- ಅಚಾತುರ್ಯದಿಂದ ನಡೆದ ಘಟನೆಗೆ ಕಾರ್ಮಿಕ ಮಹಿಳೆ ಗುತ್ತಿಗೆಯಿಂದ ವಜಾ
- ಶಾವಿಗೆ ಒಣಹಾಕಿದ್ದಾ ಪೋಟೋಸ್ ವೈರೆಲ್
ಬೆಳಗಾವಿ : ಕುಂದಾನಗರಿಯ ಸುವರ್ಣ ಸೌಧಕ್ಕೆ ಬಿಗಿ ಪೊಲೀಸ್ ಭದ್ರತೆ ನೀಡಿದ್ರೂ, ಇದರ ನಡುವೆ ಸೌಧದ ಮುಂದೆ ಶಾವಿಗೆ ಒಣಹಾಕಿರುವ ಫೋಟೋ ಇದೀಗ ವೈರಲ್ ಆಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಹಪ್ಪಳ, ಸಂಡಿಗೆ ಶಾವಿಗೆ ಒಣಗಿಸೋಕೆ ಸುವರ್ಣ ಸೌಧ ಬಳಕೆಯಾಗುತ್ತಿದೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಈ ಸಂಬಂಧ ಲೋಕೋಪಯೋಗಿ ಇಲಾಖೆ ಸುವರ್ಣ ವಿಧಾನಸೌಧ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುವರ್ಣಸೌಧ ಸ್ವಚ್ಛತಾ ನಿರ್ವಹಣೆ ಟೆಂಡರ್ ಪಡೆದಿದ್ದ ಗುತ್ತಿಗೆದಾರನಿಗೆ ನೋಟಿಸ್ ನೀಡಿದ್ದರು. ಈ ಸಂಬಂಧ ಗುತ್ತಿಗೆದಾರ ಕಾರ್ಮಿಕ ಮಹಿಳೆಯಿಂದ ಅಚಾತುರ್ಯವಾಗಿದ್ದು, ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ತಾನು ಮಾಡಿದ ಅಚಾತುರ್ಯದಿಂದ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದ ದಿನಗೂಲಿ ಕಾರ್ಮಿಕ ಮಹಿಳೆ ಈಗ ಕೆಲಸ ಕಳೆದುಕೊಂಡಿದ್ದಾಳೆ.
ಬೆಳಗಾವಿ ತಾಲೂಕಿನ ಹಲಗಾ ಮತ್ತು ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಲೆಂಬ ಕಾರಣಕ್ಕೆ 400ಕ್ಕೂ ಅಧಿಕ ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣಸೌಧ ನಿರ್ಮಾಣ ಮಾಡಲಾಗಿದೆ. ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಎಂದು ಸುವರ್ಣ ಸೌಧವನ್ನು ಕಟ್ಟಲಾಗಿದೆ. ಆದರೆ, ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲಾಗಿ ಶಾವಿಗೆ, ಹಪ್ಪಳ, ಸಂಡಿಗೆ ಒಣಗಿಸೋಕೆ ಈ ಸುವರ್ಣ ಸೌಧ ಬಳಕೆಯಾಗುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಹೀಗಿರುವ ಸುವರ್ಣ ವಿಧಾನಸೌಧದ ಮುಭಾಗ ಈಗ ಹಪ್ಪಳ ಸಂಡಿಗೆ ಒಣಗಿಸುವ ತಾಣವಾಗಿದೆ. ಸೌಧದ ಆವರಣದಲ್ಲಿ ಶಾವಿಗೆ ಸಂಡಿಗೆ, ಹಪ್ಪಳ ಮಾಡಿ ಒಣಹಾಕಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದೆ. ಸುವರ್ಣ ವಿಧಾನಸೌಧ ಕಟ್ಟಡವಿದ್ದರೇನಂತೆ ಉತ್ತರ ಕರ್ನಾಟಕದ ಪರಿಸ್ಥಿತಿ, ಇಲ್ಲಿನ ಜನರ ಬವಣೆ ಕೇಳುವವರಿಲ್ಲ ಎಂಬ ಮಾತು ಮತ್ತೆ ಸಾಬೀತಾದಂತೆ ಕಂಡುಬರುತ್ತಿದೆ. ಸರಕಾರ ಮುಜುಗರ ಅನುಭವಿಸುವಂತಾಗಿದೆ.
ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಬಳಿ ಯಾರೋ ಸಂಡಿಗೆ ಒಣ ಹಾಕಿರುವ ಚಿತ್ರವೊಂದು ಜಾಲತಾಣಗಳಲ್ಲಿ ಪೋಸ್ಟ್ ಆಗಿದೆ. ಇದು ಎರಡನೇ ರಾಜಧಾನಿಯಾದ ಬೆಳಗಾವಿಗೆ ಮಾಡಿದ ಅವಮಾನವಷ್ಟೇ ಅಲ್ಲ, ಈ ವಿದ್ಯಮಾನದಿಂದ ಸ್ವತಃ ರಾಜ್ಯ ಸರಕಾರ ನಗೆಪಾಟಲಿಗೀಡಾಗಿದೆ ಎಂದು ನೋಡಿದವರು ಹೇಳುತ್ತಿದ್ದಾರೆ.