ಧಾರವಾಡ: ಹಿರಿಯ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ(63) ಇಂದು ನಿಧನರಾಗಿದ್ದಾರೆ. ರಕ್ತದ ಒತ್ತಡದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಕಲಾವಿದ ಬಸಲಿಂಗಯ್ಯ, ಪತ್ನಿ, ಓರ್ವ ಪುತ್ರನನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಜಾನಪದ ಕಲಾವಿದ ಬಸಲಿಂಗಯ್ಯ ಧಾರವಾಡದ ನಿವಾಸಿಯಾಗಿದ್ದರು. ಜಾನಪದ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದರು. ಇವರ ಪತ್ನಿ ವಿಶ್ವೇಶ್ವರಿ ಹಿರೇಮಠ ಕೂಡ ಜಾನಪದ ಕಲಾವಿದೆಯಾಗಿದ್ದು ಜಾನಪದ ಸಂಶೋಧನಾ ಸಂಸ್ಥೆ ಮೂಲಕ ಬಸಲಿಂಗಯ್ಯ ಹಿರೇಮಠ ದಂಪತಿ ಕಲಾ ಸೇವೆ ಮಾಡುತ್ತಿದ್ದರು. ಅಲ್ಲದೇ ಅನೇಕ ಜಾನಪದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಕುಲಗೋಡು ತಮ್ಮಣ್ಣ ವಿರಚಿತ 12 ಗಂಟೆಗಳ ಅವಧಿಯ ಶ್ರೀ ಕೃಷ್ಣ ಪಾರಿಜಾತ ವನ್ನು ಮೂರು ಗಂಟೆಯಲ್ಲಿ ಪ್ರೇಕ್ಷಕರ ಮನ ಮುಟ್ಟುವಂತೆ ಮಾಡಿ ಸಾವಿರಕ್ಕೂ ಅಧಿಕ ಪ್ರಯೋಗದಿಂದ ಜನ ಮಾನಸದಲ್ಲಿ ಛಾಪು ಮೂಡಿಸಿದ್ದರು. ಜಾನಪದ ಸಂಶೋಧನಾ ಸಂಸ್ಥೆ ಆರಂಭಿಸಿ ಯುವ ಕಲಾವಿದರು, ಯುವ ಸಮೂಹವನ್ನು ಸಜ್ಜುಗೊಳಿಸಿದ್ದರು. ಬಸವಲಿಂಗಯ್ಯ ಅವರ ಕಂಚಿನಕಂಠದ ಹಾಡುಗಾರಿಕೆಗೆ ಎಲ್ಲರೂ ತಲೆತೂಗುತ್ತಿದ್ದರು.
ಸಾವಿರಾರು ಜಾನಪದ ಕಾರ್ಯಕ್ರಮಗಳನ್ನು ದೇಶ-ವಿದೇಶದಲ್ಲಿ ಪ್ರಸ್ತುತ ಪಡಿಸಿದ್ದ ಬಸಲಿಂಗಯ್ಯ ಅವರ ನಿಧನ ಜಾನಪದ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.