ಬೆಲೆ ಏರಿಕೆಯಿಂದ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿಲ್ಲ: ಬಿಜೆಪಿ  ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಶಿವಮೊಗ್ಗ: ಜನರ ಮಧ್ಯೆ ನಾವು ಪಕ್ಷದ ಪರಿವಾಗಿ ಮಾತನಾಡಲು ಹೋದರೆ ಬೆಲೆ ಏರಿಕೆಗಳ ಪ್ರಶ್ನೆ ಮಾಡಿದಲ್ಲಿ ನಾವು ಉತ್ತರ ನೀಡಲು ಕಷ್ಟವಾಗುತ್ತಿದೆ ಎಂದು ಮನೆ ಬಾಗಿಲಿಗೆ ಬಂದ ಬಿಜೆಪಿ ಮುಖಂಡರಿಗೆ ಸ್ಥಳದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಸಂಗ ನಡೆದಿದೆ.

ಬಿಜೆಪಿ ಪಕ್ಷದ ಬೂತ್ ಅಧ್ಯಕ್ಷ ಶೇಖರ್ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ಬಿಜೆಪಿ ಕಾರ್ಯಕರ್ತರಿಂದಲೇ ಪಕ್ಷಕ್ಕೆ ಮುಖಭಂಗ ಆದಂತಾಗಿದೆ.

ನಗರದ ಅಶೋಕನಗರದಲ್ಲಿ ಬಿಜೆಪಿ ವತಿಯಿಂದ ವಾರ್ಡ್ ಅಧ್ಯಕ್ಷರ ಮನೆಗಳಿಗೆ ತೆರಳಿದ ಬಿಜೆಪಿ ಮುಖಂಡರು ಅವರಿಗೆ ನಾಮಫಲಕವನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ವಾರ್ಡ್ ನಂ.26ರ ಬೂತ್ ಸಂಖ್ಯೆ 199ರ ಅಧ್ಯಕ್ಷರಾಗಿದ್ದ ಶೇಖರ್ ಅವರ ಮನೆಗೆ ನಾಮಫಲಕವನ್ನು ನೀಡಲು ಬಿಜೆಪಿ ಮುಖಂಡರು ತೆರಳಿದ್ದರು. ಈ ಸಮಯದಲ್ಲಿ ನಾಮಫಲಕವನ್ನು ತಿರಸ್ಕಾರ ಮಾಡುವುದರೊಂದಿಗೆ ನಾಮಫಲಕ ನೀಡಲು ಬಂದವರ ಕೈಗೆ ಸ್ಥಳದಲ್ಲಿಯೇ ರಾಜೀನಾಮೆ ಪತ್ರವನ್ನು ಶೇಖರ್ ನೀಡಿದ್ದಾರೆ. ಇದರಿಂದ ಬಿಜೆಪಿ ಮುಖಂಡರಿಗೆ ಇರುಸು-ಮುರುಸು ಉಂಟಾಗಿದೆ.

ಘಟನೆಗೆ ಸಂಭಂದಿಸಿದಂತೆ ಪ್ರತಿಕ್ರಿಯೆ ನೀಡಿರುವ ಶೇಖರ್, ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಜನಸಾಮಾನ್ಯರಿಗೆ ಅಭಿವೃದ್ಧಿಯ ವಿಷಯವಾಗಿ ನೂರಾರು ಭರವಸೆಗಳನ್ನು ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ತನ್ನ ಹೇಳಿಕೆಗೆ ವ್ಯತಿರಿಕ್ತ ಎನ್ನುವ ಹಾಗೆ ಪೆಟ್ರೋಲ್, ಡೀಜಲ್, ಅಡುಗೆ ಅನಿಲ, ಸೇರಿದಂತೆ ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿಸಿದೆ. ಈ ಕಾರಣ ನಾವು ಜನರ ಮಧ್ಯದಲ್ಲಿ ಪಕ್ಷದ ಪರವಾಗಿ ಮಾತನಾಡಲು ಹೋದಾಗ ನಾವು ಜನರಿಗೆ ಉತ್ತರ ನೀಡಲು ಕಷ್ಟವಾಗುತ್ತಿದೆ. ಅದೆಷ್ಟೋ ಬಾರಿ ಜನರಿಂದ ಅವಮಾನಕ್ಕೆ ಒಳಗಾಗಬೇಕಾಗಿದೆ. ಈ ಕಾರಣಕ್ಕೆ ನಾನು ಬಿಜೆಪಿ ಸದಸ್ಯತ್ವ ಹಾಗೂ ಬೂತ್ ಅಧ್ಯಕ್ಷ ಸ್ಥಾನಕ್ಕೆ ಬಹಿರಂಗವಾಗಿ ಜನರ ಎದುರಲ್ಲೇ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *