ಬೆಂಗಳೂರು ನ್ಯಾಷನಲ್ ಕಾಲೇಜು | ದಲಿತ ಪ್ರಾಧ್ಯಾಪಕರಿಗೆ ಹಿಂಬಡ್ತಿ ನೀಡಿ ಅವಮಾನ

ಬೆಂಗಳೂರು: ಕಳೆದ 13 ವರ್ಷದಿಂದ ನಗರದ ಬಸವನಗುಡಿಯಲ್ಲಿರುವ ಪ್ರತಿಷ್ಠಿತ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಭಾಷಾ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಚಿಂತಕ ಮತ್ತು ಲೇಖಕ ಡಾ. ರವಿಕುಮಾರ್ ಭಾಗಿ ಅವರಿಗೆ ಕಾಲೇಜಿನ ಆಡಳಿತ ಮಂಡಳಿ ವಿನಾ ಕಾರಣ ಹಿಂಬಡ್ತಿ ನೀಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕಾಲೇಜಿನ ಆಡಳಿತ ಮಂಡಳಿಯ ಈ ನಿಲುವು ದಲಿತ ವಿರೋಧಿಯಾಗಿದ್ದು, ಅದನ್ನು ಸರಿಪಡಿಸದಿದ್ದರೆ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

1920ರಲ್ಲಿ ಆರಂಭವಾದ ಬೆಂಗಳೂರಿನ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಕಾಲೇಜು ರಾಜ್ಯ ರಾಜಧಾನಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದೆ. ಗಾಂಧಿವಾದಿ, ವೈಜ್ಞಾನಿಕ ಚಿಂತನೆಗಳ ಪ್ರತಿಪಾದಕ ಎಚ್. ನರಸಿಂಹಯ್ಯ ಅವರು ಸೇವೆ ಸಲ್ಲಿಸಿ ಕಟ್ಟಿದ ನ್ಯಾಷನಲ್ ಕಾಲೇಜು ಆಡಳಿತ ಮಂಡಳಿ ಇತ್ತೀಚೆಗೆ ‘ದಲಿತ ವಿರೋಧಿ’ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದು, ದಲಿತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.

ಇದನ್ನೂ ಓದಿ: ಕಾರ್ಪೊರೇಟ್ ತಿಜೋರಿ ತುಂಬಿಸುವ 10 ನೇ ರೈತ-ಕಾರ್ಮಿಕ ವಿರೋಧಿ ಬಜೆಟ್: ಸಂಯುಕ್ತ ಹೋರಾಟ ಕರ್ನಾಟಕದ ಪ್ರತಿಭಟನೆಗೆ ಕರೆ

ಇದೇ ಕಾಲೇಜಿನಲ್ಲಿ ಕಳೆದ 13 ವರ್ಷಗಳಿಂದ ಕನ್ನಡ ಭಾಷಾ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಚಿಂತಕ ಡಾ. ರವಿಕುಮಾರ್ ಭಾಗಿ ಅವರಿಗೆ ಪದವಿ ಕಾಲೇಜಿನಿಂದ ಪಿಯು ಕಾಲೇಜಿಗೆ ಹಿಂಬಡ್ತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ , ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಮಾರ್ಗದರ್ಶಕರಾಗಲು ಸೇವಾ ಧೃಢೀಕರಣ ಪತ್ರವನ್ನು ಕಾಲೇಜಿನ ಪ್ರಾಂಶುಪಾಲರು ನೀಡದೆ ಸತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದು ವರದಿಯಾಗುತ್ತಿದ್ದಂತೆ ರವಿಕುಮಾರ್ ಬಾಗಿ ಅವರ ಪರವಾಗಿ ಹೋರಾಟಗಾರರಾದ ಮಾವಳ್ಳಿ ಶಂಕರ್, ಬಂಜಗೆರೆ ಜಯಪ್ರಕಾಶ್, ಕೆಎಸ್ ವಿಮಲ, ಚಿಂತಕರಾದ ಶ್ರೀಪಾದ್ ಭಟ್ ಸೇರಿದಂತೆ 50ಕ್ಕೂ ಹೆಚ್ಚು ಜನರು ಬಸವನಗುಡಿ ನ್ಯಾಷನಲ್ ಕಾಲೇಜಿನ ಕಾರ್ಯದರ್ಶಿ ವೆಂಕಟಶಿವರೆಡ್ಡಿ ಜತೆಗೆ ಇಂದು ಮಾತುಕತೆ ನಡೆಸಿ, ಆದೇಶ ಹಿಂಪಡೆಯುವಂತೆ ತಾಕೀತು ಮಾಡಿದ್ದು, ತಪ್ಪಿದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾತನಾಡಿರುವ ಪ್ರಾಧ್ಯಾಪಕ ಡಾ. ರವಿಕುಮಾರ್ ಭಾಗಿ ಅವರು, “ಕಳೆದ 13 ವರ್ಷಗಳಿಂದ ಬಸವನಗುಡಿಯ ಪದವಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪದವಿ, ಸ್ನಾತಕೋತ್ತರ ಪದವಿಗಳಿಗೆ ಬೋಧಿಸುತ್ತಿದ್ದು, ಪಿಎಚ್‌ಡಿ ಪದವಿಯನ್ನು ಹೊಂದಿದ್ದೇನೆ. ಸ್ನಾತಕೋತ್ತರ ಕೇಂದ್ರದ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ನನಗೆ ಯಾವ ಸೂಚನೆಯನ್ನು ನೀಡದೆ ಏಕಾಏಕಿ ದುರುದ್ದೇಶದಿಂದ ಜಯನಗರ ನ್ಯಾಷನಲ್ ಪಿಯುಸಿ ಕಾಲೇಜಿಗೆ ಹಿಂಬಡ್ತಿ ನೀಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಪ್ರಾಂಶುಪಾಲರಾದ ವೈ.ಸಿ. ಕಮಲಾ ಅವರು ಅಧ್ಯಾಪಕರು ಮತ್ತು ವಿಧ್ಯಾರ್ಥಿಗಳಲ್ಲಿ ನೇರವಾಗಿಯೇ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಟೀಕಾಕಾರ, ಹೋರಾಟಗಾರ ಹರ್ಷ್ ಮಂದರ್ ಮೇಲೆ ಸಿಬಿಐ ದಾಳಿ

“ನಾನು ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದೇನೆ. ದಲಿತರು ಸಂಶೋಧನಾ ಮಾರ್ಗದರ್ಶಕರಾಗಬಾರದು ಎಂಬ ಜಾತಿವಾದಿ ಮನಸ್ಥಿತಿಯಿಂದ ಸಂಶೋಧನಾ ಮಾರ್ಗದರ್ಶಕರಾಗುವುದನ್ನು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ವ್ಯವಸ್ಥಿತವಾಗಿ ತಡೆಹಿಡಿದಿದ್ದಾರೆ. ಆ ಮೂಲಕ ಇಬ್ಬರಿಗೂ ಅನ್ಯಾಯ ಎಸಗುತ್ತಿದ್ದಾರೆ. ಕಾಲೇಜಿನಲ್ಲಿ ನಡೆಯುತ್ತಿರುವ ಜಾತಿ ಕಿರುಕುಳದ ಬಗ್ಗೆ ಇದು ಒಂದು ಉದಾಹರಣೆ ಅಷ್ಟೆ. ಈ ಸಂಸ್ಥೆಯ ಆಧೀನದಲ್ಲಿರುವ ಎಲ್ಲ ಶಾಲಾ ಕಾಲೇಜುಗಳಲ್ಲಿ ದಲಿತ, ಹಿಂದುಳಿದ ನೌಕರರು ಕಿರುಕುಳದ ಜತೆಗೆ ಈ ತಾರತಮ್ಯಗಳನ್ನು ಎದುರಿಸುತ್ತ ಅಸಹಾಯಕ ಸ್ಥಿತಿಯ ಭಯದಲ್ಲಿ ಕಾರ್ಯನಿರ್ವಹಿಸುತ್ತ ಜೀವಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಪದವಿ ಮತ್ತು ಸ್ನಾತಕೋತ್ತರ ಪದವಿ ಪಾಠ ಮಾಡಲು ನನ್ನನ್ನು ನೇಮಕ ಮಾಡಿಕೊಂಡು, ಈಗ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತೆ ಹಿಂಬಡ್ತಿ ನೀಡಿದ್ದಾರೆ. ನಾನು ಪಿಜಿ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡಿದ್ದೇನೆ, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಬೆಂಗಳೂರು ಯೂನಿವರ್ಸಿಟಿ ನನ್ನನ್ನು ಆಯ್ಕೆ ಮಾಡಿದೆ. ಅದಕ್ಕೆ ಕಾಲೇಜು ಆಡಳಿತ ಮಂಡಳಿ ಅನುಮತಿ ನೀಡಬೇಕು. ಕಳೆದ ಏಪ್ರಿಲ್‌ನಲ್ಲಿ ಬೆಂಗಳೂರು ವಿವಿಯಿಂದ ಅದಕ್ಕೆ ಸಂಬಂಧಿಸಿದಂತೆ ಪತ್ರ ಕಳುಹಿಸಿದ್ದಾರೆ. ಈವರೆಗೂ ನನಗೆ ಅನುಮತಿ ಪತ್ರ ಕೊಟ್ಟಿಲ್ಲ ಯಾಕೆ? ಅದಕ್ಕೆ ಕಾರಣ ಏನೆಂಬುದು ತಿಳಿಯುತ್ತಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

“ಆಡಳಿತ ಮಂಡಳಿ ಸೋಮವಾರ ಸಭೆ ನಡೆಸಿ ನಿರ್ಧರಿಸುವುದಾಗಿ ತಿಳಿಸಿದ್ದು, ಒಂದು ವೇಳೆ ನನ್ನ ಪರವಾಗಿ ತೀರ್ಮಾನ ಬಂದಿಲ್ಲವಾದರೆ ಮಂಗಳವಾರದಿಂದ ಧರಣಿ ಕೂರುತ್ತೇ” ಎಂದು ರವಿಕುಮಾರ್ ಬಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಿಎಎ ಜಾರಿ ಇಲ್ಲ | ತಮಿಳುನಾಡು ಮತ್ತು ಕೇರಳ ಮುಖ್ಯಮಂತ್ರಿಗಳ ಪುನರುಚ್ಛಾರ

ದಲಿತ ವಿದ್ಯಾರ್ಥಿಗಳಿಗೂ ಕಿರುಕುಳ!

ಸಿಬ್ಬಂದಿಗೆ ಮಾತ್ರವಲ್ಲದೆ ದಲಿತ ವಿದ್ಯಾರ್ಥಿಗಳಿಗೂ ಕಾಲೇಜಿನ ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ ಎಂಬ ಕೇಳಿ ಬಂದಿದೆ. ಕಾಲೇಜಿನಲ್ಲಿ ಈ ಹಿಂದೆ ಜಾರಿಯಲ್ಲಿದ್ದ ವೈಜ್ಞಾನಿಕ ಶುಲ್ಕವನ್ನು ಹೊಸ ಆಡಳಿತ ಮಂಡಳಿ ರದ್ದು ಮಾಡಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಕೂಡ ಸಾಮಾನ್ಯ ಜಾತಿಯ ವಿದ್ಯಾರ್ಥಿಗಳು ಪಾವತಿ ಮಾಡುವಷ್ಟೇ ಶುಲ್ಕ ಪಾವತಿಸಬೇಕಾಗಿ ಬಂದಿದೆ.

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಗ್ರಾಮೀಣ ಪ್ರದೇಶದಿಂದ ಸಾವಿರಾರು ಬಡ ವಿದ್ಯಾರ್ಥಿಗಳು ನ್ಯಾಷನಲ್ ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಾರೆ. ಆದರೆ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಅವೈಜ್ಞಾನಿಕವಾಗಿ ಹೆಚ್ಚು ಮಾಡಿ ಅವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.

ವಿಡಿಯೊ ನೋಡಿ: ಏನಿದು ಮಧ್ಯಂತರ ಬಜೆಟ್‌ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್‌ Janashakthi Media

Donate Janashakthi Media

Leave a Reply

Your email address will not be published. Required fields are marked *