ಬೆಂಗಳೂರು: ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕ ಯೋಗೇಂದ್ರ ಯಾದವ್ ಪರ್ಯಾಯ ಬಜೆಟ್ ಅಧಿವೇಶನ ಉದ್ಘಾಟಿಸಿ ಮಾತನಾಡಿ, ಈಗಲೂ ನಾವು ಬೆಳದ ಬೆಳೆಗಳಿಗೆ ನ್ಯಾಯಯುತವಾದ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಕೇಳುತ್ತಿದ್ದೇವೆ. ದೇಶದ ರೈತರ ಆಗ್ರಹವಾದ ಕನಿಷ್ಠ ಅವಶ್ಯಕತೆಗಳನ್ನು ಪೂರೈಸದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದರು.
ಇಂದಿನಿಂದ ಮೂರು ದಿನಗಳು ನಡೆಯಲಿರುವ ಜನ ಪರ್ಯಾಯ ಬಜೆಟ್ ಅಧಿವೇಶನದಲ್ಲಿ ಅವರು ಮಾತನಾಡಿ ಎಂಎಸ್ಪಿ ಇರುತ್ತದೆ, ಇರಲಿದೆ ಎಂದು ಪ್ರಧಾನಿ ಮೋದಿ ಹೇಳಿತ್ತಾರೆ. ನಾವು ಸಹ ಅದನ್ನೇ ನಮಗೆ ನ್ಯಾಯಯುತವಾದ ಬೆಲೆಗಳನ್ನು ನೀಡಿ ಎಂದು ಕೇಳುತ್ತಿರುವುದು ಎಂದು ಹೇಳಿದರು. ನೇಗಿಲಯೋಗಿ ರೈತ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಮಾತನಾಡಿ, ಕರ್ನಾಟಕ ಸರಕಾರ ರೈತರ ಜೊತೆ ಕೆಟ್ಟದಾಗಿ ವರ್ತನೆ ಮಾಡುತ್ತಿದೆ. ಕಾರ್ಪೋರೇಟ್ ಕಂಪನಿಗಳ ಗುಲಾಮರಂತೆ ಸರಕಾರ ವರ್ತನೆ ಮಾಡುತ್ತಿದೆ. ಆಳುವವರ ನೀತಿಯಿಂದಾಗಿ, ಸಾಲು ಸಾಲು ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳು ಜನರ ವಿರುದ್ಧ ಇರುವ ಕಾಯ್ದೆಗಳು ಎನ್ನುವುದಾದರೆ, ಇವುಗಳು ಸ್ಪಷ್ಟವಾಗಿ ಈ ದೇಶದ ದೊಡ್ಡ ದೊಡ್ಡ ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳ ದುರಾಸೆಯನ್ನು ತೃಪ್ತಿಪಡಿಸಲು ಜಾರಿಗೆ ತರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಮಾತನಾಡಿ, ರೈತ ವಿರೋಧಿಯಾದ ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳ ರದ್ದತಿಯಾಗಬೇಕು. ವಿದ್ಯುತ್ ಖಾಸಗೀಕರಣ ಮಸೂದೆಯ ವಾಪಸು ಪಡೆಯಬೇಕು. ಎಲ್ಲಾ ಅಗತ್ಯ ದವಸಧಾನ್ಯಗಳೂ ದೊರಕುವಂತೆ ಪಡಿತರ ವ್ಯವಸ್ಥೆಯ ವಿಸ್ತರಣೆ ಮತ್ತು ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಯಾಗಬೇಕೆಂದು, ಖಾಸಗೀ ಕೃಷಿ ಮಾರುಕಟ್ಟೆಗಳಿಗೆ ನೀಡಿರುವ ಪರವಾನಗಿಗಳ ರದ್ದತಿ ಆಗಬೇಕು ಎಂದು ಹೇಳಿದರು.
ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ಖಂಡಿಸುವುದರೊಂದಿಗೆ, ಉದ್ಯೋಗ ಭದ್ರತೆ ಮತ್ತು ಕನಿಷ್ಟ 21,000 ವೇತನವನ್ನು ಸಾರ್ವತ್ರಿಕಗೊಳಿಸಲು ಒತ್ತಾಯಿಸಲಾಗುತ್ತಿದೆ. ಮಹಿಳೆಯರು ಮತ್ತು ದಲಿತರ ಮೇಲಿನ ಹಿಂಸೆಯನ್ನು ತಡೆಗಟ್ಟಲು, ಸರ್ಕಾರಿ, ಅರಣ್ಯ ಭೂಮಿಯಲ್ಲಿ ಉಳುಮೆ ಅಥವ ವಾಸವಿರುವ ಎಲ್ಲಾ ಬಡವರಿಗೆ ಕೂಡಲೇ ಭೂಮಿ – ವಸತಿ ಮಂಜೂರು ಮಾಡಲು ಮತ್ತು ಪರಿಶಿಷ್ಟ ಜಾತಿ(ಎಸ್.ಸಿ.) – ಪರಿಶಿಷ್ಟ ಪಂಗಡ (ಎಸ್.ಟಿ.) ಅಭಿವೃದ್ಧಿ ನಿಧಿಯ ದುರ್ಬಳಕೆ ತಡೆಯಬೇಕೆಂದು ಜನ ಪರ್ಯಾಯ ಬಜೆಟ್ ಅಧಿವೇಶನದಲ್ಲಿ ಒಕ್ಕೊರಲಿನಿಂದ ಆಗ್ರಹಿಸಿದರು.
ಆಳುವ ಸರ್ಕಾರಗಳಿಗೆ ಜನ ಪರವಾದ ಯಾವ ಚಿಂತನೆಯೂ ಇಲ್ಲ, ಎಲ್ಲಾ ಬೊಗಳೆ. ಹಾಗಾಗಿ ಜನ ಸಾಮಾನ್ಯರಾದ ನಾವು ನಮ್ಮದೇ ಆದ ‘ಜನಪರ್ಯಾಯ ಬಜೆಟ್ ಅಧಿವೇಶನವನ್ನು’ ಹಮ್ಮಿಕೊಂಡಿದ್ದೇವೆ. ಜನ ಪರ್ಯಾಯ ಅಧಿವೇಶನದ ತೀರ್ಮಾನಗಳನ್ನು ಆಳುವ ಸರ್ಕಾರಕ್ಕೂ, ವಿರೋಧ ಪಕ್ಷದ ಮುಖಂಡರಿಗೂ ಮಂಡಿಸಲು ಈ ಜನತಾ ಅಧಿವೇಶನದ ಉದ್ದೇಶವಾಗಿದೆ. ಎಂದು ಸಂಯುಕ್ತ ಕರ್ನಾಟಕ – ಹೋರಾಟ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಯಕರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರೈತ ನಾಯಕರಾದ ಕವಿತಾ ಕುರಗಂಟಿ, ಬಡಗಲಪುರ ನಾಗೇಂದ್ರ, ವೀರ ಸಂಗಯ್ಯ, ದಲಿತ ಸಂಘಟನೆಯ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ಗೋಪಾಲಕೃಷ್ಣ ಅರಳಹಳ್ಳಿ, ಕಾರ್ಮಿಕ ನಾಯಕರಾದ ಮೀನಾಕ್ಷಿ ಸುಂದರಂ, ಕೆ.ವಿ ಭಟ್, ಡಿ.ಎಚ್. ಪೂಜಾರ್, ಕುಮಾರ್ ಸಮತಳ, ಮಹಿಳಾ ಸಂಘಟನೆ ದೇವಿ ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಮಂದಿ ರೈತರು-ಕಾರ್ಮಿಕರು ಅಧಿವೇಶನದಲ್ಲಿ ಹಾಜರಿದ್ದರು.