ಬೆಳಗಾವಿ: ಸಚಿವ ಕೆ.ಎಸ್ ಈಶ್ವರಪ್ಪ ಅವರಿಂದ 40 ಪರ್ಸೆಂಟೇಜ್ ಕಮೀಷನ್ ಕೇಳಿದ ಆರೋಪ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಆರೋಪ ಮಾಡಿದ ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್ ಡೆತ್ ನೋಟ್ ಬರೆದಿಟ್ಟು, ತಡರಾತ್ರಿ ಮಾಧ್ಯಮಪತ್ರಿನಿಧಿಗಳಿಗೆ ತನ್ನ ಡೆಟ್ ನೋಟ್ ಕಳಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬೆದರಿಕೆ ಹಾಕಿದ್ದಾರೆ.
ನನ್ನ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಡೆಟ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದ್ದು, ಸಚಿವರ ವಿರುದ್ಧ ಶಿಕ್ಷೆಯಾಗಬೇಕು, ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು , ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.
ಡೆತ್ ನೋಟ್ ವಿಚಾರ ತಿಳಿದು ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು ಸಂತೋಷ ಪಾಟೀಲ್ ಹುಡುಕಾಟದಲ್ಲಿ ತೊಡಗಿದ್ದಾರೆ. ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮಕ್ಕೆಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಂತೋಷ್ ಎರಡು ವಾರಗಳಿಂದ ಮನೆಯತ್ತ ಸುಳಿದಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಅವರ ಲೋಕೇಶನ್ ಟ್ರೇಸ್‌ಔಟ್ ಮಾಡಲಾಗಿದ್ದು ಉಡುಪಿ ಲೋಕೇಶನ್ ತೋರಿಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.