ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಆಹಾರ ವಿತರಣೆಗೆ ಇಂದು ಆದೇಶ ನೀಡಿದ ರಾಜ್ಯ ಸರಕಾರ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ.
ಪೌರಾಡಳಿತ ಇಲಾಖೆಯು ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ಆದೇಶಿಸಿದ್ದ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆಯ ಆದೇಶದೊಂದಿಗೆ ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ) ಅಧೀನ ಕಾರ್ಯದರ್ಶಿ ಅವರ ತಿಳಿಸಿದ್ದಾರೆ.
ಕೋವಿಡ್ ನಿಯಮಗಳ ನಿಯಂತ್ರಣದೊಂದಿಗೆ ಕೂಲಿ ಕಾರ್ಮಿಕರು, ವಲಸಿಗರು ಮತ್ತು ಇತರೇ ದುರ್ಬಲ ವರ್ಗದವರಿಗೆ ಅನಾನುಕೂಲವಾಗದಂತೆ ಬಿಬಿಎಂಪಿ ಯಲ್ಲಿನ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಬೆಳಗಿನ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಪೊಟ್ಟಣದ ಮೂಲಕ ಒದಗಿಸಿಲು ತಿಳಿಸಲಾಗಿದೆ.
ಇದನ್ನು ಓದಿ: ಬೆಂಗಳೂರು ಬಿಟ್ಟು ಉಳಿದೆಡೆ ಇಂದಿರಾ ಕ್ಯಾಂಟಿನ್ ನಲ್ಲಿ ಉಚಿತ ಊಟ
ಫಲಾನುಭವಿಗಳು ಕೋವಿಡ್ ಹರಡುವಿಕೆ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಪೊಟ್ಟಣಗಳನ್ನು ಪಡೆಯುವಾಗ ಪರಸ್ಪರ 2 ಮೀಟರ್ ಅಂತರ ಕಾಯ್ದುಕೊಳ್ಳಲು ಬಿಬಿಎಂಪಿ ಸೂಚಿಸಿದೆ.
ಕೋವಿಡ್19 ಸೋಂಕು ಹರಡುವಿಕೆ ತಡೆಗಟ್ಟಲು ರಾಜ್ಯದಲ್ಲಿ ಮೇ 24ರವರೆಗೆ ನಿರ್ಬಂಧ ವಿಧಿಸಲಾಗಿದ್ದು, ಈ ಅವಧಿಯಲ್ಲಿ ಬಡವರು, ಕೂಲಿಕಾರ್ಮಿಕರು ಸೇರಿದಂತೆ ಯಾರೂ ಕೂಡ ಹಸಿವಿನಿಂದ ಕಷ್ಟಪಡಬಾರದು ಎನ್ನುವ ದೃಷ್ಟಿಯಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ಗಳಲ್ಲಿ ಮೂರು ಹೊತ್ತು ಉಚಿತವಾಗಿ ಆಹಾರ ಒದಗಿಸಲು ರಾಜ್ಯಸರ್ಕಾರ ಆದೇಶಿಸಿದೆ pic.twitter.com/l7jzFkFLfn
— CM of Karnataka (@CMofKarnataka) May 11, 2021
ಆಹಾರ ಪೊಟ್ಟಣ ಪಡೆಯಲು ಬರುವವರು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ವಾಹನ ಚಾಲನೆ ಪರವಾನಗಿ, ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ಯಾವುದಾದರೂ ಒಂದರ ಗುರುತಿನ ಚೀಟಿಯನ್ನು ತೋರಿಸಬೇಕು.
ಒಬ್ಬ ವ್ಯಕ್ತಿಗೆ ಒಮ್ಮೆಗೆ ಗರಿಷ್ಠ ಮೂರು ಆಹಾರದ ಪೊಟ್ಟಣ ನೀಡಲಾಗುತ್ತದೆ. ಪಡಿತರ ಚೀಟಿ ತಂದಲ್ಲಿ, ಅದರಲ್ಲಿರುವ ಕುಟುಂಬದ ಸದಸ್ಯರ ಸಂಖ್ಯೆಯಷ್ಟು ಆಹಾರದ ಪೊಟ್ಟಣಗಳನ್ನು ಪಡೆಯಬಹುದು.
ಎಷ್ಟು ಜನರಿಗೆ ಊಟ ವಿತರಿಸಲಾಗಿದೆ ಎಂಬ ಬಗ್ಗೆ ವಿವರಗಳನ್ನು ನಿರ್ವಹಿಸಬೇಕು ಎಂದೂ ಸೂಚಿಸಿದ್ದಾರೆ.
ಬಾಕಿ ಬಿಲ್ ಪಾವತಿಗೆ ₹ 25 ಕೋಟಿ
ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ಬಿಲ್ ಪಾವತಿಗೆ ₹ 25 ಕೋಟಿ ಮೊತ್ತವನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಅದನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಬಳಸುವಂತೆ ಸರ್ಕಾರ ಬಿಬಿಎಂಪಿಗೆ ಸೂಚಿಸಿದೆ.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರಿಗೆ ಪತ್ರ ಬರೆದಿರುವ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ‘ಸದ್ಯಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಬಿಡುಗಡೆ ಮಾಡಿರುವ ₹ 300 ಕೋಟಿಯಲ್ಲಿ ₹25 ಕೋಟಿಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ನಂತರ ಇದರ ಮರುಪಾವತಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ.