ಮಂಗಳೂರು: ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಇಬ್ಬರ ಮೇಲೆ ಬಂದರು ಪೊಲೀಸರು ದೌರ್ಜನ್ಯ ಎಸಗಿ ವಶಕ್ಕೆ ಪಡೆದು, ಬಳಿಕ ಬಿಡುಗಡೆಗೊಳಿಸಿರುವ ಘಟನೆ ಶನಿವಾರ ವರದಿಯಾಗಿದೆ.
ಮೈದಾನ ಬಳಿಯ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಅಬ್ದುಲ್ ಖಾಲಿದ್ ಮತ್ತು ಮುಹಮ್ಮದ್ ರಿಯಾಜ್ ಎಂಬವರನ್ನು ಅವರ ತಳ್ಳಿ ಗಾಡಿಯ ಸಹಿತ ಬಂದರ್ ಪೊಲೀಸರು ಬಂಧಿಸಿದ್ದರು. ಬಂಧಿತರು ಮಹಾ ನಗರಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿಯಿಂದ ಅನುಮೋದಿಸಲ್ಪಟ್ಟ ಬೀದಿಬದಿ ವ್ಯಾಪಾರಿಗಳಾಗಿದ್ದರು.
ಇದನ್ನು ಓದಿ: ಬೀದಿಬದಿ ವ್ಯಾಪಾರಿಗಳಿಗೆ ಸಮಸ್ಯೆ ಎದುರಾಗಿದೆ ನಿರ್ದಿಷ್ಠ ಕ್ರಮಗಳನ್ನು ಕೈಗೊಳ್ಳಿ
ಘಟನೆಯ ಮಾಹಿತಿ ತಿಳಿದು ಪೊಲೀಸ್ ಠಾಣೆಗೆ ನೂರಾರು ಬೀದಿ ವ್ಯಾಪಾರಿಗಳೊಂದಿಗೆ ದೌಡಾಯಿಸಿದ ಬೀದಿಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಹಾಗೂ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತು ಸಂಘದ ಪದಾಧಿಕಾರಿಗಳು ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ ಪರಿಣಾಮ ಬಂಧಿತರಿಬ್ಬರನ್ನು ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ, ಬಂಧಿಸಲ್ಪಟ್ಟಿದ್ದವರು ವ್ಯಾಪಾರ ಮಾಡುತ್ತಿದ್ದ ಮೈದಾನ ರಸ್ತೆಗೆ ಪೊಲೀಸರನ್ನು ಕರೆಸಿಕೊಂಡ ಬೀದಿಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಇಮ್ತಿಯಾಝ್, ಫುಟ್ ಪಾತ್ ಮೇಲೆ ನಿರ್ಮಿಸಲಾಗಿರುವ ಕಟ್ಟಡಗಳು, ಅಂಗಡಿ, ಮಳಿಗೆಗಳನ್ನು ಮೊದಲು ತೆರವುಗೊಳಿಸಿ ಬಳಿಕ ಬಡ ಬೀದಿಬದಿ ವ್ಯಾಪಾರಿಗಳ ತಳ್ಳುಗಾಡಿಗಳನ್ನು ತೆರವುಗೊಳಿಸುವಂತೆ ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ. ಸಂಘದ ಪದಾಧಿಕಾರಿಗಳ ತರಾಟೆಗೆ ಪೊಲೀಸರು ಹಿಂದಿರುಗಿದ್ದಾರೆ.
ಇದನ್ನು ಓದಿ: ಬೆಂಗಳೂರು ದುಡಿಯುವ ವರ್ಗದ ಕೇಂದ್ರ: ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್
ಬಿಡುಗಡೆಯಾದ ಬೀದಿವ್ಯಾಪಾರಿಗಳ ಜೊತೆ ಮೈದಾನ ರಸ್ತೆವರೆಗೆ ಮೆರವಣಿಗೆ ನಡೆಸಿ ಅದೇ ಸ್ಥಳದಲ್ಲಿ ವ್ಯಾಪಾರ ನಡೆಸುವುದಾಗಿ ಪಟ್ಟು ಹಿಡಿದ ಸಂಘದ ಮುಖಂಡರು ಅಲ್ಲೇ ಮತ್ತೆ ವ್ಯಾಪಾರ ಆರಂಭಿಸಿದರು ಮತ್ತು ನಗರದಲ್ಲಿ ಬಡ ಬೀದಿ ವ್ಯಾಪಾರಿಗಳು ತಮ್ಮ ಬದುಕಿಗಾಗಿ ವ್ಯಾಪಾರ ಮಾಡಿದರೆ ಬಂಧನ ಕೇಸು ಹಾಕಲಾಗುತ್ತದೆ. ಶ್ರೀಮಂತರು ಬೀದಿಯಲ್ಲಿ ಆಹಾರದ ಉತ್ಸವ ನಡೆಸಿದರೆ ರಸ್ತೆಗಳನ್ನು ಮುಚ್ಚಿ ವಾಹನಗಳನ್ನು ತಡೆದು ರಸ್ತೆಯಲ್ಲೇ ಕಸಗಳನ್ನು ರಾಶಿ ಹಾಕುವವರಿಗೆ ಪೊಲೀಸ್ ಕಾವಲಿನಲ್ಲಿ ಅವಕಾಶ ನೀಡಲಾಗುತ್ತಿದೆ ಎಂದು ಬೀದಿ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಮುಖಂಡರಾದ ಸಂತೋಷ್ ಆರ್.ಎಸ್, ಆಸೀಫ್ ಬಾವ ಉರುಮನೆ, ಆನಂದ, ರಹಿಮಾನ್ ಅಡ್ಯಾರ್, ನೌಶಾದ್ ಉಳ್ಳಾಲ, ರಿಯಾಜ್ ಎಲ್ಯರ್ ಪದವು, ರಿಹಾಬ್ ಬಂದರ್, ಶೌಕತ್ ಆಲಿ, ಮುಝಫ್ಫರ್ ಮುಂತಾದವರು ಉಪಸ್ಥಿತರಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ