ಸರ್ಕಾರಿ ಜಮೀನು ಒತ್ತುವರಿ: ಅಧಿಕಾರಿಗಳು ಸೇರಿ 8 ಜನರ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ನಗರದ ಕೊಡಿಗೇಹಳ್ಳಿ ಮತ್ತು ಕೋತಿಹೊಸಹಳ್ಳಿಯಲ್ಲಿ ಖಾಸಗಿ ಕಂಪನಿಗಳು ಸರ್ಕಾರಿ ಜಮೀನು ಒತ್ತುವರಿ ಮಾಡಿ ವಸತಿ ಸಮುಚ್ಛಯ ನಿರ್ಮಿಸಲು ಕಾರಣವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆಲ ಅಧಿಕಾರಿಗಳು ಸೇರಿ ಎಂಟು ಮಂದಿ ವಿರುದ್ಧ ಕಾನೂನು ಮತ್ತು ಸೇವಾ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಬಿಡಿಎ ಆಯುಕ್ತರಿಗೆ ನಿರ್ದೇಶನ ನೀಡಿದೆ.

ಸರಕಾರಿ ಜಾಗದ ಒತ್ತುವರಿಯನ್ನು ತೆರವುಗೊಳಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೊಡಿಗೇಹಳ್ಳಿಯ ನಿವಾಸಿ ಅಶ್ವತ್ಥ ನಾರಾಯಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ಮಾಡಿದೆ.

ಈ ಹಿಂದೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಒತ್ತುವರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಜತೆಗೆ, ಯಲಹಂಕ ತಹಶೀಲ್ದಾರ ಅವರು ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಸಲ್ಲಿಸಿದರು.
ಇದನ್ನು ಪರಿಶೀಲಿಸಿದ ನ್ಯಾಯಪೀಠ, ಸರ್ಕಾರಿ ಜಮೀನಿನ ಒತ್ತುವರಿಗೆ ಕಾರಣವಾದ ಬಿಡಿಎ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಡಿಎ ಆಯುಕ್ತರಿಗೆ ನಿರ್ದೇಶನ ನೀಡಿತು. ಜತೆಗೆ, ಮುಂದಿನ 15 ದಿನಗಳಲ್ಲಿ ಒತ್ತುವರಿ ತೆರವು ಮಾಡಿ ವರದಿ ಸಲ್ಲಿಸುವಂತೆ ಯಲಹಂಕ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿ, ವಿಚಾರಣೆಯನ್ನು ಫೆಬ್ರವರಿ 2ಕ್ಕೆ ಮುಂದೂಡಿದೆ.

ಈ ಸಂದರ್ಭದಲ್ಲಿ ಅದೇ ವಸತಿ ಸಮುಚ್ಚಯದಲ್ಲಿ ಮನೆ ಹೊಂದಿರುವವರ ಪರ ವಕೀಲರು ಹಾಜರಾಗಿ, ತಕ್ಷಣ ಒತ್ತುವರಿ ತೆರವು ಮಾಡಿದಲ್ಲಿ ನಮ್ಮ ಕಕ್ಷಿದಾರರಿಗೆ ತೊಂದರೆಯಾಗಲಿದೆ. ಹೀಗಾಗಿ ಒತ್ತುವರಿ ಪ್ರಕ್ರಿಯೆ ಮುಂದೂಡಲು ಮನವಿ ಮಾಡಿದರು. ಇದರಿಂದ ತೀವ್ರ ಅಸಮಾಧಾನ ಗೊಂಡ ನ್ಯಾಯಪೀಠ, ಈ ಸಂದರ್ಭದಲ್ಲಿ ಒತ್ತುವರಿ ತೆರವು ಮಾಡಬಾರದು ಎಂದಾದರೆ ನಮ್ಮ ಆದೇಶಕ್ಕೆ ಬೆಲೆ ಏನಿದೆ ?, ಒತ್ತುವರಿ ಕಟ್ಟಡದಲ್ಲಿ ಮನೆ ಪಡೆದಿರುವವರಿಗೆ ಈ ಕುರಿತು ಜವಾಬ್ದಾರಿ ಇಲ್ಲವೇ? ಎಂದು ಪ್ರಶ್ನಿಸಿತು. ಜತೆಗೆ, ನಿಮ್ಮ ಅಹವಾಲನ್ನು ತಹಶೀಲ್ದಾರ್ ಅವರ ಬಳಿ ಸಲ್ಲಿಸಿ ಎಂದು ಸೂಚನೆ ನೀಡಿತು.

Donate Janashakthi Media

Leave a Reply

Your email address will not be published. Required fields are marked *