ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳು ಹಾಗೂ ಕೆಲವು ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 10 ಲಕ್ಷ ನೌಕರರು ಮಾರ್ಚ್ 15-16ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ.
ನಾಳೆಯಿಂದ ಸತತವಾಗಿ ನಾಲ್ಕು ದಿನಗಳು ಬ್ಯಾಂಕುಗಳ ಕಾರ್ಯನಿರ್ವಹಣೆ ಇರುವುದಿಲ್ಲ. ನಾಳೆ ಎರಡನೇ ಶನಿವಾರ ಹಾಗೂ ಭಾನುವಾರ ರಜೆ ಮತ್ತು ಸೋಮವಾರ ಮತ್ತು ಮಂಗಳವಾರ ಬ್ಯಾಂಕ್ ಮುಷ್ಕರ ಇರುತ್ತದೆ.
ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು 2021ರ ಫೆಬ್ರವರಿ 01ರಂದು 2021-2022ರ ಸಾಲಿನ ಬಜೆಟ್ ಮಂಡನೆಯ ಸಂದರ್ಭದಲ್ಲಿ 1.75 ಲಕ್ಷ ಕೋಟಿ ರೂ.ಗಳ ಹೂಡಿಕೆಯ ಭಾಗವಾಗಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಲಯದ ಸರಕಾರಿ ಪ್ರಮುಖ ಬ್ಯಾಂಕುಗಳನ್ನು ಖಾಸಗೀಕರಿಸಲಾಗುವುದು ಎಂದು ಮಂಡಿಸಿದರು.
ಸರಕಾರಿ ಬ್ಯಾಂಕಿನೊಂದಿಗೆ ಸಾಮಾನ್ಯ ವಿಮಾ ಕಂಪನಿಯನ್ನು ಸಹ ಖಾಸಗೀಕರಣಗೊಳಿಸಲು ಸರಕಾರ ಹೊರಟಿದೆ. ಇದರಿಂದ ದೇಶದ ಆರ್ಥಿಕ ರಂಗದಲ್ಲಿ ಖಾಸಗೀಪಾಲುದಾರಿಕೆ ಹೆಚ್ಚಾಗುತ್ತದೆ. ಸಾರ್ವಜನಿಕ ಹಣಕಾಸು ರಂಗವು ತೀವ್ರತರವಾದ ಬಿಕ್ಕಟ್ಟಿ ಒಳಗಾಗಲಿದೆ. ಅಲ್ಲದೆ, ಇದರಿಂದ ಬ್ಯಾಂಕ್ ನೌಕರರ ಉದ್ಯೋಗ ಭವಿಷ್ಯವು ಅತಂತ್ರಗೊಳ್ಳಲಿದೆ ಎಂದು ಸಂಘಟನೆ ಆರೋಪಿಸಿದೆ.
ದೇಶದ ವಿವಿಧ ಬ್ಯಾಂಕ್ ನೌಕರರ ಸಂಘಟನೆಗಳು ಮತ್ತು ಒಕ್ಕೂಟಗಳು ಒಟ್ಟುಗೂಡಿ ಯನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್(ಯುಎಫ್‌ಬಿಯು) ಜಂಟಿಯಾಗಿ ಮುಷ್ಕರಕ್ಕೆ ಕರೆ ನೀಡಿದೆ.
ಸಾರ್ವಜನಿಕ ಬ್ಯಾಂಕುಗಳ ಖಾಸಗೀಕರಣವನ್ನು ಕೈಬಿಡಬೇಕೆಂದು ಈಗಾಗಲೇ ಹಲವುಸುತ್ತಿನ ಮಾತುಕತೆ ನಡೆದಿದೆ. ಇತ್ತೀಚಿಗೆ ಮಾರ್ಚ್ 4, 9 ಮತ್ತು 10ರಂದು ಸರಕಾರ ಮತ್ತು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(ಎಐಬಿಇಎ)ದೊಂದಿಗೆ ಮಾತುಕತೆ ನಡೆದಿದೆ ಎಂದು ಎಐಬಿಇಎ ಸಂಘಟನೆ ತಿಳಿಸಿದೆ.
ಈ ಬಗ್ಗೆ ಹಣಕಾಸು ಸಚಿವಾಲಯು ಯಾವುದೇ ಸೂಕ್ತಕ್ರಮವನ್ನು ಕೈಗೊಂಡಿಲ್ಲ. ಹಾಗಾಗಿ ನಾವು ಎರಡು ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರವನ್ನು ಕೈಗೊಳ್ಳುತ್ತಿದ್ದೇವೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.