ತುಮಕೂರು: ಕೇಂದ್ರ ಸರ್ಕಾರ ಬೀಡಿ ಕಾರ್ಮಿಕರ ಬೇಡಿಕೆಗಳನ್ನು ಪರಿಹರಿಸಬೇಕು ಮತ್ತು ಸರ್ಕಾರದ ನಿಲುವುಗಳನ್ನು ಬಹಿರಂಗಗೊಳಿಸಬೇಕು. ಉದ್ಯೋಗ ಕಳೆದುಕೊಳ್ಳುವವರಿಗೆ ಆರ್ಥಿಕ ನೆರವು ನೀಡುವ, ಪರ‍್ಯಾಯ ಉದ್ಯೋಗದ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತುಮಕೂರು ಜಿಲ್ಲಾ ಬೀಡಿ ಕಾರ್ಮಿಕರ ಸಂಘ(ಸಿಐಟಿಯು) ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಛೇರಿ ನಡೆದ ಪ್ರತಿಭಟನೆ ಉದ್ದೇಶಿಸಿ ಸಿಐಟಿಯು ಮುಖಂಡ ಸೈಯದ್ ಮುಜೀಬ್ ಮಾತನಾಡಿ, ಜಿಲ್ಲೆಯಲ್ಲಿ ಕೃಷಿಕೂಲಿಕಾರ ನಂತರದಲ್ಲಿ ಅತಿ ಹೆಚ್ಚು ಇರುವ ಬೀಡಿ ಕಾರ್ಮಿಕರಿಗೆ ಸರ್ಕಾರ ಪರ‍್ಯಾಯ ರೂಪಿಸಿಲ್ಲ. ದಶಕಗಳಿಂದ ಇದನ್ನು ನಂಬಿ ಬದುಕು ನಡೆಸುತ್ತಿರುವವರಿಗೆ ಸಂಕಷ್ಟಕ್ಕೆ ಸಿಲುಕಿದೆ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲು ಆಗ್ರಹಿಸಿದರು.
ಪ್ರತಿಭಟನೆಯನ್ನ ಉದ್ದೇಶಿಸಿ ಅಧ್ಯಕ್ಷರಾದ ಶ್ರೀಮತಿ ಶಹತಾಜ್ ಮಾತನಾಡಿ, ಬೀಡಿ ಕಾರ್ಮಿಕರಿಗೆ ಏಕರೂಪದ ರಾಷ್ಟ್ರೀಯ ಕನಿಷ್ಠ ವೇತನವನ್ನು ಪ್ರತಿ ಸಾವಿರ ಬೀಡಿ ಸುತ್ತಲು ರೂ.395ರಂತೆ ನೀಡಬೇಕು. ತುಟ್ಟಿಭತ್ಯೆ 0.5 ಪೈಸೆ ಪ್ರತಿ ಪಾಯಿಂಟ್ ಗೆ ನೀಡಬೇಕಾಗಿದೆ. ನೋಂದಣಿಯಾಗದ ಕಂಪನಿಗಳು ಅಕ್ರಮ ಬೀಡಿ ಉತ್ಪಾದನೆಯಲ್ಲಿ ತೊಡಗಿವೆ. ಅವುಗಳ ಉತ್ಪಾದನೆಯನ್ನು ತಕ್ಷಣವೇ ನಿಲ್ಲಿಸಬೇಕು. ಬೀಡಿ ರೋಲರ್ ಗಳನ್ನು ಹೊರತುಪಡಿಸಿ ಉಳಿದ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ ರೂ.21,000 ವೇತನ ನಿಗದಿಮಾಡಬೇಕು ಮತ್ತು ಮಾರುವ, ಕೊಳ್ಳುವ, ಉಪ-ಗುತ್ತಿಗೆ ವ್ಯವಸ್ಥೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿ: ಪರ್ಯಾಯ, ಪರಿಹಾರ, ಕಾರ್ಮಿಕ ಕಾನೂನು ಜಾರಿಗಾಗಿ ಬೀಡಿ ಕಾರ್ಮಿಕರ 10ನೇ ರಾಜ್ಯ ಸಮ್ಮೇಳನ
ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಮುಖಂಡ ಯು. ಬಸವರಾಜ ಮಾತನಾಡಿ, ಬೀಡಿ ಕಾರ್ಮಿಕರಿಗೆ ಪರ‍್ಯಾಯ ರೂಪಿಸಿಸಲು ಹಣ ನೀಡದ ಕೇಂದ್ರ – ರಾಜ್ಯದ ಬಿಜೆಪಿ ಸರ್ಕಾರಗಳು ಶ್ರಿಮಂತ ಬಂಡವಾಳಗಾರರಿಗೆ 10 ಲಕ್ಷ ಕೋಟಿ ನೆರವು ನೀಡಿದೆ. ಜನ ಇದನ್ನು ಅರಿತು ಇವರನ್ನು ಸೋಲಿಸಲು ಕರೆ ನೀಡಿದರು.
ಸಂಘದ ಖಜಾಂಚಿ ಎನ್.ಕೆ ಸುಬ್ರಮಣ್ಯ ಅವರು ಮಾತನಾಡಿ ತಮ್ಮ ಸಂಬಳ – ಸಾರಿಗೆ ಲಕ್ಷಗಳಲ್ಲಿ ಪಡೆಯುವ ಶಾಸಕರು ಬೀಡಿ ಕಾರ್ಮಿಕರಿಗೆ ಮಾಸಿಕ ಪಿಂಚಣಿ 3000 ರೂಪಾಯಿಯಷ್ಟು ನೀಡಲು ಹಿಂಜರಿಕೆ ಯಾಕೆಂದು ಪ್ರಶ್ನಿಸಿದರು. ಅಲ್ಲದೆ, ರಾಜ್ಯದ ಬೀಡಿ ಕಾರ್ಮಿಕರಿಗೆ ಕಳೆದ 5 ವರ್ಷಗಳಿಂದ ಅಧಿಸೂಚಿತ ಕನಿಷ್ಟ ಕೂಲಿ ಜಾರಿಯಾಗಿಲ್ಲ. ಮಾಲಿಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ವಕೀಲರು ಸೂಕ್ತವಾಗಿ ಪ್ರತಿನಿಧಿಸದೆ ವಿಚಾರಣೆ ಹಾಗೆ ಬಾಕಿ ಉಳಿದೆ. ಸರ್ಕಾರದ ಈ ನಿರ್ಲಕ್ಷತೆಯು ಮಾಲಿಕರಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆಗಳಿವೆ ಎಂಬ ಗುಮಾನಿ ಮೂಡಿದೆ. ಈ ಹಿನ್ನೆಲೆ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದನ್ನು ಓದಿ: ರಾಜ್ಯ ಬಜೆಟ್‌ನಲ್ಲಿ ಕಾರ್ಮಿಕರ ಬೇಡಿಕೆಗಳಿಗೆ ಆದ್ಯತೆ ನೀಡಲು ಆಗ್ರಹಿಸಿ ಫೆ.10ರಂದು ಸಿಐಟಿಯು ಪ್ರತಿಭಟನೆ
ತುಮಕೂರು ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಉಪಾಧ್ಯಕ್ಷ ಅಬ್ದುಲ್ ಮುನಾಪ್ ಮಾತನಾಡಿ, ಕಾರ್ಮಿಕರನ್ನು ನೇರವಾಗಿ ಪ್ರಧಾನ ಉದ್ಯೋಗದಾತರು ಮತ್ತು ಖಾತೆ ಸಂಖ್ಯೆಗಳು ನಿಜವಾದ ಕಾರ್ಮಿಕರ ಹೆಸರಿನಲ್ಲಿರಬೇಕು. ಬೀಡಿ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಹಣ ನೀಡುತ್ತಿರುವ ಬೀಡಿ ಉದ್ಯಮದಲ್ಲಿ ಸೆಸ್ ಅನ್ನು ಮರುಸ್ಥಾಪಿಸಿಬೇಕು. ಸರ್ಕಾರ/ಮಾಲಕರು ಎಲ್ಲ ಬೀಡಿ ಕಾರ್ಮಿಕರ ಆರೋಗ್ಯ ಬಗ್ಗೆ ವಿಶೇಷ ಜವಾಬ್ದಾರಿಯನು ತೆಗೆದುಕೊಳ್ಳಬೇಕು. ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು ಹಾಗೂ ಎಲ್ಲಾರಿಗೂ ಆರೋಗ್ಯ ಸೌಲಭ್ಯಗಳನ್ನು ಮುಂದುವರೆಸಬೇಕು ಅಥವಾ ಇಎಸ್ಐಸಿ ಸದಸ್ಯರನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.
ಸಹ ಕಾರ್ಯದರ್ಶಿ ಶ್ರೀಮತಿ ಶಾಹಿಸ್ತ ಪರ್ವಿನ್ ಮಾತಮಾಡಿ, ಬೀಡಿ ಮತ್ತು ಸಿಗಾರ್ ಕಾಯ್ದೆ 1966 ಇಲ್ಲದಂತೆ ಮಾಡುವ ಕ್ರಮವನ್ನು ನಿಲ್ಲಿಸಬೇಕು. ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ, ಲಾಗ್‌ಬುಕ್, ಬೋನಸ್, ಪಿ.ಎಫ್. ಎಲ್ಲಾ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಮೂಲಕ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಕಾರ್ಮಿಕ ಸಚಿವರಿಗೆ ಮನವಿಯನ್ನು ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ