ಸರಕಾರದ ವೈಫಲ್ಯವೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ – ಡಿಕೆ ಶಿವಕುಮಾರ್

ರಾಹುಕಾಲದಲ್ಲಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ 

ಬೆಳಗಾವಿ : ಸರಕಾರದ ವೈಫಲ್ಯವೇ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಹಕಾರಿಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬೆಳಗಾವಿ ಉಪಚುನಾವಣೆ ಬರಬಾರದಿತ್ತು. ಆಕಸ್ಮಿಕವಾಗಿ ಬಂದಿದೆ. ಸುರೇಶ್ ಅಂಗಡಿ ಅವರ ಅಕಾಲಿಕ ಮರಣ ಈ ಚುನಾವಣೆ ತಂದಿದೆ. ಚುನಾವಣೆ ಬಹಳ ನಿಧಾನವಾಗಿದೆ. ಕಾಂಗ್ರೆಸ್ ಇಡೀ ಕ್ಷೇತ್ರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿದೆ. ಸೋಮುವಾರ ಹನ್ನೊಂದು ಗಂಟೆಗೆ ಸತೀಶ್ ಜಾರಕಿಹೊಳಿಯವರು ನಾಮ ಪತ್ರ ಸಲ್ಲಿಸುತ್ತಾರೆ. ಅದಕ್ಕೆ ನಾವು ಬಂದಿದ್ದೇವೆ. ಉತ್ತಮ ಜನ ಬೆಂಬಲ, ಜನರ ಸೇವೆ, ಯುವಕರ ಬಗ್ಗೆ ಕಾಳಜಿ, ಎಲ್ಲ ವರ್ಗದ ಜತೆ ಹೊಂದಿಕೊಂಡು ಬಾಳುವ ಸೌಮ್ಯ, ಸಜ್ಜನ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಕೊಟ್ಟಿದೆ. ಸತೀಶ್ ಅವರನ್ನು ಸಂಸತ್ತಿಗೆ ಕಳುಹಿಸಬೇಕು ಅಂತಾ ಇಡೀ ನಮ್ಮ ಬೆಳಗಾವಿಯ ಜನ ಒಕ್ಕೊರಲಿನಿಂದ ಆಶೀರ್ವಾದ ಮಾಡುತ್ತಾರೆ ಎಂದರು.

ಬಿಜೆಪಿ ಸರ್ಕಾರದ ವೈಫಲ್ಯವೇ ಕಾಂಗ್ರೆಸ್ ಪಕ್ಷದ ಯಶಸ್ಸಾಗುತ್ತದೆ. ನುಡಿದಂತೆ ನಡೆಯಲು ಬಿಜೆಪಿಗೆ ಆಗಲಿಲ್ಲ. ಕೊರೊನಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆಯಲಿಲ್ಲ. 20 ಲಕ್ಷ ಕೋಟಿ ಕೊಟ್ಟಿದ್ದೇವೆ ಅಂತಾರೆ. ಆದರೆ ಒಬ್ಬರಿಗೂ ಅದು ತಲುಪಲಿಲ್ಲ. ಎಲ್ಲ ವರ್ಗದ ಜನರಿಗೆ ಒಂದು ತಿಂಗಳು 5 ಸಾವಿರ ಕೊಡುವುದಾಗಿ ಹೇಳಿದ್ದರು, ಅದನ್ನೂ ಕೊಟ್ಟಿಲ್ಲ. ಚಾಲಕರು, ರೈತರು, ಸವಿತಾ ಸಮಾಜ, ನೇಯ್ಗೆಯವರಿಗೆ, ಬಟ್ಟೆ ಹೊಲಿಯುವವರಿಗೆ ಯಾರಿಗೂ ನೀಡಲಿಲ್ಲ ಎಂದು ಕೇಂದ್ರ ರಾಜ್ಯ ಸರಕಾರಗಳ ಮೇಲೆ ವಾಗ್ದಾಳಿ ನಡೆಸಿದರು.

ಕರ್ನಾಟಕದಿಂದ 25 ಮಂದಿ ಬಿಜೆಪಿಯವರು ಸಂಸತ್ತಿಗೆ ಹೋಗಿದ್ದರೂ ಒಂದು ದಿನವೂ ಅವರು ರಾಜ್ಯದ ಪರ ಧ್ವನಿ ಎತ್ತಿಲ್ಲ. ಹೀಗಾಗಿ ರಾಜ್ಯದಿಂದ ಕಾಂಗ್ರೆಸ್ ನ ಎರಡನೇ ಸಂಸದರಾಗಿ ಸತೀಶ್ ಆಯ್ಕೆಯಾಗುತ್ತಾರೆ ಎಂಬ ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಡಿಕೆಶಿ ಮುಗುಳ್ನಕ್ಕರು.

ಇದನ್ನೂ ಓದಿ : ಮೂರೂ ಕ್ಷೇತ್ರಗಳಲ್ಲಿ ಫ‌ಲಿತಾಂಶದ ಮೇಲೆ ಜಾತಿ ರಾಜಕಾರಣ, ಸಿ.ಡಿ. ಪ್ರಕರಣ ಪ್ರಭಾವ ಬೀರುವ ಸಾಧ್ಯತೆಗಳಿವೆ. 

ರಾಹುಕಾಲದಲ್ಲಿ ನಾಮಪತ್ರ ಸಲ್ಲಿಕೆ : ಮೂಢನಂಬಿಕೆಗಳಿಗೆ ಕಿವಿಗೊಡದ ಸತೀಶ್ ಜಾರಕಿಹೊಳಿ ಈ ಬಾರಿಯೂ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಹಲವು ವಿಧಾನಸಭಾ ಚುನಾವಣೆಯಲ್ಲಿ ರಾಹುಕಾಲದಲ್ಲೆ ನಾಮಪತ್ರವನ್ನು ಸಲ್ಲಿಸಿ ಗೆಲುವು ಸಾಧಿಸಿದ್ದರು. ಉತ್ತರ ಕರ್ನಾಟಕದಲ್ಲಿ ಹೋಳಿಹುಣ್ಣಿಮೆಯ ದಿನವನ್ನು ಕೆಟ್ಟಕರಿ ಎಂದು ಕರೆಯುತ್ತಾರೆ, ಅಂದು ಶುಭ ಕಾರ್ಯ ಮಾಡಲು ಇಲ್ಲಿನ ಬಹುತೇಕರು ಬಯಸುವುದಿಲ್ಲ. ನಾಮಪತ್ರ ಸಲ್ಲಿಕೆಗೆ ಸತೀಶ ಅವರು ಈ ದಿನವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ವಿಶೇಷ ಗಮನವನ್ನು ಸೆಳೆದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ‘ ಹಿಂದಿನಂತೆಯೇ ಯಾವುದೇ ಆಡಂಬರ, ಮೆರವಣಿಗೆ ಮಾಡದೆ ಅತ್ಯಂತ ಸರಳವಾಗಿ ಪಕ್ಷದ ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಾರದು’ ಎಂದು ಕೋರಿದ್ದಾರೆ. ಕರಿ ದಿನವೆಂದರೆ ಇಡೀ ದಿನ ರಾಹುಕಾಲ ಇದ್ದಂತೆಯೇ. ಅದರಲ್ಲೆಲ್ಲಾ ನನಗೆ ನಂಬಿಕೆ ಇಲ್ಲ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಕಾಲ. ಕೆಟ್ಟ ಕೆಲಸ ಮಾಡಿದರೆ ಕೆಟ್ಟ ಕಾಲವಷ್ಟೆ’ ಎಂದು ಪ್ರತಿಕ್ರಿಯಿಸಿದರು.

Donate Janashakthi Media

One thought on “ಸರಕಾರದ ವೈಫಲ್ಯವೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ – ಡಿಕೆ ಶಿವಕುಮಾರ್

  1. ಸತೀಶ್ ಜಾರಕಿಹೊಳಿಯವರಂತಹ ಪ್ರಗತಿಪರರು ಇಂದಿನ ಮೌಢ್ಯ ಬಾಧಿತ ಸಮಾಜಕ್ಕೆ ಹೆಚ್ಚು ಬೇಕಾಗಿದ್ದಾರೆ.

Leave a Reply

Your email address will not be published. Required fields are marked *