ಬೆಂಗಳೂರು | ತೀವ್ರಗೊಂಡ ಕರವೇ ಕನ್ನಡ ನಾಮಫಲಕ ಹೋರಾಟ

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ಕನ್ನಡ ನಾಮ ಫಲಕ ಹೋರಾಟ ರಾಜ್ಯ ರಾಜಧಾನಿಯಲ್ಲಿ ತಾರಕಕ್ಕೇರಿದೆ. ಎಲ್ಲಾ ನಾಮಫಲಕಗಳು ಕನಿಷ್ಠ 60% ಕನ್ನಡದಲ್ಲಿ ಇರಬೇಕು ಎಂದು ನಿಯಮವಿದ್ದರೂ ಅದನ್ನು ಪಾಲಿಸದೆ ಇರುವ ವಿಚಾರವಾಗಿ ಕರವೇ ಹೋರಾಟ ಕೈಗೆತ್ತಿಕೊಂಡಿದ್ದು ಬೆಂಗಳೂರಿನಲ್ಲಿ ಭಾರಿ ಹೋರಾಟ ನಡೆಸಿದೆ. ಗುರುವಾರ ಬೆಂಗಳೂರಿನಾದ್ಯಂತ ಬೃಹತ್ ರ‍್ಯಾಲಿ ನಡೆಸಿದ ಕರವೇ ಕಾರ್ಯಕರ್ತರು ಕನ್ನಡೇತರ ಬೋರ್ಡ್‌ಗಳು ಮತ್ತು ಫಲಕಗಳನ್ನು ಕಿತ್ತೆಸೆದಿದ್ದಾರೆ.

ಈ ಬಗ್ಗೆ ಮಾತನಾಡಿದ್ದ ಕರವೇ ಅಧ್ಯಕ್ಷ ನಾರಾಯಣಗೌಡ, ಕರ್ನಾಟಕದಲ್ಲಿ ವ್ಯಾಪಾರಸ್ಥರು ತಮ್ಮ ಫಲಕದಲ್ಲಿ ಕನ್ನಡವನ್ನೇ ಬಳಸಬೇಕು. ಫಲಕಗಳಲ್ಲಿ ಕನಿಷ್ಠ 60% ದಷ್ಟು ಕನ್ನಡವನ್ನು ಪ್ರದರ್ಶಿಸುವಂತೆ ಮಳಿಗೆಗಳಿಗೆ ಬಿಬಿಎಂಪಿಯ ಸೂಚನೆಯನ್ನೂ ನೀಡಿದ್ದಾರೆ. ಆದರೆ ಇದನ್ನು ಅನುಸರಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ನಾರಾಯಣಗೌಡ ಸೇರಿ ಹಲವು ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಒಕ್ಕಲಿಗರ ಪರ ಮಾತನಾಡಿದ್ದಕ್ಕೆ ಸಿಎಂ ಸ್ಥಾನ ಕಿತ್ತುಕೊಳ್ಳಲಾಗಿತ್ತು – ಬಿಜೆಪಿ ಸಂಸದ ಸದಾನಂದ ಗೌಡ

ಕರ್ನಾಟಕ ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಕನ್ನಡ ಪರ ಹೋರಾಟಗಾರರು ನಡೆಸುತ್ತಿದ್ದಾರೆ. ದ್ವೇಷ ಭಾಷಣ ಮಾಡುವ ಪ್ರಭಾಕರ ಭಟ್ ಎಫ್‌ಐಆರ್‌ ದಾಖಲಾದರೂ ಅವರ ವಿರುದ್ಧ ಯಾವುದೆ ಕ್ರಮ ಕೈಗೊಳ್ಳದ ಸರ್ಕಾರ, ಹೋರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಆಡಳಿತ ಭಾಷೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಕನ್ನಡದಲ್ಲಿ ನಾಮಫಲಕ ಹಾಕುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್‌ 17 (6)ಕ್ಕೆ ತಿದ್ದುಪಡಿ ತಂದು 2024ರ ಫೆಬ್ರವರಿ 28ರೊಳಗೆ ವಾಣಿಜ್ಯ ಮಳಿಗೆಗಳು ಅನುಷ್ಠಾನಗೊಳಿಸಲು ಗಡುವು ನೀಡಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಜೊತೆಗೆ ಶಾಂತಿಯುತವಾದ ಪ್ರತಿಭಟನೆ ಮಾಡಲು ಸರ್ಕಾರದ ವಿರೋಧ ಇಲ್ಲ. ನಮಗೆ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇದೆ. ಆದರೆ ಕಾನೂನಿಗೆ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ ಅದನ್ನು ಸರ್ಕಾರ ಸಹಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳ ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ | ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ವರನ ಕುಟುಂಬಕ್ಕೆ ಬಹಿಷ್ಕಾರ

ಕರವೇ ಕಾರ್ಯಕರ್ತರ ರ‍್ಯಾಲಿ ಬೆಂಗಳೂರು ವಿಮಾನ ನಿಲ್ದಾಣದ ಸಾದಹಳ್ಳಿ ಗೇಟ್ ಬಳಿಯ ಟೋಲ್ ಪ್ಲಾಜಾದಿಂದ ಆರಂಭವಾಗಿ ಕಬ್ಬನ್ ಪಾರ್ಕ್ ವರೆಗೆ ಸಾಗಿದೆ. ಈ ನಡುವೆಯೇ ಪೊಲೀಸರು ಪ್ರತಿಭಟನಾನಿರತ ಮಹಿಳೆಯರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಅಲ್ಲದೆ ಕರವೇ ಕಾರ್ಯಕರ್ತರು ಕೆ.ಆರ್.ಪುರಂ, ಹೆಬ್ಬಾಳ, ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತೀವ್ರ ಆಕ್ರೋಶಗೊಂಡಿದ್ದ ಕಾರ್ಯಕರ್ತರು ಅಂಗಡಿಗಳಿಗೆ ಹಾಕಿದ್ದ ಇಂಗ್ಲಿಷ್‌ ನಾಮಫಲಕಗಳನ್ನು ಒಡೆದು ಹಾಕಿದ್ದು, ಬೋರ್ಡ್‌ಗಳಿಗೆ ಮಸಿ ಬಳಿದಿದ್ದಾರೆ. ನಗರದಲ್ಲಿ ಏಕಕಾಲಕ್ಕೆ ಪ್ರತಿಭಟನೆ ಆರಂಭವಾದ ಹಿನ್ನೆಲೆಯಲ್ಲಿ, ವಿವಿಧ ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ವಿಡಿಯೊ ನೋಡಿ: ಘನತೆಯ ಬದುಕು, ಹೋರಾಟದ ಹಾದಿ, ಕಲೆಯ ದಾರಿ – ಕಲಾವಿದರು ಹೋರಾಟಗಾರರ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *