ಬೆಂಗಳೂರು: ಕೊರೊನಾ ಎರಡನೇ ಅಲೆ ಪ್ರಮಾಣ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಸೋಂಕಿತರನ್ನು ದಾಖಲಿಸಲು ಬೆಡ್ಗಳಿಲ್ಲದೇ ಜನರೆಲ್ಲ ಸಾವಿಗೀಡಾಗುತ್ತಿರುವ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನಲ್ಲಿ ಹಲವು ಸೋಂಕಿತರು ಸೂಕ್ತ ವ್ಯವಸ್ಥೆ ಇಲ್ಲದೇ ಪ್ರಾಣಾಪಾಯಕ್ಕೆ ಸಿಲುಕುತ್ತಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ನಗರದಲ್ಲಿ ಕಳೆದ 3 ದಿನಗಳ ಹಿಂದೆ ಅನಾರೋಗ್ಯಕ್ಕೀಡಾದ ವ್ಯಕ್ತಿಯ ಕುಟುಂಬಸ್ಥರು ಅವರಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗಳಿಗೆ ಅಲೆದಾಡಿ ಬೆಡ್ಗಾಗಿ ಹುಡುಕಾಟ ನಡೆಸುವಷ್ಟರಲ್ಲಿ ವ್ಯಕ್ತಿಯ ಉಸಿರೆ ನಿಂತುಹೋದ ದಾರುಣ ಘಟನೆ ನಡೆದಿದೆ.
ಇದನ್ನೂ ಓದಿ : ಇತ್ತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ – ಅತ್ತ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ – ಸೋಂಕಿತರ ಸಮಸ್ಯೆ ಕೇಳೋರು ಯಾರು?
ವ್ಯಕ್ತಿಯ ಆರೋಗ್ಯದಲ್ಲಿ ಅನಾರೋಗ್ಯ ಕಾಣಿಸಿಕೊಂಡ ಕಾರಣ ಮೊದಲು ಅವರನ್ನು ಕರೆದುಕೊಂಡು ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಕೊರೊನಾ ಟೆಸ್ಟ್ ಮಾಡಿಸಿದಾಗ ಕೊವಿಡ್ ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೆ ನಂತರ ಜ್ವರ, ಉಸಿರಾಟದ ಸಮಸ್ಯೆ ಕಾಡುತ್ತಿತ್ತು. ಆದ್ದರಿಂದ ಮತ್ತೊಮ್ಮೆ ಕೊರೊನಾ ಟೆಸ್ಟ್ ಮಾಡಿಸಲಾಗಿ ಪಾಸಿಟಿವ್ ರಿಪೋರ್ಟ್ ಬಂದಿದೆ. ದುರದೃಷ್ಟವಶಾತ್ ಆಸ್ಪತ್ರೆಯಲ್ಲಿ ದಾಖಲಿಸಲು ಬೆಡ್ಗಳ ಕೊರತೆ ಇದೆ ಎಂದು ತಿಳಿಸಿದ್ದರಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಿದ್ದಾರೆ. ದುರಂತವೆಂದರೆ ರಾಮಯ್ಯ ಆಸ್ಪತ್ರೆಯಲ್ಲಿಯೂ ಬೆಡ್ ಸಮಸ್ಯೆ ಎದುರಾಗಿದೆ. ನಂತರ ಬೇರೆ ದಾರಿಯಿಲ್ಲದೇ ರಾಜನಕುಂಟೆಯ ಚಿಗುರು ಆಸ್ಪತ್ರೆಗೆ ಹೋಗುವ ಸಂದರ್ಭ ಎದುರಾಗಿದೆ. ಆದರೆ, ಅಲ್ಲಿಗೆ ಹೋಗಿ ತಲುಪಿ ಚಿಕಿತ್ಸೆ ಪಡೆಯುವಷ್ಟರಲ್ಲಿ ವ್ಯಕ್ತಿಯ ಉಸಿರು ನಿಂತುಹೋಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ದಾಖಲೆ ಬರೆದ ಕೊರೊನಾ : ಒಂದೇ ದಿನ 14 ಸಾವಿರ ಪ್ರಕರಣಗಳು ಪತ್ತೆ
ವ್ಯಕ್ತಿಯ ಕುಟುಂಬಸ್ಥರು ಎರಡು ಮೂರು ಆಸ್ಪತ್ರೆಗಳ ಮೆಟ್ಟಿಲು ಹತ್ತಿಳಿದು ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆದರೆ, ಇತ್ತಕಡೆ ಅವರ ಮೇಲೆ ಚಿಕಿತ್ಸೆ ವೆಚ್ಚ ಬೀಳುವುದೂ ತಪ್ಪಿಲ್ಲ. ಚಿಗುರು ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ 5 ರಿಂದ 6 ಸಾವಿರ ಹಣ ಖರ್ಚಾಗಿದೆ. ಆಸ್ಪತ್ರೆಗೆ ಕರೆದೊಯ್ದ ಆ್ಯಂಬುಲೆನ್ಸ್ನವರೂ ಹೆಚ್ಚುವರಿ ಹಣ ಪಡೆದಿದ್ದಾರೆ. ಒಟ್ಟಾರೆಯಾಗಿ ಬರೋಬ್ಬರಿ 16,500 ರೂಪಾಯಿ ಹಣ ಕೇಳಿದ್ದಾರೆ. ಅತ್ತ ಜೀವವೂ ಇಲ್ಲ, ಇತ್ತ ನೆಮ್ಮದಿಯೂ ಇಲ್ಲ ಎಂಬ ಪರಿಸ್ಥಿತಿ ಎದುರಿಸಿದ ಕುಟುಂಬಸ್ಥರು ಸದ್ಯ ಮೇಡಿ ಅಗ್ರಹಾರದಲ್ಲಿ ಬೆಳಗ್ಗೆ 7:30ರಿಂದಲೇ ಅಂತ್ಯಸಂಸ್ಕಾರಕ್ಕೆ ಕಾಯುತ್ತಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಕೊವೀಡ್ ರೋಗಿಗಳನ್ನು, ಹಾಗೂ ಮೃತದೇಹಗಳನ್ನು ಕೊಂಡೊಯ್ಯುವ ವಾಹನಕ್ಕೆ ಶುಲ್ಕವನ್ನು ನಿಗದಿಪಡಿಸಿಲ್ಲ ಎಂದು ಹೇಳುತ್ತಿದ್ದಾರೆ. ಇತ್ತ ಆರೋಗ್ಯ ಸಚಿವ ಡಾ. ಸುಧಾಕರ್ ಬೆಂಗಳೂರಿನಲ್ಲಿ ಆಸ್ಪತ್ರೆ ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಈ ರೀತಿಯ ಘಟನೆಗಳು ಬೆಂಗಳೂರಿನಲ್ಲಿ ದಿನಕ್ಕೆ ಎರಡು ಮೂರಾದರೂ ನಡೆಯುತ್ತಿವೆ. ಸರಕಾರ, ಬಿಬಿಎಂಪಿ ಹಾರಿಕೆ ಉತ್ತರಗಳ ಮೂಲಕ ಜನರ ಜೊತೆ ಚಲ್ಲಾಟವಾಡುತ್ತಿದ್ದಾರೆ ಎಂದು ಸಾರ್ವಜನಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.