ಉಡುಪಿ: ಕೇಂದ್ರದ ಬಿಜೆಪಿ ಸರಕಾರವು ಅಧಿಕಾರವಧಿಯಲ್ಲಿ ನಿರಂತರವಾಗಿ ಬೆಲೆಗಳು ಏರಿಕೆಯಾಗುತ್ತಿರುವುದನ್ನು ಖಂಡಿಸಿ ಏಳು ಎಡಪಕ್ಷಗಳು ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ ಸರಕಾರ ಕೂಡಲೇ ತೈಲ ಬೆಲೆಗಳನ್ನು ಇಳಿಕೆ ಮಾಡಬೇಕು. ಆದಾಯ ತೆರಿಗೆಯಿಂದ ಹೊರಗಿರುವ ಕುಟುಂಬಗಳಿಗೆ 10 ಸಾವಿರ ರೂ. ಸಹಾಯ ಧನ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಿ ದಿನಗೂಲಿಯನ್ನು ರೂ. 600ಕ್ಕೆ ಹೆಚ್ಚಿಸಬೇಕು. ಉಚಿತ ಹಾಗೂ ಸಾರ್ವತ್ರಿಕ ಲಸಿಕೀಕರಣಕ್ಕೆ ಕೂಡಲೇ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿ: ಬೆಲೆ ಏರಿಕೆ ತಡೆಗಟ್ಟಲು, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಜನತೆಗೆ ಸಮರ್ಪಕ ಪ್ಯಾಕೇಜ್‌ಗಾಗಿ ಶಾಸಕರಿಗೆ ಮನವಿ
ಪ್ರತಿಭಟನೆಯಲ್ಲಿ ಸಿಪಿಐ ಕಾರ್ಯದರ್ಶಿ ಸಂಜೀವ ಶೇರಿಗಾರ್, ಆರ್‌ಪಿಐ ಅಧ್ಯಕ್ಷ ಶೇಖರ್ ಹಾವಂಜೆ, ಸಿಐಟಿಯು ಜಿಲ್ಲಾಅಧ್ಯಕ್ಷ ಕೆ.ಶಂಕರ್, ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್, ಶಶಿಧರ್ ಗೊಲ್ಲ, ಎಚ್.ನರಸಿಂಹ, ಕವಿರಾಜ್ ಎಸ್., ವೆಂಕಟೇಶ್ ಕೋಣಿ, ವಿದ್ಯಾರಾಜ್, ಸದಾಶಿವ ಬ್ರಹ್ಮವಾರ, ಮಹಾಬಲ ವಡೇರಹೊಬಳಿ ಉಪಸ್ಥಿತರಿದ್ದರು.
ಕೋವಿಡ್ ಲಾಕ್‌ಡೌನ್ ದುಷ್ಪರಿಣಾಮಗಳನ್ನು ರಾಜ್ಯದ ದುಡಿಯುವ ವರ್ಗ, ವರ್ತಕರು, ಕೈಗಾರಿಕೋದ್ಯಮಿಗಳು, ಬಡವರು, ಆದಿವಾಸಿಗಳು ಅನುಭವಿಸುತ್ತಿದ್ದಾರೆ. ಜನರ ದುಸ್ಥಿತಿಗೆ ಕಾರಣರಾದ ಸರ್ಕಾರಗಳೇ ಈಗ ಸೂಕ್ತ ಪರಿಹಾರ ಪ್ಯಾಕೇಜ್ ಘೋಶಿಸಬೇಕು. ಅಗ್ಗದ ಪ್ರಚಾರ ಪಡೆಯಲು ₹ 1,423 ಕೋಟಿ ಪರಿಹಾರದ ಪ್ಯಾಕೇಜ್ ಘೋಷಿಸಲಾಗಿದೆ. ಇದರಿಂದ ಪ್ರಯೋಜನವಿಲ್ಲ ಎಂದು ಟೀಕಿಸಿದರು.
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ಮಂಗಳೂರು ಟೈಲ್ ವರ್ಕ್ ಸಿಪಿಐ(ಎಂ) ಶಾಖೆಯ ನೇತೃತ್ವದಲ್ಲಿಯೂ ಪ್ರತಿಭಟನೆಯನ್ನು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸಿಪಿಐ(ಎಂ) ಕುಂದಾಪುರ ವಲಯ ಕಾರ್ಯದರ್ಶಿ ಎಚ್. ನರಸಿಂಹ, ಸುರೇಶ್ ಕಲ್ಲಾಗರ ಮಾತನಾಡಿದರು. ಪ್ರಭಾಕರ ಟೈಲ್ಸ್ ಶಾಖೆ, ಮೂಕಾಂಬಿಕ ಟೈಲ್ಸ್ ಶಾಖೆ, ಹೆಮ್ಮಾಡಿ ಕಟ್ಟಡ ಶಾಖೆ, ಬಿ.ಸಿ. ರಸ್ತೆ ವಡೇರ ಹೋಬಳಿ ಶಾಖೆಗಳು ಕೋವಿಡ್ ನಿಯಮಗಳನ್ನು ಪಾಲಿಸಿ ಸ್ಥಳೀಯವಾಗಿ ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯಲ್ಲಿ ಪ್ರಕಾಶಕೋಣಿ, ಸುಧಾಕರ, ಸಂತೋಷ ಹೆಮ್ಮಾಡಿ, ಜಗದೀಶ ಆಚಾರ್, ನರಸಿಂಹ ಹೆಮ್ಮಾಡಿ, ಮಂಜುನಾಥ ಶೋಗನ್, ರವಿ ವಿ.ಎಂ. ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಮನೆ ಮನೆಯಲ್ಲೂ ಆಟೋ ರಿಕ್ಷಾ ಚಾಲಕರು ಸೇರಿದಂತೆ ವಿವಿಧ ವರ್ಗದ ಕಾರ್ಮಿಕರು ಪ್ರತಿಭಟನೆಯನ್ನು ನಡೆಸಿದರು.