ಮಂಡ್ಯ: ಜಿಲ್ಲಾಸ್ಪತ್ರೆ ಪಕ್ಕದ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಏಕಾಏಕಿ ತೆರವು ಮಾಡಿರುವುದನ್ನು ಖಂಡಿಸಿ ಮತ್ತು ಯಥಾಸ್ಥಿತಿ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಮಂಡ್ಯ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ(ಸಿಐಟಿಯು) ವತಿಯಿಂದ ರಸ್ತೆಯಲ್ಲೆ ಪ್ರತಿಭಟನೆ ನಡೆಸಿದರು.
ಬೀದಿಬದಿ ವ್ಯಾಪಾರಸ್ಥತರ ವಿರುದ್ಧ ಮಂಡ್ಯ ಪೂರ್ವ ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಂತೋಷ್ ಅಮಾನತ್ತು ಆಗಲೇಬೇಕೆಂದು ಆಗ್ರಹಿಸಿರುವ ಪ್ರತಿಭಟನಾಕಾರರು, ತಕ್ಷಣವೇ ನಗರ ಸಭಾ ಆಯುಕ್ತರು ಬೀದಿಬದಿ ವ್ಯಾಪಾರಿಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಕಳೆದ ಎರಡು ದಶಕಗಳಿಂದಲೂ ಮಂಡ್ಯ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಅಗತ್ಯ. ವಸ್ತುಗಳ ಮಾರಾಟ ಮಾಡಿಕೊಂಡು ಬರುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿರುವ ಸಂತೋಷ್ ವಿನಾಕಾರಣ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆ ಕೊಡುತ್ತಿರುವುದನ್ನು ಖಂಡಿಸಿದರು.
ಸಮಸ್ಯೆಯ ಪರಿಹಾರಕ್ಕೆ ಜಿಲ್ಲಾ ಆಡಳಿತ ಮತ್ತು ನಗರ ಸಭೆ ಅಧ್ಯಕ್ಷರು, ಆಯುಕ್ತರು, ಸ್ಪಂದಿಸಬೇಕು. ಬೀದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣಾ ಕಾಯ್ದೆ 2014 ರನ್ವಯ ಏಕಾಎಕಿ ತೆರವುಗೊಳಿಸಬಾರದು. ಸರ್ವೇಯನ್ನು ನಡೆಸಿ ಅವರೆಲ್ಲರಿಗೂ ಗುರುತಿನ ಚೀಟಿ ನೀಡಬೇಕು. ವ್ಯಾಪಾರಕ್ಕೆ ಅನುಕೂಲವಾಗುವ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು. ಪ್ರಮಾಣ ಪತ್ರ ನೀಡಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಪೋಲಿಸ್ ರಿಂದ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಬೀದಿಬದಿ ವ್ಯಾಪಾರಿಗಳ ಸಂಘ ಕಾರ್ಯದರ್ಶಿ ಚಂದ್ರಶೇಖರ್, ವ್ಯಾಪಾರಿಗಳಾದ ಈಶ್ವರಿ, ರಮೇಶ್, ನಿಂಗರಾಜು, ಮಹಮ್ಮದ್ ಫಸ್ದುಲ್ಲಾ, ಪ್ರಸನ್ನ ಮಣಿ, ಕೆಂಪಣ್ಣ ಸೂರ್ಯ, ಭೀಮಣ್ಣ, ಕುಮಾರ, ರಮೇಶ್, ಲಕ್ಷ್ಮಿ ಉಪಸ್ಥಿತರಿದ್ದರು.