ಬೆಳಗಾವಿ: ಬೆಳಗಾವಿ ಲೋಕಸಭೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೋಳಿ ಗೆಲುವಿವಾಗಿ ಪಕ್ಷವು ನಾನಾ ತಂತ್ರಗಳನ್ನ ರೂಪಿಸುತ್ತಿದೆ. ಅಭ್ಯರ್ಥಿಯನ್ನು ಗೆಲ್ಲಿಸಲು ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಬೆಳಗಾವಿಯಲ್ಲೆ ಬೀಡು ಬಿಟ್ಟಿದ್ದು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
ಇಂದು ಬೆಳಗಾವಿ ಕಾಂಗ್ರೆಸ್ ಕಛೇರಿಯಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಚುನಾವಣಾ ಕುರಿತು ಸಭೆಗಳನ್ನು ನಡೆಸಿದ್ದಾರೆ. ಚುನಾವಣಾ ಪ್ರಚಾರದ ಕುರಿತು ಚರ್ಚೆ ನಡೆಸಿದ್ದು ಸಭೆಯಲ್ಲಿ ಶಾಸಕರಾದ ರಾಮಲಿಂಗಾ ರೆಡ್ಡಿ, ಅಂಜಲಿ ನಿಂಬಾಳ್ಕರ್, ಎಚ್.ಎಂ. ರೇವಣ್ಣ, ಎಂ.ಬಿ ಪಾಟೀಲ್, ಮಾಜಿ ಮಂತ್ರಿ ಪ್ರಕಾಶ ಹುಕ್ಕೇರಿ ಸೇರಿದಂತೆ ಹಲವು ನಾಯಕರು ಹಾಗೂ ಉಸ್ತುವಾರಿಗಳೊಂದಿಗೆ ಸಭೆ ನಡೆಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ.
ಇದನ್ನು ಓದಿ : ಸಾರಿಗೆ ನೌಕರರ ಮುಷ್ಕರ : ಕ್ವಾಟ್ರಸ್ ಖಾಲಿ ಮಾಡುವಂತೆ ನೋಟಿಸ್
ಕಾಂಗ್ರೆಸ್ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರಕಾರವು ಜಾರಿಗೆ ತಂದಿರುವ ರೈತರಿಗೆ ಮಾರಕವಾದ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ದೊಡ್ಡ ಆಂದೋಲವೇ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದೆ ಇರುವುದಕ್ಕೆ ಜನತೆಯಲ್ಲಿ ಆಕ್ರೋಶವಿದೆ. ಬಿಜೆಪಿ ಅನೀತಿಯ ವಿರುದ್ಧ ಆಕ್ರೋಶಗೊಂಡಿರುವ ರೈತರು ನಮಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.
ಮುಂದುವರೆದು ಮಾತನಾಡಿದ ಡಿ ಕೆ ಶಿವಕುಮಾರ್ “ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕಮ್ಯುನಿಸ್ಟ್ ಪಕ್ಷಗಳ ನಾಯಕರು, ರೈತ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸುತ್ತಿದ್ದೇನೆ. ಸತೀಶ್ ಜಾರಕಿಹೊಳಿಗೆ ಬೆಂಬಲ ನೀಡುವುದಾಗಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರೈತ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಮಸ್ಕಿ, ಬೆಳಗಾವಿ ಹಾಗೂ ಬಸವಕಲ್ಯಾಣದಲ್ಲಿ ರೈತರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಇದನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದ್ದೇವೆʼʼ ಎಂದು ಹೇಳಿದರು.
‘ರಾಜ್ಯ ಸಾರಿಗೆ ನೌಕರರನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಾರಿಗೆ ನೌಕರರ ಮುಷ್ಕರಕ್ಕೆ ನಮ್ಮ ಬೆಂಬಲವಿದೆ. ಅವರು ಹೋರಾಟ ಮೊಟಕುಗೊಳಿಸಬಾರದು. ಸರ್ಕಾರ ಅವರ ನೋವನ್ನು ಕೇಳಬೇಕು. ಸಮಸ್ಯೆ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.
ಇದನ್ನು ಓದಿ : ರಫೇಲ್ ಹಗರಣ : ಕೇಂದ್ರ ಸರಕಾರದ ಮೇಲೆ ತೂಗುಕತ್ತಿ
ಜಾತಿ ರಾಜಕಾರಣ ಕುರಿತು ಮಾತನಾಡಿದ ಡಿ ಕೆ ಶಿವಕುಮಾರ್ ಲಿಂಗಾಯತರು ನಮ್ಮವರೇ. ಮರಾಠರು ನಮ್ಮ ಅಣ್ಣ-ತಮ್ಮಂದಿರಂತೆ. ನಮಗೆ ಎಲ್ಲರೂ ಒಂದೇ. ಬಿಜೆಪಿಯವರೇ ಅವರನ್ನು ಬೇರೆ ಬೇರೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಹಕ್ಕು ಹೊಂದಿರುವ ಎಲ್ಲರೂ ಒಂದೇ. ನಾವೂ ಜಾತಿ ಮೇಲೆ ರಾಜಕಾರಣ ಮಾಡಲ್ಲ. ನೀತಿ ಮೇಲೆ ಮಾಡುತ್ತೇವೆ” ಎಂದರು.
ಬೆಳಗಾವಿಗೆ ಕಾಂಗ್ರೆಸ್ ಕೊಡುಗೆ ಬಗ್ಗೆ ಮಾತನಾಡಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗೆ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು. ಮಾತನಾಡಲು ಶಕ್ತಿ ಕೊಟ್ಟಿದ್ದೇ ನಾವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಸಂಘ–ಸಂಸ್ಥೆ, ಕಾರ್ಖಾನೆ ಮಾಡಿಕೊಳ್ಳಲು ಬಲ ನೀಡಿದವರೆ ನಾವು ʼʼ ಎಂದು ಹೇಳಿಕೆ ನೀಡಿದರು.
ಇದನ್ನು ಓದಿ : ಅಭಿವ್ಯಕ್ತಿಯ ನಿಷೇಧ ಸಂಸ್ಕೃತಿಯ ಅವಾಂತರಗಳು
ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ‘ಲಿಂಗಾಯತ ಸಮುದಾಯದ ಮತ ಸೆಳೆಯಲು ತಂತ್ರ ರೂಪಿಸಲಾಗುತ್ತಿದೆ. ಲಕ್ಷ್ಮಿ ಹೆಬ್ಬಾಳಕರ್, ನಾನು, ಎ.ಬಿ. ಪಾಟೀಲ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರೂ ಪ್ರಚಾರಕ್ಕೆ ಬರಲಿದ್ದಾರೆ. ಆಗ ಮತ್ತಷ್ಟು ಬಲ ಬರುತ್ತದೆ. ಬಿಜೆಪಿ ಸರ್ಕಾರದಿಂದಾಗಿ ಒಳ್ಳೆಯ ದಿನಗಳು ಬಂದಿಲ್ಲ. ಇದನ್ನು ಜನರು ಅರಿತಿದ್ದಾರೆ’ ಎಂದು ಹೇಳಿದರು.
ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಿತು. ಮುಖಂಡರಾದ ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ, ಎಂ.ಬಿ. ಪಾಟೀಲ, ಪ್ರಕಾಶ ಹುಕ್ಕೇರಿ, ಎ.ಬಿ. ಪಾಟೀಲ, ಎಚ್.ಎಂ. ರೇವಣ್ಣ, ವೀರಣ್ಣ ಮತ್ತಕಟ್ಟಿ, ಅಂಜಲಿ ನಿಂಬಾಳ್ಕರ್, ಕುಸುಮಾ ಶಿವಳ್ಳಿ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.