ಜನಶಕ್ತಿ ಮೀಡಿಯಾ ವಿಶೇಷ ವರದಿ ಪರಿಣಾಮ: ಎಚ್ಚೆತ್ತುಕೊಂಡ ಬಿಬಿಎಂಪಿ ರಸ್ತೆಗುಂಡಿ ಮುಚ್ಚಿತು

ಬೆಂಗಳೂರು: ಸಮಸ್ಯೆಗಳ ಮದ್ಯೆ ಸಮಸ್ಯೆ ಬೆಂಗಳೂರಿನಲ್ಲಿ ರಸ್ತೆಗುಂಡಿಗಳದ್ದೂ ಒಂದು ದೊಡ್ಡ ಸಮಸ್ಯೆ. ನಗರ ಕೇಂದ್ರಬಿಂದು ಬಿಬಿಎಂಪಿ ಆಡಳಿತ ಕಛೇರಿಯ ಪ್ರವೇಶದ್ವಾರದ ರಸ್ತೆಯಲ್ಲಿ ಗುಂಡಿಬಿದ್ದು ಹಲವು ತಿಂಗಳು ಕಳೆದರೂ ಅದನ್ನು ಸರಿಪಡಿಸದಿರುವ ಬಗ್ಗೆ ಜನಶಕ್ತಿ ಮೀಡಿಯಾ ವರದಿ ಮಾಡಿತ್ತು. ಎಚ್ಚೆತ್ತುಕೊಂಡ ಸರಕಾರ ಗುಂಡಿಯನ್ನು ಸರಿಪಡಿಸಿದೆ.

ಸಿಲಿಕಾನ್‌ ಸಿಟಿ ನಗರದಲ್ಲಿ ಹೆಸರಿಗೆ ಮಾತ್ರ ಅಂದ. ಆದರೆ, ಸಮಸ್ಯೆ ಮಾತ್ರ ಬೃಹದಾಕಾರವಾಗಿಯೇ ಇದೆ ಇದರ ಸಾಲಿಗೆ ರಸ್ತೆಗುಂಡಿಗಳದ್ದು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಎಲ್ಲಿ ನೋಡಿದರಲ್ಲಿ ನಗರದ ತುಂಬೆಲ್ಲ ರಸ್ತೆಗಳು ಹಳ್ಳಕ್ಕೆ ಬಿದ್ದಿವೆ. ಇದಕ್ಕೆ ದೊಡ್ಡ ಕೇಂದ್ರಬಿಂದುವೆಂಬಂತೆ ಬಿಬಿಎಂಪಿ ಪ್ರವೇಶ ದ್ವಾರದ ಪ್ರಮುಖ ರಸ್ತೆ ಹಲವು ದಿನಗಳಿಂದ ಗುಂಡಿ ಬಿದ್ದಿತ್ತು.

ಇದನ್ನು ಓದಿ: ಅಪಾಯಕ್ಕೆ ಆಹ್ವಾನ ನೀಡುತ್ತಿವೆ ರಸ್ತೆಗುಂಡಿಗಳು!, ಬಿಬಿಎಂಪಿ ಕಚೇರಿ ಮುಂದಿದೆ ದೊಡ್ಡದಾದ ರಸ್ತೆಗುಂಡಿ

ಬಿಬಿಎಂಪಿ ಬಳಿ ರಸ್ತೆ ಗುಂಡಿಯ ಬಗ್ಗೆ ಹಾಗೂ ನಗರದ ರಸ್ತೆ ಗುಂಡಿಗಳ ಅವಾಂತರಗಳ ಬಗ್ಗೆ ಇತ್ತೀಚಿಗೆ (ಜುಲೈ 13ರಂದು) ಜನಶಕ್ತಿ ಮೀಡಿಯಾ ವತಿಯಿಂದ ವಿಶೇಷ ವರದಿಯನ್ನು ಮಾಡಲಾಗಿತ್ತು. ಸರಕಾರದ ನಿರ್ಲಕ್ಷ್ಯದ ಬಗ್ಗೆ ಸವಿವರವಾಗಿ ವರದಿಯನ್ನು ಮಾಡಿ ರಸ್ತೆಗುಂಡಿಗಳಿಂದಾಗುತ್ತಿರುವ ಅನಾಹುತಗಳ ಬಗ್ಗೆಯೂ ಬಿಬಿಎಂಪಿಯನ್ನು ಎಚ್ಚರಿಸಲಾಯಿತು.

ಈಗಲೂ ಸಹ ನಗರದ ಹಲವು ರಸ್ತೆಗಳು ಸಮರ್ಪಕವಾಗಿ ಇಲ್ಲ. ಅಲ್ಲಲ್ಲಿ ಗುಂಡಿಬಿದ್ದು ಸಾರ್ವಜನರಿಗೆ ತೊಂದರೆ ಎದುರಾಗಿದ್ದು, ಜನರು ಹೈರಾಣಾಗಿದ್ದಾರೆ. ವೈಟ್‌ ಟ್ಯಾಪಿಂಗ್‌ ಹೆಸರಿನಲ್ಲಿ ನಡೆಸಲಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಂತೂ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರು ನಗರ ಅಭಿವೃದ್ಧಿಯ ದೃಷ್ಠಿಯಲ್ಲಿ ಹಲವು ಯೋಜನೆಗಳನ್ನು(ಸ್ಮಾರ್ಟ್‌ ಸಿಟಿ) ಕಾರ್ಯಗತಗೊಳಿಸುವ ಸರಕಾರಗಳು ಕೂಡಲೇ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕಿದೆ. ಆ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು.

ವರದಿ: ವಿನೋದ ಶ್ರೀರಾಮಪುರ

 

Donate Janashakthi Media

Leave a Reply

Your email address will not be published. Required fields are marked *