ಅನಧಿಕೃತವಾಗಿ ಫ್ಲೆಕ್ಸ, ಬ್ಯಾನರ್ ಹಾಕಿದ್ರೆ ಬೀಳುತ್ತೆ ಕೇಸ್!

ಬೆಂಗಳೂರು: ಗಾರ್ಡನ್​ ಸಿಟಿ ಬೆಂಗಳೂರಿಗೆ ಧಕ್ಕೆಯಾಗುವಂತೆ ಕಂಡಕಂಡಲ್ಲಿ ಬ್ಯಾನರ್, ಫ್ಲೆಕ್ಸ್ ಮುಂತಾದವುಗಳನ್ನು ಕಟ್ಟಲಾಗುತ್ತಿತ್ತು. ಇದೀಗ ಬಿಬಿಎಂಪಿ ಅನಧಿಕೃತ ಫ್ಲೆಕ್ಸ್​, ಬ್ಯಾನರ್​ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಎಫ್​ಐಆರ್​ ದಾಖಲು ಮಾಡುವ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪಾಲಿಕೆ ಮುಖ್ಯ ಆಯುಕ್ತ ಗೌರವ್​ ಗುಪ್ತಾ, ಪಾಲಿಕೆಯ ಎಂಟು ವಲಯಗಳ ಯಾವುದೇ ಪ್ರದೇಶದಲ್ಲಿ ಅನಧಿಕೃತವಾಗಿ ಫ್ಲೆಕ್ಸ್​ ಬ್ಯಾನರ್​ಗಳನ್ನು ಎಂತಹ ಪ್ರಭಾವಿ ವ್ಯಕ್ತಿಗಳೇ ಹಾಕಿದರೂ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಫ್ಲೆಕ್ಸ್​ಗಳ ಬಗ್ಗೆ ಆಯಾ ವಲಯಗಳ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ನೀಡಿದರೆ ಅಂತಹ ಜಾಹಿರಾತು ಫಲಕಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುತ್ತೇವೆ ಎಂದು ಹೆಳಿದ್ದಾರೆ.

ಪಾಲಿಕೆಯ ಎಲ್ಲಾ 8 ವಲಯಗಳಲ್ಲಿಯೂ ಮುಖ್ಯ ಇಂಜಿನಿಯರ್‌ಗಳ ನೇತೃತ್ವದ ತಂಡವು ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್ಸ್, ಫ್ಲೆಕ್ಸ್, ಪೋಸ್ಟರ್ಸ್, ಬಂಟಿಂಗ್ಸ್‌ ತೆರವು ಕಾರ್ಯಾಚರಣೆಯನ್ನು ತೀವ್ರಗತಿಯಲ್ಲಿ ನಡೆಸುತ್ತಿದೆ.

ನಗರದಲ್ಲಿ ಇನ್ನು ಮುಂದೆ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವುದು ಕಂಡು ಬಂದಲ್ಲಿ ಕೂಡಲೇ ತಪ್ಪಿತಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಅಂಗಡಿ-ಮುಂಗಟ್ಟು, ಜಾಹೀರಾತುಗಳು, ವಾಹನ ಸ್ವ-ಜಾಹೀರಾತು ಇನ್ನಿತರ ಸಣ್ಣಪುಟ್ಟ ಜಾಹೀರಾತುಗಳನ್ನು ಸೀಮಿತ ಅವಧಿಗೆ ಹಾಗೂ ಅಳತೆಗೆ (ಪಿಪಿಪಿ ಯೋಜನೆಗಳು ಸೇರಿದಂತೆ) ಅಳವಡಿಸಲು ಅವಕಾಶವಿದೆ.

ಇವುಗಳನ್ನು ಹೊರತುವಡಿಸಿ ಇತರ ಯಾವುದೇ ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿ ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶಿಸುವುದು, ಎಲ್‌ಇಡಿ ಜಾಹೀರಾತುಗಳನ್ನು ಪ್ರದರ್ಶಿಸುವುದು ಹಾಗೂ ಸಾರ್ವಜನಿಕ ಮತ್ತು ವೈಯಕ್ತಿಕ ಜಾಹೀರಾತುಗಳು, ಶುಭಾಶಯಗಳು, ಸಭೆ-ಸಮಾರಂಭಗಳ ಕುರಿತ ಜಾಹೀರಾತು/ಪ್ರಕಟಣೆಗಳ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಬಿತ್ತಿಪತ್ರ, ಬಾವುಟಗಳು ಇತ್ಯಾದಿ ಅಳವಡಿಸುವುದನ್ನು ನಿಷೇಧಿಸಲಾಗಿದೆ.

ಇವುಗಳನ್ನು ಅಳವಡಿಸುತ್ತಿರುವುದರಿಂದ ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಅಲ್ಲದೇ ನಗರದ ಸೌಂದರ್ಯ ಹಾಳಾಗುತ್ತಿದೆ ಮತ್ತು ಪರಿಸರಕ್ಕೆ ಮಾರಕವಾಗುತ್ತಿದೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಇನ್ಮುಂದೆ ಈ ರೀತಿಯ ಘಟನೆಗಳು ನಡೆದರೆ ಎಫ್‌ಐಆರ್ ದಾಖಲು ಮಾಡಲು ಬಿಬಿಎಂಪಿ ನಿರ್ಧರಿಸಿದೆ.‌

Donate Janashakthi Media

Leave a Reply

Your email address will not be published. Required fields are marked *