ಬೆಂಗಳೂರು : ಹತ್ತಾರು ವರ್ಷದಿಂದ ಬಿಬಿಎಂಪಿಗೆ ಸುಳ್ಳು ಹಾಗೂ ತಪ್ಪು ಮಾಹಿತಿ ಒದಗಿಸಿ ಬರೋಬ್ಬರಿ .130 ಕೋಟಿ ಆಸ್ತಿ ತೆರಿಗೆ ವಂಚಿಸಿದ ನಗರದ 11,913 ಆಸ್ತಿಗಳನ್ನು ಬಿಬಿಎಂಪಿಯ ಕಂದಾಯ ವಿಭಾಗ ಪತ್ತೆ ಮಾಡಿದೆ.
ಬೆಸ್ಕಾಂ ಬಿಲ್ನಿಂದ ಆಧರಿಸಿ ಪರಿಶೀಲನೆ ವೇಳೆ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಬೆಸ್ಕಾಂ ಬಿಲ್ ಆಧರಿಸಿ 24,397 ಆಸ್ತಿಗಳನ್ನು ಪರಿಶೀಲನೆ ನಡೆಸಿದ್ದ ಪಾಲಿಕೆಗೆ 11913 ಆಸ್ತಿಗಳಲ್ಲಿ ತಪ್ಪು ಮಾಹಿತಿ ನೀಡಿರೋದು ತಿಳಿದುಬಂದಿದೆ.
ಬಿಬಿಎಂಪಿಯಲ್ಲಿ ಸ್ವಯಂ ಆಸ್ತಿ ಘೋಷಣೆ ಮಾಡಿಕೊಂಡು ಆಸ್ತಿ ತೆರಿಗೆ ಪಾವತಿಸುವ ವ್ಯವಸ್ಥೆ ಇದೆ. ಇದನ್ನು ದುರುಪಯೋಗ ಪಡಿಸಿಕೊಂಡ ಆಸ್ತಿ ಮಾಲಿಕರು ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಸುಳ್ಳು ವಿವರ ನೀಡಿ ಆಸ್ತಿ ತೆರಿಗೆ ಪಾವತಿಯಲ್ಲಿ ಹಲವು ವರ್ಷಗಳಿಂದ ವಂಚನೆ ಮಾಡುತ್ತಿದ್ದ 11,913 ಆಸ್ತಿಗಳನ್ನು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸದ್ಯ ದೃಢಪಟ್ಟಿರುವ ಆಸ್ತಿಗಳು, ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿದ್ದರೂ ವಾಸಕ್ಕೆ ಬಳಸಲಾಗುತ್ತಿರುವುದಾಗಿ ಬಿಬಿಎಂಪಿಗೆ ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚಿಸುತ್ತಿರುವ ಆಸ್ತಿಗಳಾಗಿವೆ. ಈ ಆಸ್ತಿಗಳಿಂದ ದುಪ್ಪಟ್ಟು ದಂಡ ಮತ್ತು ಬಡ್ಡಿ ವಸೂಲಿಗೆ ಕಂದಾಯ ವಿಭಾಗ ಇದೀಗ ಮುಂದಾಗಿದೆ.
ಬೆಸ್ಕಾಂನಿಂದ ಪಡೆದ ಮಾಹಿತಿ ಆಧರಿಸಿ ಮೊದಲ ಹಂತದಲ್ಲಿ ವಾಣಿಜ್ಯ ವಿದ್ಯುತ್ ಸಂಪರ್ಕ ಪಡೆದ 24,397 ಆಸ್ತಿ ಪರಿಶೀಲಿಸಲಾಗಿದೆ. ಈ ಪೈಕಿ 11,913 ಆಸ್ತಿಗಳು ತಪ್ಪು ಮಾಹಿತಿ ನೀಡಿರುವುದು ದೃಢಪಟ್ಟಿದೆ. ಉಳಿದ 8,811 ಆಸ್ತಿ ಮಾಲಿಕರು ವಾಣಿಜ್ಯ ಬಳಕೆಗೆ ವಿದ್ಯುತ್ ಸಂಪರ್ಕ ಪಡೆದರೂ ವಾಣಿಜ್ಯ ಬಳಕೆ ಮಾಡುತ್ತಿಲ್ಲ. ಲಿಫ್‌್ಟಅಳವಡಿಕೆ, ಕೊಳವೆ ನೀರು ಪಂಪ್ ಮಾಡುವುದಕ್ಕೆ ಸೇರಿದಂತೆ ವಿವಿಧ ಉದ್ದೇಶಕ್ಕೆ ವಾಣಿಜ್ಯ ಸಂಪರ್ಕ ಪಡೆದಿರುವುದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಬಾಕಿ ಎರಡು ಸಾವಿರ ಸಂಪರ್ಕ ವಿಳಾಸ ದೃಢಪಟ್ಟಿಲ್ಲ. ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಕ್ಕಿ ಬಿದ್ದದ್ದು ಹೇಗೆ? : ಬೆಸ್ಕಾಂನಿಂದ ವಿದ್ಯುತ್ ಸಂಪರ್ಕವನ್ನು ವಾಣಿಜ್ಯ ಉದ್ದೇಶಕ್ಕೆ ಎಂದು ಪಡೆದಿದ್ದಾರೆ. ಆದರೆ, ಬಿಬಿಎಂಪಿಗೆ ವಾಸದ ಕಟ್ಟಡ ಎಂದು ಆಸ್ತಿ ತೆರಿಗೆ ಪಾವತಿ ಮಾಡುತ್ತಿದ್ದಾರೆ. ವಾಸ್ತವವಾಗಿ ವಾಸಕ್ಕೆ ಬಳಕೆ ಮಾಡಲಾಗುತ್ತಿದೆಯೋ ಅಥವಾ ವಾಣಿಜ್ಯ ಬಳಕೆ ಮಾಡುತ್ತಿದ್ದಾರೋ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ 11,913 ಆಸ್ತಿ ಮಾಲಿಕರು ಹೋಟೆಲ್, ವ್ಯಾಪಾರಿ ಮಳಿಗೆ, ಕಚೇರಿ, ಸಣ್ಣ ಕೈಗಾರಿಕೆ ಸೇರಿದಂತೆ ಮೊದಲಾದ ಉದ್ದೇಶಗಳಿಗೆ ಬಳಕೆ ಮಾಡುತ್ತಿರುವುದಾಗಿ ದೃಢಪಟ್ಟಿದೆ.
ಸುಳ್ಳು ಮಾಹಿತಿ ನೀಡಿರುವ 11,913 ಆಸ್ತಿ ಮಾಲಿಕರಿಂದ .130 ಕೋಟಿ ಆಸ್ತಿ ತೆರಿಗೆ ಬರಬೇಕಿದೆ ಎಂದು ಅಂದಾಜಿಸಲಾಗಿದೆ. ಅದರೊಂದಿಗೆ ತಪ್ಪು ಮಾಹಿತಿ ನೀಡಿದಕ್ಕೆ ಬಿಬಿಎಂಪಿ ಕಾಯ್ದೆ ಪ್ರಕಾರ ದುಪಟ್ಟು ದಂಡ, ಬಡ್ಡಿ ವಸೂಲಿಗೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಸುಳ್ಳು ಮಾಹಿತಿ ದೃಢಪಟ್ಟಆಸ್ತಿ ಮಾಲಿಕರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ವಂಚನೆ ಮಾಡಿದ ಆಸ್ತಿ ತೆರಿಗೆ ಒಟ್ಟು ಮೊತ್ತ (.130 ಕೋಟಿ), ಅದಕ್ಕೆ 2 ಪಟ್ಟು ದಂಡ (.260 ಕೋಟಿ) ಹಾಗೂ ಬಡ್ಡಿ ಸೇರಿಸಿದರೆ ಸುಮಾರು .400 ಕೋಟಿ ಆಗಲಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಅಂದಾಜಿಸಿದ್ದಾರೆ.
ಬೇರೆ-ಬೇರೆ ರೀತಿ ಬಿಬಿಎಂಪಿಗೆ ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ವಂಚಿಸುತ್ತಿರುವವರು ಕೂಡಲೇ ಸರಿಪಡಿಸಿಕೊಂಡು ಸರಿಯಾದ ಆಸ್ತಿ ಘೋಷಣೆ ಮಾಡಿಕೊಂಡು ತೆರಿಗೆ ಪಾವತಿಸಬೇಕು. ಒಂದು ವೇಳೆ ಸುಳ್ಳು ಮಾಹಿತಿ ನೀಡಿರುವುದು ಬಿಬಿಎಂಪಿ ಪರಿಶೀಲಿಸುವಾಗ ದೃಢಪಟ್ಟರೆ ಅವರಿಂದ ದುಪ್ಪಟ್ಟು ದಂಡ ಮತ್ತು ಬಡ್ಡಿ ವಸೂಲಿ ಮಾಡುವುದರೊಂದಿಗೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ -ಡಾ. ಆರ್.ಎಲ್.ದೀಪಕ್ ತಿಳಿಸಿದ್ದಾರೆ.