ಬೆಂಗಳೂರು :ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಳೆಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಎರಡು ಅಂತಸ್ತಿನ ಕಟ್ಟಡ ಹೊತ್ತಿ ಉರಿದ ಘಟನೆ ಜನವರಿ 26ರ ತಡರಾತ್ರಿ ನಡೆದಿದೆ. ಬೆಂಗಳೂರು
ಕಟ್ಟಡದಲ್ಲಿ ಸಿಲುಕಿದ್ದ ಓರ್ವ ಯುವಕನನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಕಟ್ಟಡದಲ್ಲಿದ್ದ ಪೇಂಟಿಂಗ್, ಬ್ಯಾಗ್ ಅಂಗಡಿ ಬೆಂಕಿಗಾಹುತಿಯಾಗಿದ್ದು, 30 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟುಕರಕಲಾಗಿವೆ. ಎರಡು ಅಂತಸ್ತಿನ ಕಟ್ಟಡ ಕೃಷ್ಣಮೂರ್ತಿ ಎಂಬುವರಿಗೆ ಸೇರಿದ್ದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಕಿ ಮೊದಲು ಪೇಂಟ್ ಮಾರುವ ಅಂಗಡಿಯಲ್ಲಿ ಕಾಣಿಸಿಕೊಂಡಿದೆ. ಕಾಲಕ್ರಮೇಣ ಬೆಂಕಿ ಕಟ್ಟಡವನ್ನೇ ಆವರಿಸಿದೆ. ವಿಚಾರ ತಿಳಿದ ಕೂಡಲೆ ಸ್ಥಳಕ್ಕೆ ದೌಡಾಯಿಸಿದ ಮಾಲೀಕ ಕೃಷ್ಣಮೂರ್ತಿ ಕುಟುಂಬ ಬೆಂಕಿ ಅನಾಹುತ ಕಂಡು ಕಣ್ಣೀರು ಹಾಕಿದೆ. ಅಗ್ನಿಶಾಮಕ ಸಿಬ್ಬಂದಿ ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಘಟನೆಗೆ ನಿಖರ ಕಾರಣ ಏನು ಎಂಬುದರ ಕುರತು ತನಿಖೆ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಆಗಾಗ ಅಗ್ನಿ ಅವಘಡಗಳು ಸಂಭವಿಸುತ್ತಿರುತ್ತವೆ. 2023ರಲ್ಲಿ ಸಾಕಷ್ಟು ಅಗ್ನಿ ಅವಘಡಗಳು ಸಂಭವಿಸಿ ಸಾವು – ನೋವು ಸಂಭವಿಸಿತ್ತು. ಕಳೆದ ತಿಂಗಳು ಡಿಸೆಂಬರ್ 18 ರಂದು ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬ್ರಿಡ್ಜ್ ಬಳಿ ಇರುವ ಮೂರು ಅಂತಸ್ತಿನ ಕಟ್ಟಡಲ್ಲಿ ರಾತ್ರಿ 11.45ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿತ್ತು.
ಕುಂಬಾರಪೇಟೆಯ ಗೋದಾಮಿನಲ್ಲಿ ನವೆಂಬರ್ 19 ರಂದು ಅಗ್ನಿ ಅವಘಡ ಸಂಭವಿಸಿತ್ತು. ಆದಿಲ್ ಎಂಬುವರಿಗೆ ಸೇರಿದ ಪ್ಲಾಸ್ಟಿಕ್ ಗೋದಾಮು ಬೆಂಕಿಗಾಹುತಿಯಾಗಿತ್ತು. ಮಧ್ಯಾಹ್ನ ಹೊತ್ತಿಕೊಂಡಿದ್ದ ಬೆಂಕಿ, ನವೆಂಬರ್ 20ರ ವರೆಗೆ ಧಗಧಗಿಸಿತ್ತು.
ಪದೇ ಪದೇ ಕಟ್ಟಡಗಳಿಗೆ ಬೆಂಕಿ ಹತ್ತಿಕೊಳ್ಳುತ್ತಿರುವುದರ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಯಬೇಕಿದೆ. ಆಗ ಮಾತ್ರ ಇಂತಹ ಅನಾಹುತಗಳನ್ನು ತಡೆಯಲು ಸಾಧ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.