ಬೆಂಗಳೂರು: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಮ್ಮಿಕೊಂಡಿರುವ ಪ್ರತಿ ಮನೆಯಲ್ಲೂ ಧ್ವಜ ಅಭಿಯಾನ ನಡೆಸಲು ಪ್ರಚಾರ ಭರಾಟ ಜೋರಾಗಿಯೇ ನಡೆಯುತ್ತಿದೆ. ಅಭಿಯಾನದಲ್ಲಿ ಭಾರೀ ಎಡವಟ್ಟುಗಳು ನಡೆದಿದ್ದು, ಬೆಂಗಳೂರಿನ ಜನತೆ ದೊಡ್ಡ ಸಂಖ್ಯೆಯಲ್ಲಿ ದೋಷಯುಕ್ತ ಧ್ವಜಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಹಿಂದಿರುಗಿಸುತ್ತಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಮೂರು ದಿನಗಳಲ್ಲಿ 50,000 ದೋಷಯುಕ್ತ ಧ್ವಜಗಳನ್ನು ಬಿಬಿಎಂಪಿಗೆ ಹಿಂತಿರುಗಿಸಲಾಗಿದೆ.
ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನಾಗರಿಕರು ಧ್ವಜಗಳಲ್ಲಿ ಯಾವುದೇ ದೋಷ ಕಂಡುಬಂದಲ್ಲಿ, ಅವರು ತಾವು ಖರೀದಿಸಿದ ಬಿಬಿಎಂಪಿ ಕೌಂಟರ್ಗಳಿಗೆ ಹೋಗಬೇಕಾಗಿಲ್ಲ. ಬದಲಾಗಿ ಅವುಗಳನ್ನು ಹಿಂದಿರುಗಿಸಲು ಯಾವುದೇ ಬಿಬಿಎಂಪಿ ವಾರ್ಡ್ ಕಚೇರಿಗಳಿಗೆ ಭೇಟಿ ನೀಡಿ, ವಿನಿಮಯ ಮಾಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಖರೀದಿಸಿದ ಸುಮಾರು 10 ಲಕ್ಷ ಧ್ವಜಗಳನ್ನು ಬಿಬಿಎಂಪಿ ಮಾರಾಟ ಮಾಡುತ್ತಿದೆ. ಅದರಲ್ಲಿ ಕೆಲವು ಧ್ವಜಗಳಲ್ಲಿ ಮಾತ್ರ ದೋಷಯಕ್ತವಾಗಿದೆ ಎಂದು ಹೇಳಲಾಗಿದ್ದರೂ ಸಹ ಅವುಗಳ ಸಂಖ್ಯೆ ಮಾತ್ರ ಹೆಚ್ಚುತ್ತಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಹಾಗೂ ಅಭಿಯಾನದ ಪ್ರಭಾರಿ ನೋಡಲ್ ಅಧಿಕಾರಿ ರಂಗಪ್ಪ ಅವರು ತಿಳಿಸಿದ್ದಾರೆ.
ದೋಷಗಳಲ್ಲಿ ಕಂಡುಬಂದ ಅಂಶಗಳೆಂದರೆ, ಅಶೋಕ ಚಕ್ರದಲ್ಲಿ ತಪ್ಪಾದ ಗಾತ್ರ, ಅದು ದುಂಡಗೆ ಬದಲಾಗಿ ಅಂಡಾಕಾರವಾಗಿದೆ. ತ್ರಿವರ್ಣ ಧ್ವಜದ ಅಗಲ ಮತ್ತು ಗಾತ್ರವು ಏಕರೂಪವಾಗಿಲ್ಲ, ಚರಖಾ(ನೂಲುವ ಚಕ್ರ) ಎರಡು ಬಾರಿ ಮುದ್ರಿತವಾಗಿದೆ, ಧ್ವಜದ ಗಾತ್ರವು ಧ್ವಜ ಸಂಕೇತದ ಪ್ರಕಾರವಾಗಿಲ್ಲ ಅಥವಾ ಧ್ವಜದ ಮೇಲಿನ ಬಣ್ಣಗಳು ಸೂಕ್ತವಲ್ಲ ಎಂದು ತಿಳಿದು ಬಂದಿದೆ.