ಬೇಹುಗಾರಿಕಾ ಏಜೆಂಸಿಗಳ ಕಣ್ಣಿಂದ ಗೃಹ ಮಂತ್ರಾಲಯದಿಂದ ವ್ಯವಹರಿಸುವುದನ್ನು ನಿಲ್ಲಿಸಬೇಕು- ಎ.ಐ.ಕೆ.ಎಸ್.ಸಿ.ಸಿ. ಆಗ್ರಹ
ರೈತರು ಎಲ್ಲಿ ಪ್ರತಿಭಟನೆ ನಡೆಸಬೇಕು ಎಂದೆಲ್ಲ ಶರತ್ತುಗಳನ್ನು ಹಾಕುವುದನ್ನು ನಿಲ್ಲಿಸಬೇಕು
ದಿಲ್ಲಿಗೆ ದೊಡ್ಡ ಸಂಖ್ಯೆಯಲ್ಲಿ ಬರಲು ಎಲ್ಲ ರೈತ ಸಂಘಟನೆಗಳಿಗೆ ಕರೆ, ಬೆಂಬಲಕ್ಕೆ ರೈತ-ಪರ, ಕಾರ್ಪೊರೇಟ್-ವಿರೋಧಿ ಶಕ್ತಿಗಳಿಗೆ ಕರೆ
ಡಿಸೆಂಬರ್ 1 ರಿಂದ ದೇಶಾದ್ಯಂತ ರಾಜ್ಯ ಮಟ್ಟಗಳಲ್ಲಿ ಪ್ರತಿಭಟನೆಗಳಿಗೆ ಕರೆ
ಮೋದಿ ಸರಕಾರ ಮೂರು ಕೃಷಿ ವಿಧೇಯಕಗಳನ್ನುಮತ್ತು ವಿದ್ಯಚ್ಛಕ್ತಿ ಮಸೂದೆಯನ್ನು ಹಿಂತೆಗೆದುಕೊಳ್ಳುವ ಬದಲು ದಮನಕಾರಿ,,ಅಮಾನವೀಯ, ಘನತೆಯಿಲ್ಲದ ದಾಳಿಗಳನ್ನು ಮಾಡುತ್ತಿದೆ, ದಿಲ್ಲಿಗೆ ಬರುವುದನ್ನು ತಡೆಯಲು ಅಡ್ಡ ಗಟ್ಟುಗಳನ್ನು, ಉಕ್ಕಿನ ಬೇಲಿಗಳನ್ನು ಹಾಕುತ್ತಿದೆ, ಅಶ್ರುವಾಯು ಸಿಡಿಸುತ್ತಿದೆ, ಜಲಫಿರಂಗಿಗಳಿಂದ ಕೊರೆಯುವ ಚಳಿಯಲ್ಲಿ ಜಲಪ್ರಹಾರ ಮಾಡುತ್ತಿದೆ, ಲಾಠಿ ಚಾರ್ಜ್ ಮಾಡುತ್ತಿದೆ, ರಾಷ್ಟ್ರೀಯ ಹೆದ್ದಾರಿಗಳನ್ನು ಅಗೆಯುತ್ತಿದೆ. ರೈತರಿಗೆ ಈಗ ಸರಕಾರದ ಮೇಲೆ ವಿಶ್ವಾಸ ಇಲ್ಲವಾಗಿದ್ದರೆ ಅದಕ್ಕೆ ರೈತರನ್ನು ದೂರಬೇಕಾಗಿಲ್ಲ, ಸರಕಾರವೇ ಕಾರಣ. ಈಗ ಚರ್ಚೆಯನ್ನು ರೈತರು ಎಲ್ಲಿ ಠಿಕಾಣಿ ಹೂಡಬೇಕು ಎಂಬತ್ತ ತಿರುಗಿಸಲು ಪ್ರಯತ್ನಿಸುತ್ತಿದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ((ಎ.ಐ.ಕೆ.ಎಸ್.ಸಿ.ಸಿ.) ಮಾಧ್ಯಮ ಕೋಷ್ಠ ಹೇಳಿದೆ.
ದಿಲ್ಲಿಯಾದ್ಯಂತ ಭದ್ರತಾ ಪಡೆಗಳನ್ನು ನೆಲೆಗೊಳಿಸಲಾಗುತ್ತಿದೆ, ಈ ಮೂಲಕ ರೈತರ ನಡುವೆ ಮತ್ತು ದಿಲ್ಲಿಯ ಜನತೆಯ ನಡುವೆ ಭಯೋತ್ಪಾದನೆಯ ಭಯದ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ. ಸರಕಾರಕ್ಕೆ ರೈತರ ಬೇಡಿಕೆಗಳ ಬಗ್ಗೆ ಮಾತಾಡಬೇಕೆಂದಿದ್ದರೆ ನೀವು ಬುರಾರಿ ಮೈದಾನಕ್ಕೆ ಹೋದ ಮೇಲೆಯೇ ಎಂಬಂತಹ ಶರತ್ತುಗಳನ್ನು ಹಾಕವುದನ್ನು ನಿಲ್ಲಿಸಬೇಕು, ಸಂವಾದ ಎಂದರೆ ಈ ವಿಧೇಯಕಗಳಿಮದ ರೈತರಿಗೆ ಎಷ್ಟೊಂದು ಪ್ರಯೋಜನಗಳಾಗುತ್ತದೆ ಎಂಬ ವಿವರಣೆ ಕೊಡುವುದು ಎಂದು ಭಾವಿಸುವುದನ್ನು ನಿಲ್ಲಿಸಬೇಕು, ನೇರವಾಗಿ ತನ್ನ ಪರಿಹಾರಗಳೊಂದಿಗೆ ಬರಬೇಕು, , ರೈತರಿಗೆ ತಮ್ಮ ಬೇಡಿಕೆಗಳ ಬಗ್ಗೆ ಸ್ಪಷ್ಟತೆ ಇದೆ ಎಂದು ರೈತರು ಸರಕಾರಕ್ಕೆ ಖಡಾಖಂಡಿತವಾಗಿ ಹೇಳಿದ್ದಾರೆ.
ಸರಕಾರ ಇದನ್ನು ಬೇಹುಗಾರಿಕಾ ಏಜೆಂಸಿಗಳ ಕಣ್ಣಿಂದ ವ್ಯವಹರಿಸುವುದನ್ನು ನಿಲ್ಲಿಸಬೇಕು ಎಂದು ಎ.ಐ.ಕೆ.ಎಸ್.ಸಿ.ಸಿ. ಆಗ್ರಹಿಸಿದೆ ಸರಕಾರ ಈ ವಿಧೇಯಕಗಳನ್ನು ಸಂಸತ್ತಿನಲ್ಲಿ ಬಲವಂತದಿಂದ ಪಾಸು ಮಾಡಿಸಿಕೊಂಡಿದೆ. ಆದ್ದರಿಂದ ತಮ್ಮ ಪ್ರತಿಭಟನೆಗೆ ರೈತರು ಸರಕಾರದ ಅತ್ಯುನ್ನತ ಮಟ್ಟದಿಂದ ರಾಜಕೀಯ ಸ್ಪಂದನೆಯನ್ನು ನಿರೀಕ್ಷಿಸುತ್ತಾರೆ. ಈ ವಿಷಯದಲ್ಲಿ ಗೈಹ ಮಂತ್ರಾಲಯವನ್ನು ಎಳೆಯುವುದು ರೈತರಲ್ಲಿ ವಿಶ್ವಾಸವನ್ನಂತೂ ಉಂಟು ಮಾಡುವುದಿಲ್ಲ, ಬದಲಾಗಿ ಅದು ಬೆದರಿಕೆಯಾಗುತ್ತದೆ ಎಂದು ಅದು ಹೇಳಿದೆ.
ಪಂಜಾಬ್ ಮತ್ತು ಹರ್ಯಾಣದ ರೈತರು ದೊಡ್ಡ ಸಂಖ್ಯೆಯಲ್ಲಿ ಸಿಂಘು ಮತ್ತು ಟಿಕ್ರಿ ಗಡಿಗಳನ್ನು ಜಮಾಯಿಸಿದ್ದಾರೆ. ಉತ್ತರಪ್ರದೇಶ ಮತ್ತು ಉತ್ತರಾಖಂಡದ ರೈತರು ದಿಲ್ಲಿಯತ್ತ ಹೊರಟಿದ್ದಾರೆ. ಪ್ರತಿಭಟನೆಯನ್ನು ತೀವ್ರಗೊಳಿಸಲು ತಕ್ಷಣವೇ ರೈತರನ್ನು ಅಣಿನೆರೆಸಬೇಕು ಎಂದು ಎಲ್ಲ ರೈತರ ಸಂಘಟನೆಗಳಿಗೆ ಎ.ಐ.ಕೆ.ಎಸ್.ಸಿ.ಸಿ. ಕಾರ್ಯಕಾರಿ ಗುಂಪು ಕರೆ ನೀಡಿದೆ. ಎಲ್ಲ ಕಾರ್ಪೊರೇಟ್-ವಿರೋಧಿ, ರೈತ-ಪರ ಶಕ್ತಿಗಳು ಈ ಪ್ರತಿಭಟನೆಯಲ್ಲಿ ಕೈಜೋಡಿಸಬೇಕು ಎಂದೂ ಕರೆ ನೀಡಿರುವ ಅದು ಡಿಸೆಂಬರ್ 1 ರಿಂದ ದೇಶಾದ್ಯಂತ ರಾಜ್ಯ ಮಟ್ಟಗಳಲ್ಲಿ ಪ್ರತಿಭಟನೆಗಳು ನಡೆಯಲಿವೆ ಎಂದು ಹೇಳಿದೆ.
ಸಾರ್ವಜನಿಕರಿಗೆ ಅನಾನುಕೂಲಗಳಾಗಿದ್ದರೂ ರೈತರಿಗೆ ದಿಲ್ಲಿ, ಹರ್ಯಾಣ ಮತ್ತು ಪಂಜಾಬಿನ ಜನರಿಂದ ವ್ಯಾಪಕ ಬೆಂಬಲ ಸಿಗುತ್ತಿದೆ ಎಂದಿರುವ ಎ.ಐ.ಕೆ.ಎಸ್.ಸಿ.ಸಿ. ಪಂಜಾಬ್ ಮತ್ತು ಹರ್ಯಾಣದ ರೈತರ ಕೆಚ್ಚಿಗೆ ವೀರನಮನ ಸಲ್ಲಿಸಿದೆ.