ಬೆಂಗಳೂರು: ಲೋಕಸಭಾ ಚುನಾವಣೆಯ ಬಳಿಕ ಎದುರಾಗಲಿರುವ ಮಹತ್ವದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಬಿಬಿಎಂಪಿ ಚುನಾವಣೆಯೂ ಸಹ ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ ಎಂಬ ಸುದ್ದಿಗೆ ಸಿಎಂ ಸಿದ್ದರಾಮಯ್ಯ ಇಂಬು ನೀಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಬಿಬಿಎಂಪಿ ಚುನಾವಣೆ ಬಗ್ಗೆ ಲೋಕಸಭೆ ಫಲಿತಾಂಶದ ನಂತರ ಚಿಂತಿಸಲಾಗುವುದು ಎಂದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಜನ ಪ್ರತಿನಿಧಿಗಳಿಲ್ಲದೇ ಸೊರಗಿರುವ ಬಿಬಿಎಂಪಿಗೆ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯುವ ಎಲ್ಲ ಸಾಧ್ಯತೆಗಳಿವೆ ಎನ್ನಲಾಗಿದೆ.
ಮಹಾನಗರ ಬೆಂಗಳೂರಿನ ಸಮಸ್ಯೆ ಗುರುತಿಸಿ, ಅದನ್ನು ನಿವಾರಿಸಲು, ವಾರ್ಡ್ ಮಟ್ಟದಲ್ಲಿ ಸಮರ್ಪಕ ಮೂಲಸೌಕರ್ಯ ಕಲ್ಪಿಸಲು ಬಿಬಿಎಂಪಿ ಸದಸ್ಯರು ಅತ್ಯವಶ್ಯಕ.
ಆದರೆ, ಕಳೆದ 3 ವರ್ಷ 9 ತಿಂಗಳಿನಿಂದ ಬಿಬಿಎಂಪಿಗೆ ಜನಪ್ರತಿನಿಧಿಗಳಿಲ್ಲದೆ, ಅಧಿಕಾರಿಗಳದ್ದೇ ಆಡಳಿತವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರೂಪಿಸಿ ಮಂಡಿಸಿದ್ದಲ್ಲದೆ, 198 ವಾರ್ಡ್‌ಗಳ ಮರುವಿಂಗಡಣೆ ಮಾಡುವ ಕಾರ್ಯಕ್ಕೆ ಮುಂದಾಯಿತು. ಅದರಂತೆ 198 ವಾರ್ಡ್‌ಗಳನ್ನು 243 ವಾರ್ಡ್‌ಗಳನ್ನಾಗಿ ಮರುವಿಂಗಡಣೆ ಮಾಡುವ ಮೂಲಕ ಚುನಾವಣೆ ವಿಳಂಬ ಮಾಡಲಾಯಿತು.
ಇದನ್ನು ಓದಿ : ಸರ್, ನೀವು ಬುದುವಾರ ಮ್ಯಾಚ್ ನೋಡಲಿಕ್ಕೆ ಬರ್ತಿದಿರಾ?” ಮೀಮ್ಸ್ ವೈರಲ್
ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಿದ ಸಂದರ್ಭದಲ್ಲಿ ಅಂದರೆ 2006ರಿಂದ 2010ರವರೆಗೆ ಚುನಾವಣೆ ನಡೆದಿರಲಿಲ್ಲ. ಆಗಲೂ ಬಿಜೆಪಿ ಆಡಳಿತದಲ್ಲಿತ್ತು ಹಾಗೂ ಕಾಂಗ್ರೆಸ್ ಬಿಬಿಎಂಪಿ ಚುನಾವಣೆಗಾಗಿ ಆಗ್ರಹಿಸಿತ್ತು. ಇದೀಗ 2020ರ ಸೆ.10ರಂದು ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡಿದ್ದು, ಈವರೆಗೆ ಚುನಾವಣಾ ಪ್ರಕ್ರಿಯೆ ನಡೆಸಿಲ್ಲ.
ಲೋಕಸಭಾ ಚುನಾವಣೆ ನಂತರ ಚುನಾವಣೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಬಿಬಿಎಂಪಿ ಚುನಾವಣೆ ನಡೆಸಬೇಕು ಎಂಬ ಅಭಿಲಾಷೆ ನಮಗೆ ಇದೆ. ಆದರೆ, ಈ ವಿಚಾರ ನ್ಯಾಯಾಲಯದಲ್ಲಿ ಇರುವ ಕಾರಣ ತಡವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇದನ್ನು ನೋಡಿ : ಗ್ರೇಸ್ ಮಾರ್ಕ್ಸ್ : ಶಾಲಾ ಶಿಕ್ಷಣದ ಹೀನಾಯ ಸ್ಥಿತಿ ಅನಾವರಣJanashakthi Media