ಬಾರಬಂಕಿ: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಬಾಬುರಿ ಗ್ರಾಮದಲ್ಲಿ ಬಸ್ ಮತ್ತು ಮರಳು ತುಂಬಿದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಇದುವರೆಗೆ 15 ಮಂದಿ ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ.
ದೆಹಲಿಯಿಂದ-ಬಹ್ರೈನ್ಗೆ ಹೊರಡುತ್ತಿದ್ದ ಬಸ್ನಲ್ಲಿ 70 ಜನರು ಪ್ರಯಾಣಿಸುತ್ತಿದ್ದರು. ಬಸ್ ಚಾಲಕ ಅಡ್ಡ ಬಂದ ಬಿಡಾಡಿ ನಾಯಿಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಈ ಘಟನೆ ನಡೆದಿದೆ ಎಂದು ಬಾರಾಬಂಕಿ ಪೊಲೀಸ ಅಧಿಕಾರಿ ಯಮುನಾ ಪ್ರಸಾದ್ ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಘಟನೆಯಲ್ಲಿ ಸ್ಥಳದಲ್ಲೇ 9 ಮಂದಿ ನಿಧರಾಗಿದ್ದು, ಆಸ್ಪತ್ರೆಯಲ್ಲಿ 6 ಮಂದಿ ತೀವ್ರತರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲಖೌನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ 11 ಮಂದಿ ಮತ್ತು 4 ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಎರಡು ಲಕ್ಷ ಪರಿಹಾರ ಘೋಷಣೆ: ಅಪಘಾತದಲ್ಲಿ ಜೀವ ಕಳೆದುಕೊಂಡವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ 50 ಸಾವಿರ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವವರಿಗೆ ಸಂಪೂರ್ಣ ಗುಣಮಟ್ಟದ ಚಿಕಿತ್ಸೆ ನೀಡಲು ಜಿಲ್ಲಾಡಳಿತಕ್ಕೆ ಸರ್ಕಾರ ಸೂಚಿಸಿದೆ.
ವರದಿ: ಸಾಗರ್ ಕೂಡಗಿ