ಬೆಳಗಾವಿ: ಸೇನಾ ನೇಮಕಾತಿಯ ಹೊಸ ನಿಯಮಗಳನ್ನು ಬದಲಾವಣೆ ಮಾಡಿದ ಕೇಂದ್ರದ ಬಿಜೆಪಿ ಸರ್ಕಾರವು ಅಗ್ನಿಪಥ ಯೋಜನೆ ಜಾರಿಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಉತ್ತರ ಭಾರತದಿಂದ ಆರಂಭವಾದ ಪ್ರತಿಭಟನೆಯ ಕಿಚ್ಚು, ಕರ್ನಾಟಕಕ್ಕೂ ಹಬ್ಬಿದ್ದು, ರಾಜ್ಯದ ಬೆಳಗಾವಿ ಜಿಲ್ಲಾದ್ಯಂತ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದೆ.
ಅಗ್ನಿಪಥ ಯೋಜನೆ ಹಿಂಪಡೆಯುವಂತೆ ಸೇನಾ ಆಕಾಂಕ್ಷಿ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ಯುವಜನತೆ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಗೋಕಾಕ್ ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಧರಣಿ ನಡೆಸಿದ್ದಾರೆ. ಗೋಕಾಕ್ ನಗರ, ಸುತ್ತಮುತ್ತಲಿನ ಸೇನಾ ಆಕಾಂಕ್ಷಿ ಯುವಕರು ಅಗ್ನಿಪಥ ಯೋಜನೆ ಯುವ ಸಮೂಹದ ಆತ್ಮಹತ್ಯೆಗೆ ಕಾರಣವಾಗಿದೆ. ಕೋಟ್ಯಂತರ ಯುವಕರ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟ ಆಡುತ್ತಿದೆ. ಇದರಿಂದ ದೇಶದಲ್ಲಿ ಮತ್ತಷ್ಟು ನಿರುದ್ಯೋಗ ಸಮಸ್ಯೆಗಳು ತಲೆದೋರುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣ ಮಲಪ್ರಭಾ ಮೈದಾನದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಸಾವಿರಾರು ಯುವಕರು ಸೇರಿದ್ದರು. ಈ ವೇಳೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಮಲಪ್ರಭಾ ಕ್ರೀಡಾಂಗಣದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು ಮತ್ತು ಸೇನಾ ನೇಮಕಾತಿ ಹೊಸ ನಿಯಮ ಅಗ್ನಿಪಥ ಕೈಬಿಡುವಂತೆ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಜೂನ್ 20ರಂದು ಖಾನಾಪುರ ಬಂದ್ಗೂ ಕರೆ ನೀಡಿದ್ಧಾರೆ.
ನಿಪ್ಪಾಣಿ ಪಟ್ಟಣದಲ್ಲಿ ಯುವಕರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಕ್ಷಣವೇ ಅಗ್ನಿಪಥ ಯೋಜನೆ ಹಿಂಪಡೆಯಬೇಕು ಎಂದು ಭಾರತೀಯ ಸೇನೆ ಸೇರುವ ಆಕಾಂಕ್ಷಿ ಯುವಕರು ಆಗ್ರಹಿಸಿದರು. ಪ್ರತಿಭಟನೆ ನಡೆಯುವ ಸ್ಥಳಗಳಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಅಗ್ನಿಪಥ ಯೋಜನೆ ಜಾರಿಗೆ ತರಬಾರದು ಎಂದು ಸೇನಾ ಆಕಾಂಕ್ಷಿ ಯುವಕರು ಒತ್ತಾಯಿಸಿದರು.
ಧಾರವಾಡದಲ್ಲೂ ಆಕ್ರೋಶ ವಿರೋಧ: ಪೊಲೀಸರಿಂದ ಲಘು ಲಾಠಿ ಪ್ರಹಾರ
ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ಧಾರವಾಡದಲ್ಲಿಯೂ ತ್ರೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ, ಯುವಜನತೆ ಪ್ರತಿಭಟನೆಗೆ ಸಜ್ಜಾದರು. ಈ ನಡುವೆ, ಪೊಲೀಸರ ಹಾಗೂ ಪ್ರತಿಭಟನಾಕಾರರು ವಾಗ್ವಾದಕ್ಕೆ ಇಳಿದರು. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡದ ಸುಮಾರು 200 ಯುವಕರು ಅಗ್ನಿಪಥ ಯೋಜನೆ ವಿರೋಧಿಸಿ ರ್ಯಾಲಿ ನಡೆಸಿದರು. ಬಸ್ ಮೇಲೆ ಕಲ್ಲು ತೂರಾಟ ನಡೆಯಿತು. ಉದ್ರಿಕ್ತ ಯುವಕರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು, ಧಾರವಾಡದ ಕಲಾಭವನದಿಂದ ಹಳೆ ಡಿಎಸ್ಪಿ ಸರ್ಕಲ್ ವರೆಗೆ ರ್ಯಾಲಿ ನಡೆಸಲಾಗಿದೆ.
ಧಾರವಾಡದ ನಾಯ್ಕ ಅಡ್ಡಾ ಸರ್ಕಲ್ ಬಳಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದರಿಂದ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಮನವಿಗೆ ಬಗ್ಗದ ಯುವಕರು ಕಲಾಭವನ ಮೈದಾನಕ್ಕೆ ಮೆರವಣಿಗೆ ನಡೆಸುವುದಾಗಿ ಪಟ್ಟು ಹಿಡಿದರು. ಈ ವೇಳೆ, ಪೊಲೀಸರು ಮತ್ತು ಯುವಕರ ಮಧ್ಯೆ ವಾಗ್ವಾದ ನಡೆದಿದೆ. ಕೆಲ ಯುವಕರು ತಳ್ಳಾಟ ನಡೆಸಿದ್ದರಿಂದ ಲಘು ಲಾಠಿ ಪ್ರಹಾರ ಮಾಡಿ ಕೆಲವರನ್ನ ವಶಕ್ಕೆ ಪಡೆದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಮಾಧ್ಯಮದವರೊಂದಿಗೆ ಮಾತನಾಡಿ, ಗಲಾಟೆ ಸಂಬಂಧ 30 ಜನರನ್ನು ವಶಕ್ಕೆ ಪಡೆಯಲಾಗಿದೆ. ಕೆಲ ಪ್ರತಿಭಟನಾ ಯುವಕರು ಬೆಳಗ್ಗೆಯಿಂದಲೇ ಸೇರಿದ್ದರು. ಪೊಲೀಸರು ಅವರಿಗೆ ಮನವೊಲಿಸಿದರು. ಆಗ ಯುವಕರು ಮನವಿ ಕೊಡುತ್ತೇವೆ ಎಂದರು. ಎಡಿಸಿ ಆಗಮಿಸಿ ಮನವಿ ಸ್ವೀಕರಿಸಿದ ಬಳಿಕವೂ ಅಲ್ಲಿಂದ ಹೋಗದ ಕಾರಣ ಈಗ 30 ಜನರನ್ನು ವಶಕ್ಕೆ ಪಡೆದಿದ್ದೇವೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ತಪ್ಪಿಸಿಕೊಂಡ ಯುವಕರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.