ಪಡಿತರ ರಾಗಿಗೆ ಕನ್ನ: ಬಂಗಾರಪೇಟೆಯಿಂದ ಬಂದ 300 ಕ್ವಿಂಟಾಲ್ ರಾಗಿ ವಶ

ಇನ್ನೂ ನಿಂತಿಲ್ಲ ಆಹಾರಕ್ಕೆ ಕನ್ನ ಹಾಕುವ ಜಾಲ!

ಹಾಸನ: ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸುವ ಪಡಿತರ ರಾಗಿಯನ್ನು ಕಾಳಸಂತೆಗೆ ಸಾಗಿಸುತ್ತಿದ್ದ ಮತ್ತೊಂದು ಅಕ್ರಮ ಜಾಲ ಬಯಲಾಗಿದೆ.

ಕೋಲಾರ ಜಿಲ್ಲೆ ಬಂಗಾರಪೇಟೆಯಿಂದ ಹಾಸನಕ್ಕೆ ಬರುತ್ತಿದ್ದ ಲಾರಿಯನ್ನು ಆಮ್‌ ಆದ್ಮಿ ಪಕ್ಷ(ಎಎಪಿ)ದ ಕಾರ್ಯಕರ್ತರು ತಡೆದು ಪರಿಶೀಲಿಸಿದಾಗ ಕಾನೂನು ಬಾಹಿರ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಬಡಾವಣೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಸುಮಾರು 300 ಕ್ವಿಂಟಾಲ್ ರಾಗಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.

ಸಿಕ್ಕಿ ಬಿದ್ದಿದ್ದು ಹೇಗೆ:

ಪಡಿತರ ರಾಗಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ನಮಗೇ 100 ಟನ್ ರಾಗಿ ಬೇಕು ಎಂದು ವ್ಯಾಪಾರಸ್ಥ ಎಎಪಿ ಪಕ್ಷದ ಮುಖಂಡರು ಕೋಲಾರ ಜಿಲ್ಲೆಯ ವರ್ತಕರಿಗೆ ಕರೆ ಮಾಡಿದ್ದರು. ಆಗ ಪಡಿತರ ಚೀಲದಲ್ಲೇ ರಾಗಿ ತೆಗೆದುಕೊಂಡು ಬರುತ್ತೇವೆ ಎಂದು ವರ್ತಕ ಹೇಳಿದ್ದ.

ಇದಕ್ಕೆ ಯಾವುದೇ ದಾಖಲೆ ಪತ್ರ ಇರಲ್ಲ, ಆದರೆ ತೂಕದ ಪ್ರಮಾಣ ಪತ್ರ ಮಾತ್ರ ಸಿಗಲಿದೆ ಎಂದು ಬಂಗಾರಪೇಟೆ ವರ್ತಕ ತಿಳಿಸಿದ್ದ.

ಅದರಂತೆ ಬಂಗಾರಪೇಟೆ ಎಪಿಎಂಸಿಯಿಂದ ಲೋಡ್ ಆಗಿ 12 ಚಕ್ರದ ಕೆಎ-08-8829 ನಂಬರಿನ ಲಾರಿಯಲ್ಲಿ ಇಂದು ಮುಂಜಾನೆ 300 ಕ್ವಿಂಟಾಲ್ ಪಡಿತರ ರಾಗಿ ಹಾಸನಕ್ಕೆ ಬಂದಿತ್ತು. ರಾಗಿ ಹಾಸನಕ್ಕೆ ಬಂದಿದ್ದನ್ನು ಖಾತ್ರಿಪಡಿಸಿಕೊಂಡ ಎಎಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ನಗರದ ಡೇರಿ ವೃತ್ತದ ಬಳಿ ಲಾರಿ ತಡೆದು ಪೊಲೀಸರು ಮತ್ತು ಅಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಪಡಿತರ ಧಾನ್ಯ ಸಾಗಾಟ ಚೀಲದಲ್ಲೇ 300 ಕ್ವಿಂಟಾಲ್ ರಾಗಿ ಸಾಗಿಸುತ್ತಿದ್ದುದು ಪತ್ತೆಯಾಗಿದೆ.

ಬಡವರಿಗೆ ಸೇರಬೇಕಿದ್ದ ಪಡಿತರ ರಾಗಿಗೆ ಕನ್ನ ಹಾಕಿ ದುಪ್ಪಟ್ಟು ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಲಾರಿಯನ್ನು ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದು, ಆಹಾರ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಈ ನಡುವೆ ಲಾರಿಯನ್ನು ಹಾಸನಕ್ಕೆ ತೆಗೆದುಕೊಂಡು ಹೋಗು ಎಂದು ಮಾಲೀಕರು ಹೇಳಿದರು, ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದಿದ್ದ ಲಾರಿ ಚಾಲಕ ನಂತರ ಎಸ್ಕೇಪ್ ಆಗಿದ್ದಾರೆ.

ಈ ಹಿಂದೆಯೂ ನಡೆದಿತ್ತು:

ಈ ಮೊದಲು ಹಾಸನ, ಅರಸೀಕೆರೆಯಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಣೆ ಕೃತ್ಯ ಪತ್ತೆಯಾಗಿತ್ತು. ವಾರದ ಹಿಂದೆ ಬೇಲೂರಿನ ಸಮಾಜ ಕಲ್ಯಾಣ ವಸತಿ ನಿಲಯಕ್ಕೆ ಸಾಗಿಸಬೇಕಿದ್ದ ಕ್ವಿಂಟಾಲ್‌ ಗಟ್ಟಲೆ ಗೋಧಿಯನ್ನು ರಾತ್ರೋರಾತ್ರಿ ಅಕ್ರಮ ಸಾಗಾಟ ಮಾಡುತ್ತಿದ್ದುದನ್ನು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಪತ್ತೆ ಮಾಡಿದ್ದರು.

ಆದರೆ ಈ ಬಗ್ಗೆ ಏನಾಗಿದೆ ಎಂಬ ಖಚಿತ ಮಾಹಿತಿ ಈವರೆಗೂ ಸಿಕ್ಕಿಲ್ಲ.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ:

ಈ ವೇಳೆ ಮಾತನಾಡಿದ ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಪಿ.ಶಿವಕುಮಾರ್, ಜಿಲ್ಲೆಯಲ್ಲಿ ಪಡಿತರ ಧಾನ್ಯವನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಆಗಾಗ ಬೆಳೆಕಿಗೆ ಬರುತ್ತಲೇ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕೆಲ ದಿನಗಳ ಹಿಂದೆ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾದಿAದ ನ್ಯಾಯ ಬೆಲೆ ಅಂಗಡಿ ಮೂಲಕ ಬಡ ಜನರಿಗೆ ತಲುಪಬೇಕಾಗಿದ್ದ ನಿಗದಿತ ಅಕ್ಕಿ, ರಾಗಿಯಲ್ಲಿ ಕಡಿತ ಮಾಡಿ ಮಿಕ್ಕ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು.

ಈ ಬಗ್ಗೆ ಕಳೆದ 15 ದಿನಗಳಿಂದಲೂ ಪರಿಶೀಲನೆಯಲ್ಲಿ ತೊಡಗಿದ್ದೆವು. ಈ ದಂಧೆ ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದ ಇತರೆಡೆಗಳಲ್ಲಿಯೂ ನಡೆಯುತ್ತಿದೆ ಎಂಬ ಮಾಹಿತಿ ಇತ್ತು. ಬಂಗಾರಪೇಟೆ ಮೂಲದ ಹರೀಶ್ ಎನ್ನುವ ವ್ಯಕ್ತಿ ಬಗ್ಗೆ ತಿಳಿದು, ಆತನಿಗೆ ದೂರವಾಣಿ ಕರೆ ಮಾಡಿ ನಮಗೆ 100 ಟನ್ ರಾಗಿ ಬೇಕು ಎಂದು ಕೇಳಿದಾಗ ಆತ ಕೊಡುವುದಾಗಿ ಹೇಳಿದ್ದ ಎಂದರು. ಒಂದು ಕ್ವಿಂಟಾಲ್ ರಾಗಿಗೆ 1850 ರೂ. ಲೋಡ್ ಬಂದ ಮೇಲೆ ಹಣ ಕೊಡಬೇಕು. ಎಫ್‌ಸಿಐ ಗೋಡಾನ್ ಮುದ್ರೆ ಇರುವ ಚೀಲದಲ್ಲೇ ರಾಗಿ ಕಳಿಸುವುದಾಗಿ ಹೇಳಿದ್ದ. ಇಂದು ಬೆಳಗ್ಗೆ 1 ಲೋಡ್ ರಾಗಿ ಬಂದಿದೆ ಎಂದು ವಿವರಿಸಿದರು.

ಬಡವರಿಗೆ ಸಲ್ಲಬೇಕಾದಂತಹ ರಾಗಿ, ಉಳ್ಳವರ ಕೈ ಸೇರಿ ಅಕ್ರಮ ನಡೆಯುತ್ತಿದೆ. ಇದಕ್ಕೆಲ್ಲಾ ಭ್ರಷ್ಟ ಬಿಜೆಪಿ ಸರ್ಕಾರವೇ ಕಾರಣ ಎಂದು ದೂರಿದರು.

ಇದೀಗ ಮಾಲು ಸಮೇತ ರಾಗಿಯನ್ನು ಪತ್ತೆ ಹಚ್ಚಲಾಗಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಆಪ್ ಮುಖಂಡರಾದ ಶ್ರೀನಿವಾಸ್, ಚಂದ್ರಶೇಖರ್ ಇತರರಿದ್ದರು.

Donate Janashakthi Media

Leave a Reply

Your email address will not be published. Required fields are marked *