ಬಸವರಾಜ ಹೊರಟ್ಟಿ ಸೇರ್ಪಡೆಗೆ ಬಿಜೆಪಿಯಲ್ಲಿ ತೀವ್ರ ವಿರೋಧ, ವರಿಷ್ಠರಿಗೆ ದೂರು

ಬೆಂಗಳೂರು : ಜೆಡಿಎಸ್ ತೊರೆದು ಬಿಜೆಪಿ ಸೇರಲು ಮುಂದಾಗಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಏಕೆಂದರೆ ಹೊರಟ್ಟಿ ಅವರ ಪಕ್ಷ ಸೇರ್ಪಡೆಗೆ ಸ್ವಪಕ್ಷೀಯರೇ ಭಾರೀ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದೆಂದು ಬಿಜೆಪಿಯೊಳಗಿನ ಮೂಲ ಕಾರ್ಯಕರ್ತರು ವರಿಷ್ಠರ ಮೇಲೆ ಒತ್ತಡ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಬಿಜೆಪಿಯ ಕೆಲವು ಪ್ರಮುಖ ನಾಯಕರಿಗೆ ಹೊರಟ್ಟಿ ಅವರ ಮೇಲೆ ಕೇಳಿಬಂದಿರುವ ಆರೋಪಗಳು ಹಾಗೂ ಈ ಹಿಂದೆ ಅವರು ಬಿಜೆಪಿ ಕುರಿತು ನೀಡಿರುವ ಪತ್ರಿಕಾ ಹೇಳಿಕೆಗಳ ತುಣುಕುಗಳನ್ನು ದೆಹಲಿಗೆ ತಲುಪಿಸಿದ್ದಾರೆ ಎಂದು ಬಿಜೆಪಿ ವಲಯದಲ್ಲಿ ಚರ್ಚೆ ಆಗುತ್ತಿದೆ.

ಹೊರಟ್ಟಿ ಅವರು ಎಂದೂ ಕೂಡ ಬಿಜೆಪಿಗೆ ನಿಷ್ಠಾವಂತರಾಗಿಲ್ಲ. ಈಗ ಜೆಡಿಎಸ್‍ನಿಂದ ಸ್ರ್ಪಧಿಸಿದರೆ ಸೋಲುವುದು ಕ್ಷೇತ್ರದಲ್ಲಿ ಕಟ್ಟಿಟ್ಟ ಬುತ್ತಿ ಎಂಬ ಏಕೈಕ ಕಾರಣಕ್ಕಾಗಿ ಬಿಜೆಪಿ ಬಾಗಿಲು ಬಡಿದಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಅಧಿಕಾರದ ಆಸೆಗಾಗಿ ಬಂದವರಿಗೆ ಮಣೆ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ದೂರಿನಲ್ಲಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಹೊರಟ್ಟಿ ಪಕ್ಷ ಸೇರ್ಪಡೆಗೆ ವಿರೋಧಿಸಿ ಬಿಜೆಪಿ ಮುಖಂಡರು ಹತ್ತು ಅಂಶಗಳನ್ನು ಪತ್ರದಲ್ಲಿ ತಿಳಿಸಿದ್ದಾರೆ. ಬಸವರಾಜ್ ಹೊರಟ್ಟಿಗೆ 76 ವರ್ಷ ಆಗಿದೆ, ಪಕ್ಷದ ನಿಯಮದಂತೆ ಇವರಿಗೆ ಟಿಕೆಟ್ ನೀಡಲು ಅವಕಾಶವಿಲ್ಲ ಎನ್ನುವುದು ಮುಖ್ಯ ಅಂಶವಾಗಿದೆ. ವಿಧಾನ ಪರಿಷತ್ ಸದಸ್ಯರಾಗಿದ್ದ ವೇಳೆ ಹೊರಟ್ಟಿ ಒಟ್ಟಿಗೆ ಎರಡೆರೆಡು ವೇತನ ಪಡೆದಿದ್ದರೆಂಬ ಆರೋಪ ಮಾಡಲಾಗಿದೆ.

ಇದನ್ನೂ ಓದಿ : ರಾಜಕೀಯ ಹಂಬಲ: ಬಿಜೆಪಿ ಸೇರುವ ಕಾಲ ಬಂದಿದೆ-ಬಸವರಾಜ ಹೊರಟ್ಟಿ

ಏನದು ಆರೋಪ : ಬಸವರಾಜ ಹೊರಟ್ಟಿ 1980ರಲ್ಲಿ ಪರಿಷತ್ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಆದರೆ 1999 ರವರೆಗೆ ಲ್ಯಾಮಿಂಗ್ಟನ್ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ವೇತನ ಪಡೆದಿದ್ದಾರೆಂದು ಆರೋಪ ಕೇಳಿ ಬಂದಿದೆ.  ಧಾರವಾಡದಲ್ಲಿ ಎಸ್‍ಟಿ ಸಮಾಜಕ್ಕೆ ಸೇರಿದ ಸರ್ವೋದಯ ಶಿಕ್ಷಣ ಸಂಸ್ಥೆ ಆಸ್ತಿ ಕಬಳಿಸಿದ ಆರೋಪ ಶಿಕ್ಷಣ ಸಂಸ್ಥೆ ವಿಚಾರದಲ್ಲಿ ಇವರ ಮೇಲೆ ಎಫ್‍ಐಆರ್ ದಾಖಲಾಗಿರುವುದನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದ್ದು, ದಾಖಲೆ ಸಮೇತ ಪತ್ರ ಕಳುಹಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಸವರಾಜ್ ಹೊರಟ್ಟಿ ಒಬ್ಬ ಕಳಂಕಿತ ವ್ಯಕ್ತಿ, ಇಂತಹ ಕಳಂಕಿತ ವ್ಯಕ್ತಿಗೆ ಟಿಕೆಟ್ ಕೊಟ್ಟು ಸಾಸುವುದೇನಿದೆ ಎಂಬ ಪ್ರಶ್ನೆ? ಪತ್ರದ ಜೊತೆಗೆ ಹಲವು ದಾಖಲೆಗಳನ್ನು ಬಿಜೆಪಿ ಪ್ರಮೂಖರು ಹೈಕಮಾಂಡ್‍ಗೆ ಸಲ್ಲಿಸಿದ್ದಾರೆ. ಹೊರಟ್ಟಿಯವರನ್ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಬಾರದೆಂದು ಮನವಿ ಮಾಡಲಾಗಿದೆ. ಹಲವು ಶಿಕ್ಷಕರು, ನಿವೃತ್ತ ಪ್ರಾಂಶುಪಾಲರಿಂದಲೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಎಂಬ ಗುಸು ಗುಸು ಬಿಜೆಪಿಯಲ್ಲಿ ಕೇಳುತ್ತಿದೆ.

ಪ್ರಚಾರ ಆರಂಭಿಸಿದ ಮೋಹನ್ ಲಿಂಬೇಕಾಯಿ!: ಇನ್ನು ಬಸವರಾಜ ಹೊರಟ್ಟಿ ಸೇರ್ಪಡೆಗೆ ಆರಂಭದಿಂದಲೂ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವ ಮೋಹನ್ ಲಿಂಬಿಕಾಯಿ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರವನ್ನು ಆರಂಭಿಸಿದ್ದಾರೆ. ಪಕ್ಷವು ತಮಗೆ ಟಿಕೆಟ್ ನೀಡೇ ನೀಡುತ್ತದೆ ಎಂಬ ಆತ್ಮವಿಶ್ವಾಸದಲ್ಲಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಒಳಪಡುವ ಗದಗ, ಹಾವೇರಿ, ಧಾರವಾಡ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಪ್ರಚಾರವನ್ನು ಕೂಡ ಸದ್ದಿಲ್ಲದೆ ನಡೆಸುತ್ತಿದ್ದಾರೆ.

ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಹೈಕಮಾಂಡ್ ಗೆ ನನ್ನ ಹೆಸರನ್ನು ಮಾತ್ರ ಬಿಜೆಪಿ ಕಳಿಸಿದೆ. ನನ್ನ ಟಿಕೇಟ್ ಅಂತಿಮಗೊಳ್ಳಲಿದ್ದು, ಗೊಂದಲ ಬೇಡ. ಪಕ್ಷಕ್ಕಾಗಿ ದುಡಿದ, ಕ್ರಿಯಾಶೀಲರಿಗೆ ಪ್ರಾತಿನಿಧ್ಯತೆ ನೀಡಬೇಕೆಂಬ ನಿಯಮವಿದೆ. ಅದನ್ನು ಪಾಲನೆ ಮಾಡಬೇಕೆಂದು ಮೋಹನ ಲಿಂಬಿಕಾಯಿ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *