ನವದೆಹಲಿ: ಬಿಬಿಎಂಪಿ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಎಂ ಖಾನಿಲ್ಕರ್ ಪೀಠ, ಇಂದಿನಿಂದ ಒಂದು ವಾರದೊಳಗೆ ರಾಜ್ಯ ಸರ್ಕಾರ ಬಿಬಿಎಂಪಿ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟಿಸಬೇಕು, ಪಟ್ಟಿ ಪ್ರಕಟವಾದ ಬೆನ್ನಲ್ಲೇ ಚುನಾವಣೆ ಆಯೋಗ ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸಬೇಕು ಆದೇಶ ಪ್ರಕಟಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಬೇಕೆಂದು ಸೂಚಿಸಿರುವ ನ್ಯಾಯಾಲಯವು ಈ ಸಂಬಂಧ ಅರ್ಜಿ ವಿಚಾರಣೆಯನ್ನು ನಡೆಸಿತು.
ಈ ಹಿಂದೆ ಬಿಬಿಎಂಪಿ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಪೀಠ, ಎಂಟು ವಾರಗಳಲ್ಲಿ ಚುನಾವಣೆ ನಡೆಸಲು ಸೂಚನೆ ನೀಡಿತ್ತು. ಆದರೂ, ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ರಾಜ್ಯ ಸರ್ಕಾರದ ಪರ ವಕೀಲರು ಮೀಸಲಾತಿ ಸಂಬಂಧ ರಚಿಸಲಾಗಿದ್ದ ಭಕ್ತವತ್ಸಲ ಸಮಿತಿ ವರದಿಯನ್ನು ವಿಳಂಬವಾಗಿ ನೀಡಿದೆ ಎಂದರು.
ವಾದ ಆಲಿಸಿದ ನ್ಯಾಯಪೀಠ ವರದಿ ಆಧರಿಸಿ ಇಂದಿನಿಂದ ಒಂದು ವಾರದಲ್ಲಿ ಮೀಸಲಾತಿ ಪಟ್ಟಿ ಪ್ರಕಟಿಸಬೇಕು ಎಂದು ಆದೇಶ ನೀಡಿತು. ಸರ್ಕಾರ ಮೀಸಲಾತಿ ಪ್ರಕಟಿಸಿದ ಬಳಿಕ ಚುನಾವಣಾ ಆಯೋಗ ಚುನಾವಣಾ ನಡೆಸಲು ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನು ಆರಂಭಿಸಬೇಕು ಎಂದು ಸೂಚನೆಗಳನ್ನು ನೀಡಿದೆ.
ಸುಪ್ರೀಂಕೋರ್ಟ್ ಆದೇಶದಿಂದ ವರ್ಷಗಳಿಂದ ಬಾಕಿ ಉಳಿದಿದ್ದ ಬಿಬಿಎಂಪಿ ಚುನಾವಣೆ ಅಗಸ್ಟ್ ಎರಡನೇ ವಾರದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.