ಬೆಂಗಳೂರು : ಬೆಂಗಳೂರಲ್ಲಿ ನಡೆದ ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣದ ತನಿಖಾ ವರದಿ ಈಗಾಗಲೇ ಬಿಬಿಎಂಪಿ ಕೈ ಸೇರಿದ್ದು, ಈ ಹಗರಣದಲ್ಲಿ ಬಿಬಿಎಂಪಿ ಅಧಿಕಾರಿಗಳೇ ಶಾಮೀಲಾಗಿರುವುದು ಬಟಾ ಬಯಲಾಗಿದೆ.
ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಪ್ರಕರಣ ಸಂಬಂಧ 4 ತಂಡಗಳನ್ನು ರಚನೆ ಮಾಡಲಾಗಿತ್ತು. ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಂದು ತಂಡ ರಚನೆ ಮಾಡಿದ್ದೆವು. ಹೆಚ್ಚುವರಿ ಜಿಲ್ಲಾ ಚುಣಾವಣಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಎಷ್ಟು ಜನರಿಗೆ ಬಿಎಲ್ಒ, ಬಿಎಲ್ಸಿ ಕಾರ್ಡ್ ನೀಡಲಾಗಿದೆ? ವೈಯಕ್ತಿಕ ಮಾಹಿತಿ ಸಂಗ್ರಹ ಮಾಡಿದ್ದಾರಾ? ಎಂಬುವುದರ ಕುರಿತು ಸಮಗ್ರ ತನಿಖೆಯಾಗಿದೆ. ವರದಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇನ್ನೂ ತನಿಖಾ ವರದಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಚಿಲುಮೆ ಸಂಸ್ಥೆಗೆ ಬಿಎಲ್ಒ ಎಂದು ಐಡಿ ಕಾರ್ಡ್ ಹಂಚಿಕೆ ಮಾಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆ ಮಹಾದೇವಪುರ ವಿಧಾನಸಭಾ ಕ್ಷೇತ್ರದ ಆರ್ಓ ಚಂದ್ರಶೇಖರ್, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಆರ್ಓ ಭೀಮಾಶಂಕರ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಆರ್ಓ ಸುಹೇಲ್ ಅಹ್ಮದ್ನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.
ಪ್ರಕರಣ ಸಂಬಂಧ ಈವರೆಗೆ 15 ಜನರ ವಿಚಾರಣೆ ನಡೆಸಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ತೀವ್ರಗೊಳಿಸಲಾಗಿದೆ. ಡಿಜಿಟಲ್ ಆಪ್ ಡೆವಲಪ್ಮೆಂಟ್ ಮಾಡಿದವರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ. ಲ್ಯಾಪ್ಟಾಪ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ. ಈಗ ಬಿಬಿಎಂಪಿ ಆರ್.ಒ.ಗಳ ವಿಚಾರಣೆ ಮಾಡಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಹೇಳಿಕೆ ನೀಡಿದ್ದಾರೆ.