– ನಾ ದಿವಾಕರ
ಮಾತು ಮೌನವಾಗುವ ಮುನ್ನ
ಅವಳ ಬಡಬಡಿಕೆಯೇ ನಿನ್ನಳಲು
ದೂಡಿಬಿಟ್ಟೆ ಮಾತಿಲ್ಲದ ಕೂಪದೊಳಗೆ
ಅಲ್ಲೂ ತೆರೆದ ಕಿವಿಗಳಿವೆಯಲ್ಲಾ
ಹೊರದಬ್ಬಿದರೆತ್ತ ಹೋದಾಳೋ ದುರುಳ
ಮೊಲೆಹಾಲು ಕುಡಿದವನಿಗೇ ಬೇಡವಾದವಳು
ದಾರಿಹೋಕರಿಗೆಂತು ಬೇಕಾಗುತಾಳೋ !
ತೊಟ್ಟಿಲಲಿ ನೀ ಹೇತಾಗ
ಮಡಿಲಿಗೆ ಉಚ್ಚೆಯ ಬಿಸಿ ತಾಕಿದಾಗಲೂ
ಅವಳು ಹೀಗೇ ಬಡಬಡಿಸುತ್ತಲೇ
ಅಂಡುತೊಳೆದು ಲಾಲಿ ಹಾಡುತ್ತಿದ್ದಳಲ್ಲವೇ ?
ನಿನ್ನ ಎಳೆ ಮೈ ಸುಟ್ಟು ನಡುಗುತಿದ್ದಾಗ
ಅನ್ನಾಹಾರಗಳ ಬಿಟ್ಟು ಲಾಲಿಸಿದಾಗಲೂ
ಅವಳು ಹೀಗೇ ಬಡಬಡಿಸುತ್ತಿದ್ದಳಲ್ಲವೇನೋ ?
ದುಡಿಮೆಯ ಬೆವರ ಲೆಕ್ಕಿಸದೆ
ಶಾಲೆಯ ಹೊರೆಯಿಳಿಸಿ ಮೈತೊಳೆದು
ಕ್ರಾಪು ತೀಡಿ ಹಣೆಗೊಂದು ಬೊಟ್ಟಿಟ್ಟು
ನಿನ್ನ ತೊದಲು ಪ್ರಶ್ನೆಗಳಿಗುತ್ತರಿಸಿದಾಗಲೂ
ಅವಳು ಹೀಗೇ ಬಡಬಡಿಸುತ್ತಿದ್ದಳಲ್ಲವೇನೋ ?
‘ ಅಮ್ಮಾ,,, ಹ~~~,” ಎಂದಾಕ್ಷಣ
ಹಸಿದಬಾಯಿಗೆ ತುರುಕಿ ತುರುಕಿ ತಿನ್ನಿಸುವಾಗಲೂ
ಹೀಗೇ ಬಡಬಡಿಸುತ್ತಿದ್ದಳಲ್ಲವೇನೋ ?
ಈಗವಳ ಮೊಲೆ ಬತ್ತಿದೆಯೋ ಮರುಳೇ ಎದೆಯಲ್ಲ
ಮೀಸೆ ಮೂಡುವವರೆಗೂ ನಿನ್ನ ಅವಿಸಿಟ್ಟಿದ್ದ
ಆ ಕಣ್ಣುಗಳಿಂದು ನಿಸ್ತೇಜವಾಗಿದೆಯಲ್ಲೋ !
ಎದೆಗೊರಗಿ ನೀ ಹರಿಸಿದ ಕಣ್ಣೀರಿಗೆ ಕಡಲಾಗಿದ್ದು
ಅವಳ ಸೆರಗು ನೈಟಿಗಳಲ್ಲ
ಅವಳ ಕಡಲಾಳದ ಹೃದಯ ಅಲ್ಲವೇನೋ
ಹಡೆದವಳ ವಾತ್ಸಲ್ಯಧಾರೆಯಲಿ ಮಿಂದೆದ್ದ
ಬಲಿತ ದೇಹದ ನರನಾಡಿಗಳಿಗೆ
ಅವಳ ಬಡಬಡಿಕೆ ಅಪಥ್ಯವಾದುದೇಕೋ ?
ಇಂದವಳ ಬಡಬಡಿಕೆ ಕಿವಿಗಿಂಪಾಗಿರದು ಬಿಡು
‘ ಕಂದಾ,,,,, ಬಂದೆಯಾ,,,’ ಎಂಬ
ನಲ್ಮೆಯ ಕೂಗು ಯು-ಟ್ಯೂಬಿನಲಿ ಕೇಳಲಾದೀತೇ
ಜಗಕೆ ಕತ್ತಲೆಯಾದ ಅವಳೆದೆಯ ಒಳದನಿಗೆ
ನಿನ್ನ ವಿಡಿಯೋ ಕಾಲ್ ಸ್ಪಂದಿಸಲಾದೀತೇ ?
ಅವಳ ತುಟಿಚಲನೆ ಸ್ತಬ್ಧವಾಗುವ ಮುನ್ನ
ಒಮ್ಮೆ ಬೆಳಕ ತೋರಿಸಿಬಿಡು
ಮೌನ ಲೋಕದಲೊಮ್ಮೆ ಮಿಂಚು ಹರಿಸಿಬಿಡಲಿ !
( ಮಾನಸಿಕ ಸಮಸ್ಯೆ ಇರುವ ಹೆತ್ತೊಡಲನ್ನು ಪುನರ್ವಸತಿ ವೃದ್ಧಾಶ್ರಮಕ್ಕೆ ತಳ್ಳುವ ಎಲ್ಲ ಗಂಡು ಮಕ್ಕಳಿಗೆ,,,,,,,)