ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಮತ್ತೆ ಮೂರು ತಿಂಗಳ ಕಾಲ ಕಾಲಾವಾಕಾಶ ನೀಡುವಂತೆ ಸರ್ಕಾರವು ಹೈಕೋರ್ಟ್ಗೆ ಮನವಿ ಮಾಡಿಕೊಂಡಿದೆ. ಚುನಾವಣೆಗೆ ಸರ್ಕಾರ ಹೊರಡಿಸಿದ್ದ ಮೀಸಲು ಅಧಿಸೂಚನೆ ಪ್ರಶ್ನಿಸಿ ವಿ.ಶ್ರೀನಿವಾಸ್ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಇಂದು ನಡೆಯಿತು.
ಧಾರವಾಡ ಪೀಠದಿಂದ ವರ್ಚುವಲ್ ಆಗಿ ವಿಚಾರಣೆ ನಡೆಸಿದ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ, ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿದ್ದಾರೆ. ಈ ವೇಳೆ ಸರ್ಕಾರದ ಪರವಾಗಿ ಹೆಚ್ಚುವರಿ ವಕೀಲ ಧ್ಯಾನ್ ಚಿನ್ನಪ್ಪ, ನಿವೃತ್ತ ನ್ಯಾಯಮೂರ್ತಿ ಭಕ್ತವವತ್ಸಲ ಸಮಿತಿಯಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದು ಮತ್ತು ರಾಜಕೀಯ ಹಿಂದುಳಿದಿರುವಿಕೆ ಕುರಿತಂತೆ ಮಾಹಿತಿ ಕೇಳಲಾಗಿದೆ. ಈ ಸಂಬಂಧ ಮಾಹಿತಿ ನೀಡಲು ಸಮಿತಿಯು ಸಮಯ ಕೇಳಿದೆ. ಈ ನಿಟ್ಟಿನಲ್ಲಿ ಮತ್ತೆ ಮೂರು ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
ಚುನಾವಣಾ ಆಯೋಗದ ಪರ ವಾದಿಸಿದ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಸರ್ಕಾರದ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಕೋರಲಾಗಿದೆ. ಈ ಅರ್ಜಿ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು. ಇದೆಲ್ಲ ವಾದ ಆಲಿಸಿದ ಪೀಠ ವಿಚಾರಣೆಯನ್ನು ಮುಂದೂಡಿತು.
ಬಿಬಿಎಂಪಿ ಚುನಾವಣೆಗೆ ಆಗಸ್ಟ್ 3ರಂದು ಹೊರಡಿಸಿದ್ದ ಮೀಸಲಾತಿ ಪಟ್ಟಿಯನ್ನು ಸೆಪ್ಟಂಬರ್ನಲ್ಲಿ ರದ್ದುಪಡಿಸಿದ್ದ ಹೈಕೋರ್ಟ್, ನವೆಂಬರ್ 30ರ ಅಂತ್ಯದ ವೇಳೆಗೆ ಹೊಸ ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ಡಿಸೆಂಬರ್ 31ಕ್ಕೂ ಮುನ್ನ ಚುನಾವಣೆ ನಡೆಸಬೇಕು ಎಂದು ಆದೇಶಿಸಿತ್ತು.