ಬೆಂಗಳೂರು : ಶಿಕ್ಷಣ ಸಚಿವ ಬಿಸಿ ನಾಗೇಶ್‌ರವರು, “ಶಾಲಾ ಹಂತದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣದ ಪ್ರಸ್ತುತತೆ, ಅಗತ್ಯತೆ”, ಬಗ್ಗೆ ದುಂಡು ಮೇಜಿನ ಸಮಾಲೋಚನಾ ಸಭೆ ನಡೆಸಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸಚಿವರ ಈ ನಡೆ ಅಪಾಯಕಾರಿಯಾಗಿದೆ ಎಂದು ಜಾಗೃತ ನಾಗರಿಕರು ಕರ್ನಾಟಕದಿಂದ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯಲಾಗಿದೆ.
ಬಿ. ಸಿ. ನಾಗೇಶ್ ಅವರು ಮೌಲ್ಯ ಶಿಕ್ಷಣದ ಕುರಿತು ಮಠಾದೀಶರೊಂದಿಗೆ ದುಂಡು ಮೇಜಿನ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಮಾತನಾಡಿದ ಮಠಾಧೀಶರು ‘ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸಿಕೊಳ್ಳಬೇಕು, ಶಾಲೆಗಳಲ್ಲಿ ಸಾತ್ವಿಕ ಆಹಾರ ಕೊಡಬೇಕು, ಅಂಗಡಿಗಳಲ್ಲಿ ಮಾಂಸ ನೇತುಹಾಕುವುದನ್ನು ನಿಲ್ಲಿಸಬೇಕು, ಪುನರ್ಜನ್ಮದ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಬೇಕು’ ಎಂದು ಸಲಹೆ ನೀಡಿದ್ದಾರೆ.
ಈ ವರದಿಯನ್ನು ಓದಿ ನಮಗೆಲ್ಲ ಅಘಾತವಾಗಿದೆ. ‘ಮೌಲ್ಯ ಶಿಕ್ಷಣ’ ದ ಕುರಿತು ಚರ್ಚೆಯನ್ನು ಕೆಲವೇ ಜನ ಮಠಾಧೀಶರು, ಧಾರ್ಮಿಕ ವ್ಯಕ್ತಿಗಳನ್ನು ಮಾತ್ರ ಕರೆದು ನಡೆಸಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಪ್ರೊ.ಕೆ.ಮರುಳಸಿದ್ದಪ್ಪ ಆರೋಪಿಸಿದ್ದಾರೆ.
ಶಿಕ್ಷಣಕ್ಕೆ, ವ್ಯಾಸಂಗಕ್ರಮಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಶಿಕ್ಷಣದ ಭಾಗೀದಾರರಾದ ಶಿಕ್ಷಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಎಸ್ಡಿಎಂಸಿ ಮುಂತಾದವರೊಂದಿಗೆ ಸಮಾಲೋಚನೆ ನಡೆಸಬೇಕು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಪ್ರತಿ ಹಂತದಲ್ಲೂ ವಿವಾದಾತ್ಮಕ, ಸಂವಿಧಾನ ವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಕರ್ನಾಟಕದ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ವಿವಾದದ ಕುರಿತು ಮಾತನಾಡುವುದಾದರೆ ನಮ್ಮ ಮೊದಲ ಪ್ರಶ್ನೆ ‘ಮೌಲ್ಯ ಶಿಕ್ಷಣ’ ಎಂದರೆ ಏನು? ಈ ಪರಿಕಲ್ಪನೆಯನ್ನು ಯಾರು ತೇಲಿಬಿಟ್ಟರು? ಯಾವುದು ಮೌಲ್ಯ ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಆರೆಸ್ಸೆಸ್ ನ ಚಾತುರ್ವರ್ಣ ಸಿದ್ಧಾಂತವನ್ನು, ಪ್ರಾಚೀನ ಗುರುಕುಲ ಪದ್ಧತಿಯನ್ನು, ಬ್ರಾಹ್ಮಣೀಕರಣದ ವ್ಯವಸ್ಥೆಯನ್ನು ಮೌಲ್ಯವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಸಂವಿಧಾನ ವಿರೋಧಿ ಎಂದು ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಟೀಕಿಸಿದ್ದಾರೆ.
ಪರಿಣಿತರು, ಶಿಕ್ಷಣ ತಜ್ಞರು ವಿವರಿಸಿದಂತೆ ಮಕ್ಕಳಿಗೆ ಮೌಲ್ಯ ಶಿಕ್ಷಣಕ್ಕಿಂತಲೂ ‘ವಿಮರ್ಶಾತ್ಮಕ ಶಿಕ್ಷಣದ’ ಅಗತ್ಯವಿದೆ. ಈ ಕುರಿತು ವಿಷಯ ಪರಿಣಿತರೊಂದಿಗೆ ಸಮಾಲೋಚನೆ, ಸಂವಾದ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಾತ್ವಿಕ ಆಹಾರ ಎನ್ನುವ ನುಡಿಗಟ್ಟು ಸಮಸ್ಯಾತ್ಮಕವಾಗಿದೆ. ಈ ನೆಪದಲ್ಲಿ ನಿಮ್ಮ ಸಿದ್ಧಾಂತಗಳನ್ನು ಮಕ್ಕಳ ಮೇಲೆ ಹೇರುವುದು ಸ್ವಾಗತಾರ್ಹವಲ್ಲ. ಮಕ್ಕಳಿಗೆ ಪೌಷ್ಟಿಕ ಆಹಾರ ಕಡ್ಡಾಯ ಎಂಬುದು ನಮ್ಮ ಆದ್ಯತೆಯಾಗಿರಬೇಕು. ಇದರಾಚೆಗೆ ಅನಗತ್ಯವಾಗಿ, ಆಹಾರ ಸಂಸ್ಕೃತಿಯ ಕುರಿತು ಚರ್ಚೆ ನಡೆಸಿದ್ದಾರೆ. ಶೇ. 90ರಷ್ಟು ಜನಸಂಖ್ಯೆ ಸೇವಿಸುವ ಮಾಂಸಾಹಾರದ ಕುರಿತು ಸ್ವಾಮಿಗಳು ಹೇಳಿರುವ ಮಾತುಗಳು, ಕೀಳಾಗಿ ಮಾತನಾಡಿರುವುದು ಖಂಡನೀಯ. ಮಕ್ಕಳು ಯಾವ ಆಹಾರ ಸೇವಿಸಬೇಕು ಎಂಬುದನ್ನು ಸ್ವಾಮಿಗಳು ನಿರ್ಧರಿಸಲು ಸಾಧ್ಯವಿಲ್ಲ ಎಂದು ಕೆ.ಎಸ್.ವಿಮಲಾ ಪ್ರತಿಕ್ರಿಯಿಸಿದ್ದಾರೆ.
ಪುನರ್ಜನ್ಮದ ಕುರಿತು ಶಿಕ್ಷಕರಿಗೆ ಬೋಧಿಸಬೇಕು ಎನ್ನುವುದು ಅತ್ಯಂತ ಅವೈಜ್ಞಾನಿಕ ಸಲಹೆಯಾಗಿದೆ. ಈ ಕೂಡಲೇ ಈ ಮಠಾಧೀಶರು ನೀಡಿರುವ ಸಂವಿಧಾನ ವಿರೋಧಿ ಮತ್ತು ಜೀವ ವಿರೋಧಿ ಸಲಹೆಗಳನ್ನು ತಿರಸ್ಕರಿಸಬೇಕು. ಮುಖ್ಯವಾಗಿ ಶೈಕ್ಷಣಿಕ ವರ್ಷ ಕಡೆಯ ಹಂತದಲ್ಲಿರುವ ಈ ಸಂದರ್ಭದಲ್ಲಿ ಇಂತಹ ಸಭೆ, ಸಮಾಲೋಚನೆ ನಡೆಸಿ ಪಡೆದ, ಮಕ್ಕಳ ಭವಿಷ್ಯಕ್ಕೆ ಮಾರಕವಾಗುವ, ಅವೈಜ್ಞಾನಿಕ ಸಲಹೆಗೆ ಯಾವುದೇ ಅರ್ಥವಿಲ್ಲ. ಕೆಲವೇ ತಿಂಗಳುಗಳಲ್ಲಿ ಚುನಾವಣೆಯೂ ಬರುತ್ತಿರುವಾಗ ಇಂತಹ ಒಂದು ಸಭೆ ನಡೆಸಿ ಮಕ್ಕಳ ಭವಿಷ್ಯದೊಂದಿಗೆ ಆಟವಾಡುವ ಔಚಿತ್ಯವೇನಿದೆ? ಎಂದು ಅಮರೇಶ್ ಕಡಗದ ಪ್ರಶ್ನಿಸಿದ್ದಾರೆ.
ಈ ಎಲ್ಲಾ ವಿವಾದಗಳಿಗೆ ಕಾರಣರಾದ ಶಿಕ್ಷಣ ಮಂತ್ರಿ ಬಿ. ಸಿ. ನಾಗೇಶ್ ಅವರನ್ನು ವಜಾಗೊಳಿಸಿ ಎಂದು ಜಾಗೃತ ನಾಗರಿಕರು ಕರ್ನಾಟಕದ, ಡಾ.ಜಿ.ರಾಮಕೃಷ್ಣ, ಪ್ರೊ.ರಾಜೇಂದ್ರ ಚೆನ್ನಿ, ಡಾ.ವಿಜಯಾ. ಡಾ.ಬಂಜಗೆರೆ ಜಯಪ್ರಕಾಶ್, ಕೆ.ನೀಲಾ, ಡಾ.ಮೀನಾಕ್ಷಿ ಬಾಳಿ, ಡಾ.ಪ್ರಭು ಖಾನಾಪುರೆ, ಟಿ.ಸುರೇಂದ್ರ ರಾವ್, ಎನ್.ಕೆ.ವಸಂತ್ ರಾಜ್. ಡಾ.ವಸುಂಧರಾ ಭೂಪತಿ, ಡಾ.ನಿರಂಜನಾರಾಧ್ಯ, ಡಾ.ಎನ್.ಗಾಯತ್ರಿ, ಸಿ.ಕೆ.ಗುಂಡಣ್ಣ, ಡಾ.ಲೀಲಾ ಸಂಪಿಗೆ, ಎನ್. ಆರ್.ವಿಶುಕುಮಾರ್, ಎನ್. ಯೋಗಾನಂದ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.