರರು ಕೆಜಿಎಫ್ ನಗರದಿಂದ ಜಿಲ್ಲಾಧಿಕಾರಿ ಕಛೇರಿಯವರಗೆ ಶುಕ್ರವಾರ ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ನಿವೃತ್ತ ಬೆಮಲ್ ಕಾರ್ಮಿಕ ಜಿ.ಅರ್ಜುನನ್ ಮಾತನಾಡಿ ಸಾರ್ವಜನಿಕ ಉದ್ದಿಮೆಯಾದ ಬೆಮೆಲ್ ಸಂಸ್ಥೆಯು 1964ರಲ್ಲಿ ಮಾತೃಸಂಸ್ಥೆಯಾದ ಹೆಚ್‍ಎಎಲ್‍ನಿಂದ ಬೇರ್ಪಟ್ಟು ರೈಲು ಕೋಚ್‍ಗಳ ಉತ್ಪಾದನೆ ಹಾಗೂ ಬಿಡಿಭಾಗ ಗಳ ಪೂರೈಕೆಗಾಗಿ ಬೆಂಗಳೂರಿನಲ್ಲಿ ಸ್ಥಾಪನೆ ಗೊಂಡಿತು. ನಂತರ ಕೆಜಿಎಫ್, ಮೈಸೂರು ಹಾಗೂ ಪಾಲಕ್ಕಾಡ್‍ನಲ್ಲಿ ಉತ್ಪಾದನಾ ಘಟಕಗಳನ್ನು ವಿಸ್ತರಿಸುವ ಜೊತೆಗೆ ರಕ್ಷಣೆ, ರೈಲು, ಮೆಟ್ರೋ, ಗಣಿಗಾರಿಕೆ ಮತ್ತು ಮೂಲ ಸೌಕರ್ಯ ಹಾಗೂ ಏರೋಸ್ಪೇಸ್ ವಲಯ ಗಳಿಗೆ ಅಗತ್ಯವಾದ ಯಂತ್ರ ಮತ್ತು ವಾಹನಗಳನ್ನು ಉತ್ಪಾದಿಸುತ್ತಿದೆ. ದೇಶಾದ್ಯಂತ ಮಾರಾಟ ಜಾಲ ಹೊಂದಿ ಉತ್ಕೃಷ್ಟ ಸೇವೆ ನೀಡುತ್ತಿರುವ ಸಂಸ್ಥೆಯನ್ನು ಇದೀಗ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿದ್ದು ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಪ್ರಾರಂಭದಿಂದಲೂ ಲಾಭದಾಯಕವಾಗಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರಕ್ಕೆ ತೆರಿಗೆ ಹಾಗೂ ಲಾಭಾಂಶ ರೂಪದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ನೀಡುವುದರ ಜೊತೆಗೆ ಷೇರುದಾರರಿಗೆ ಪ್ರತಿವರ್ಷ ಡಿವಿಡೆಂಡ್ ಪಾವತಿ ಮಾಡುತ್ತಾ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿದೆ. ಬೆಮೆಲ್ ಮೈಸೂರು ಘಟಕವು 1984ರಲ್ಲಿ ಪ್ರಾರಂಭಗೊಂಡು ಸುಮಾರು 700 ಎಕರೆ ಪ್ರದೇಶದಲ್ಲಿ ಟ್ರಕ್, ಇಂಜಿನ್ ಹಾಗೂ ಏರೋ ಸ್ಪೇಸ್ ವಿಭಾಗಗಳನ್ನು ಹೊಂದಿದೆ. ಸದ್ಯ ಬೆಮೆಲ್ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರವು ಶೇ.54.03ರಷ್ಟು ಷೇರು ಬಂಡವಾಳ ಹೊಂದಿದ್ದು, 2016ರ ನವೆಂಬರ್‍ನಲ್ಲಿ ಕೇಂದ್ರ ಸಚಿವ ಸಂಪುಟದ ಅನುಮೋದನೆ ಮೇರೆಗೆ ಶೇ.26ರಷ್ಟು ಷೇರನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆ ಆರಂಭಿಸಿ, ಅದರ ಮುಂದುವರೆದ ಭಾಗವಾಗಿ ಸಂಸ್ಥೆಯ ಆಡಳಿತ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುತ್ತಾ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೆಮೆಲ್ ಕಾರ್ಮಿಕನ ಸಾವು : ಪರಿಹಾರಕ್ಕೆ ಸಿಐಟಿಯು ಆಗ್ರಹ
ಹಿರಿಯ ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ಮಣೆ ಹಾಕಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಖಂಡನಾರ್ಹ. ಸರ್ಕಾರದ ಇಂತಹ ನಿಲುವಿನಿಂದ ದೇಶದ ಸಮಗ್ರತೆ ಹಾಗೂ ಭದ್ರತೆಗೆ ಧಕ್ಕೆಯಾಗಲಿದೆ. ಜೊತೆಗೆ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಕಿಡಿಕಾರಿದರು. ಬೆಮೆಲ್ ಸಂಸ್ಥೆ ಯಲ್ಲಿ ಪ್ರಸ್ತುತ ಸಾವಿರಾರು ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು, ಖಾಸಗಿಕರಣದಿಂದ ಉದ್ಯೋಗ ಭದ್ರತೆಗೆ ಧಕ್ಕೆ ಉಂಟಾಗಲಿದೆ. ಅಲ್ಲದೆ, ಮೀಸಲಾತಿ ಆಧಾರದ ನೇಮಕ ಪ್ರಕ್ರಿಯೆಗಳು ಸ್ಥಗಿತಗೊಂಡು ಸಾಮಾಜಿಕ ನ್ಯಾಯ ಮರೀಚಿಕೆಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೆ ಸಂಸ್ಥೆಯನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು
ನಗರದಲ್ಲಿ ನಡೆದ ಬೈಕ್ ರ್ಯಾಲಿಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದರು ಪ್ರತಿಭಟನೆ ನೇತೃತ್ವವನ್ನು ನಿವೃತ್ತ ಬೆಮಲ್ ನೌಕರರಾದ ಆರ್ ರಾಜಶೇಖರನ್, ವಿ.ಮುನಿರತ್ನಂ, ಅಶೋಕ್ ಲೋನಿ, ಆರ್.ಶ್ರೀನಿವಾಸ್, ಜಯಶೀಲನ್ ಅಕೃ ಸೋಮಶೇಖರ್, ಟಿ.ಎಂ ವೆಂಕಟೇಶ್, ಎನ್ ಎನ್ ಶ್ರೀರಾಮ್, ವಿಜಯಕುಮಾರಿ, ಆಶಾ,ಭೀಮರಾಜ್, ನಾರಾಯಣರೆಡ್ಡಿ, ರಮಣ್ ಮುಂತಾದವರು ವಹಿಸಿದ್ದರು