ಸಮಾನತೆಯ ಆಶಯಗಳನ್ನು ನಾಶ ಮಾಡುತ್ತಿರುವ ಮೂಲಭೂತ ವಾದಿಗಳು ಮನುಷ್ಯರಿಗೆ
ಬೆಂಗಳೂರು: ಈ ದೇಶದ ಕಟ್ಟಕಡೆಯ ಮನುಷ್ಯರಿಗೆ ಮೊಟ್ಟ ಮೊದಲ ಆದ್ಯತೆ ಸಿಗುವಂತಾಗಬೇಕು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಗುರುವಾರ ಹೇಳಿದರು. ಅವರು ನಗರದ ಕೊಂಡಜ್ಜಿ ಬಸ್ಸಪ್ಪ ಭವನದಲ್ಲಿ ನಡೆದ ದಲಿತರ ಶೃಂಗಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮಲ್ಲಿ ಮಾತನಾಡಿದ ಅವರು, “ಅಂಬೇಡ್ಕರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾರೆ ಎಂದರೇ ಕೋಮುವಾದಿಗಳು ಎಷ್ಟೊಂದು ಬಲಿಷ್ಠರಾಗುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ. ಕೋಮುವಾದವನ್ನು ನಾಶ ಮಾಡುವತ್ತ ದಲಿತರ ಶೃಂಗ ಸಭೆ ಮಹತ್ವದ ನಿರ್ಣಯವನ್ನು ಕೈಗೊಳ್ಳುವಂತಾಗಲಿ” ಎಂದು ಆಶಿಸಿದರು.
“ಗಾಂಧಿ ಕೊಂದವರು, ಸಂವಿಧಾನ ವಿರೋಧಿಸುವವರು, ಅಂಬೇಡ್ಕರ್ ವಿರುದ್ಧ ಘೋಷಣೆ ಕೂಗುವವರು ಒಂದೇ ಮನೋಧರ್ಮದವರಾಗಿದ್ದಾರೆ. ಇಂತಹ ಮನೋ ಧರ್ಮವೇ ದಲಿತರನ್ನು, ಕಾರ್ಮಿಕರನ್ನು, ರೈತರನ್ನು, ಕೂಲಿಕಾರರನ್ನು ವಿರೋಧಿಸುತ್ತಾ ಬಂದಿದೆ” ಎಂದು ಪ್ರೋ. ಬರಗೂರು ಹೇಳಿದರು.
ಇದನ್ನೂ ಓದಿ:ಬದುಕುವ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡೋಣ : ಪ್ರೊ.ಬರಗೂರು ರಾಮಚಂದ್ರಪ್ಪ
“ಸಮಾನತೆಯ ಆಶಯಗಳನ್ನು ಪಲ್ಲಟಗೊಳಿಸುವ ಇಂತಹ ಮನೋಧರ್ಮದವರಿಂದ ಸಮಾಜವನ್ನು ಜಾಗೃತಗೊಳಿಸಲು ಎಡಪಂಥ ಹಾಗೂ ದಲಿತ ಪ್ರಜ್ಞೆ ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿದೆ. ಜಾತಿ ವಿನಾಶದ ಜಾಗವನ್ನು ಜಾತಿವಾದ ಆಕ್ರಮಿಸಿಕೊಂಡಿದೆ. ಸಾಮಾಜಿಕ ವಿವೇಕದ ಜಾಗವನ್ನು ಆರ್ಥಿಕ ಅವೀವಕ ಆವರಿಸಿಕೊಂಡಿದೆ. ಮಾನವೀಯತೆ ಜಾಗಕ್ಕೆ ಮತೀಯತೆ ಬಂದಿದೆ. ರಾಷ್ಟ್ರೀಕರಣ ಜಾಗವನ್ನು ಖಾಸಗೀಕರಣ ಆಕ್ರಮಿಸಿಕೊಂಡಿದೆ. ಸಂಘಟನೆ ಜಾಗಕ್ಕೆ ವಿಘಟನೆ ಆವರಿಸಿಕೊಂಡಿರುವುದು ಆತಂಕದ ವಿಚಾರ” ಎಂದರು.
“ವರ್ಣಾಶಾಹಿ ವಿರುದ್ಧ ಅಂಬೇಡ್ಕರ್ ಹಿಡಿದ ಬೊಗಸೆ ನೀರು, ಸಾಮ್ರಾಜ್ಯಶಾಹಿ ವಿರುದ್ಧ ಗಾಂಧೀಜಿ ಹಿಡಿದ ಬೊಗಸೆ ಉಪ್ಪು ಚಾರಿತ್ರಿಕ ಹೋರಾಟವಾಗಿದೆ. ಈ ಎರಡು ಹೋರಾಟಗಳ ಆಶಯವನ್ನು ಹೋರಾಟಗಾರರು ಅರಿಯಬೇಕು” ಎಂದು ಅವರು ಹೇಳಿದರು.
ವೇದಿಕೆಯ ಮೇಲೆ ಹೈದರಾಬಾದ್ ದಲಿತ ಅಧ್ಯಯನ ಕೇಂದ್ರದ ಮಲ್ಲಪಲ್ಲಿ ಲಕ್ಷ್ಮಯ್ಯ, ಬಿಹಾರ ಶಾಸಕ ಮನೋಜ್ ಮಂಜಿಲ್, ಕೃಷಿ ಕೂಲಿಕಾರ ಸಂಘಟನೆಯ ಜಿ. ವೆಂಕಟ್, ಚಿಂತಕರಾದ ಸಿದ್ದನಗೌಡ ಪಾಟೀಲ್, ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಶೇಖಮ್ಮ, ದೇವದಾಸಿ ವಿಮೋಚನಾ ಸಂಘದ ಬಿ. ಮಾಳಮ್ಮ, ರೇಣುಕಮ್ಮ, ಚಂದ್ರಪ್ಪ ಹೊಸ್ಕೇರಾ, ಪುಟ್ಟಮಾದು, ಶಿವಶಂಕರ್, ಸೋಲಂಕಿ, ಧರ್ಮರಾಜ್ ಇದ್ದರು.
ಪ್ರಾಸ್ತಾವಿಕವಾಗಿ ಮಹೇಶ್ ರಾಠೋಡ್ ಮಾತನಾಡಿದರು. ನಾಗರಾಜ್ ಪೂಜಾರ್ ಕಾರ್ಯಕ್ರಮದ ನಿರೂಪಣೆಮಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ಮನುಷ್ಯರಿಗೆ
ವಿಡಿಯೋ ನೋಡಿ:ರಾಜ್ಯ ಮಟ್ಟದ ದಲಿತರ ಬೃಹತ್ ಶೃಂಗಸಭೆ