ಬೆಂಗಳೂರಿನಲ್ಲೂ ಮೊಹಲ್ಲಾ ಕ್ಲಿನಿಕ್‌ ಆರಂಭ: ಮನೀಶ್‌ ಸಿಸೋಡಿಯಾ ಭರವಸೆ

 – ಶಾಂತಿನಗರದಲ್ಲಿ  ಆಮ್‌ ಆದ್ಮಿ ಕ್ಲಿನಿಕ್‌ ಆರಂಭಿಸಿದ ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಿನ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಎಲ್ಲ ವಾರ್ಡ್‌ಗಳಲ್ಲಿ ಸ್ಪರ್ಧಿಸಲಿದ್ದು, ಅಧಿಕಾರಕ್ಕೆ ಬಂದರೆ ನಗರದಾದ್ಯಂತ ದೆಹಲಿ ಮಾದರಿಯಲ್ಲಿ ಮೊಹಲ್ಲಾ ಕ್ಲಿನಿಕ್‌ ಆರಂಭಿಸಲಾಗುವುದು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯ ಭರವಸೆ ನೀಡಿದರು.

ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕವು ಶಾಂತಿನಗರದಲ್ಲಿ ಆರಂಭಿಸಿರುವ ‘ಆಮ್‌ ಆದ್ಮಿ ಕ್ಲಿನಿಕ್‌’ಗೆ ಬುಧವಾರ ಭೇಟಿನೀಡಿ ವೀಕ್ಷಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೆಹಲಿಯ ಜನರಿಗೆ ಉತ್ತಮವಾದ ವೈದ್ಯಕೀಯ ಸೌಲಭ್ಯ ಮತ್ತು ಶಿಕ್ಷಣ ಒದಗಿಸುವುದಕ್ಕೆ ನಮ್ಮ ಪಕ್ಷ ಆದ್ಯತೆ ನೀಡುತ್ತಿದೆ. ಬೆಂಗಳೂರಿನಲ್ಲೂ ಅದೇ ಮಾದರಿಯನ್ನು ಅನುಷ್ಠಾನಕ್ಕೆ ತರುತ್ತೇವೆ’ ಎಂದರು.

ದೆಹಲಿಯ ಮೊಹಲ್ಲಾ ಕ್ಲಿನಿಕ್‌ಗಳು ವೈದ್ಯರ ಸೇವೆ, ಉಚಿತ ಔಷಧಿ ವಿತರಣೆ ಮತ್ತು ಶುಚಿತ್ವಕ್ಕೆ ಹೆಸರಾಗಿದೆ. ಈ ಕಾರಣಕ್ಕಾಗಿಯೇ ದೆಹಲಿಯ ಮೊಹಲ್ಲಾ ಕ್ಲಿನಿಕ್‌ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಪ್ರಮುಖ ಮಾದರಿ ಎಂಬ ಮನ್ನಣೆ ಪಡೆದಿವೆ. ಅದೇ ಮಾದರಿಯ ಕ್ಲಿನಿಕ್‌ಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರೆಯಲಾಗುವುದು ಎಂದು ಹೇಳಿದರು.

ಶಾಲೆಗಳಿಗೆ ಹೊಸ ಸ್ಪರ್ಶ: ಆಮ್‌ ಆದ್ಮಿ ಪಕ್ಷದ ಸರ್ಕಾರವು ಐದು ವರ್ಷಗಳ ಅವಧಿಯಲ್ಲಿ ದೆಹಲಿಯಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ಸ್ಪರ್ಶ ನೀಡಿದೆ. ಸರ್ಕಾರಿ ಶಾಲೆಗಳ ಮಕ್ಕಳು ಈಗ ಹೆಚ್ಚಿನ ಸಂಖ್ಯೆಯಲ್ಲಿ ಐಐಟಿಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಅದೇ ಮಾದರಿಯಲ್ಲಿ ಬೆಂಗಳೂರಿನ ಶಾಲೆಗಳಲ್ಲೂ ಸುಧಾರಣೆ ತರುವ ಗುರಿಯನ್ನು ತಮ್ಮ ಪ‍ಕ್ಷ ಹೊಂದಿದೆ ಎಂದು ಸಿಸೋಡಿಯ ತಿಳಿಸಿದರು.

ಒಳ್ಳೆಯ ಆಡಳಿತ, ಸುಸ್ಥಿರ ನಗರಗಳ ಅಭಿವೃದ್ಧಿ, ಸಾಮಾನ್ಯ ಜನರ ಆಶಯಗಳಿಗೆ ಸ್ಪಂದಿಸುವ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಆಮ್‌ ಆದ್ಮಿ ಪಕ್ಷ ನೀಡಲಿದೆ. ಬಿಬಿಎಂಪಿ ಚುನಾವಣೆಯಲ್ಲಿ ನೆಪಮಾತ್ರಕ್ಕೆ ಸ್ಪರ್ಧಿಸುವುದು ಪಕ್ಷದ ಉದ್ದೇಶವಲ್ಲ. ಎಲ್ಲ ವಾರ್ಡ್‌ಗಳಲ್ಲೂ ಗೆಲುವು ಸಾಧಿಸುವ ಗುರಿಯೊಂದಿಗೆ ಸ್ಪರ್ಧೆ ಮಾಡಲಾಗುವುದು ಎಂದರು.

ಬಿಬಿಎಂಪಿ ಚುನಾವಣೆಯಲ್ಲಿ ಬೆಂಗಳೂರಿನ ಜನರು ಅತ್ಯಂತ ಜವಾಬ್ಧಾರಿಯಿಂದ ನಿರ್ಧಾರ ಕೈಗೊಳ್ಳಬೇಕು. ದೆಹಲಿ ಮಾದರಿಯ ಸುಧಾರಣೆಯನ್ನು ಪಡೆಯವುದು ಒಂದು ಮತ ನೀಡುವುದರಿಂದ ಸಾಧ್ಯವಾಗಲಿದೆ. ಜನರು ಬಯಸುವ ರೀತಿಯ ಸುಧಾರಣೆಯನ್ನು ತರುವ ಬದ್ಧತೆಯನ್ನು ತಮ್ಮ ಪಕ್ಷ ಹೊಂದಿದೆ ಎಂದು ಹೇಳಿದರು.

ಆಮ್‌ ಆದ್ಮಿಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ, ಆಮ್‌ ಆದ್ಮಿ ಕ್ಲಿನಕ್‌ ಉಸ್ತುವಾರಿ ರಾಣಿ ದೇಸಾಯಿ, ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಪತ್ರಿಕಾಗೋಷ್ಠಿಯಲ್ಲಿದ್ದರು.

Donate Janashakthi Media

Leave a Reply

Your email address will not be published. Required fields are marked *