ಬೆಂಗಳೂರು: ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ್ದ ಯುವಕರಿಗೆ ಉದ್ಯೋಗ ಕಲ್ಪಿಸುವ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ಪೂರ್ವಭಾವಿ ಸಭೆ ನಡೆಸಿದ್ದು, ಆರು ಸದಸ್ಯರಿರುವ ಸಚಿವರ ತಂಡವನ್ನು ರಚಿಸಿದ್ದಾರೆ. “ರಾಜ್ಯದ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸುಧಾರಿಸಲು ಉದ್ಯೋಗ ನೀತಿಯನ್ನು ಹೊಂದುವ ಅವಶ್ಯಕತೆಯಿದೆ” ಎಂದು ಅವರು ಹೇಳಿದ್ದು, ಈ ನೀತಿಯನ್ನು ರೂಪಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಉದ್ಯೋಗ ಮೇಳ
2024 ರ ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲು ಯೋಜಿಸಲಾಗಿದ್ದು, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನೊಳಗೊಂಡ ತಂಡ ಉದ್ಯೋಗ ಮೇಳವನ್ನು ಮೇಲ್ವಿಚಾರಣೆ ಮಾಡಲು ರಚಿಸಲಾಗಿದೆ. ಈ ತಂಡವು ಉದ್ಯೋಗದಾತರೊಂದಿಗೆ ಸಮಾಲೋಚನೆ ನಡೆಸಲಿದೆ.
ಇದನ್ನೂ ಓದಿ: ಎಎಪಿಯ ರಾಜ್ಯಸಭೆ ಹಂಗಾಮಿ ನಾಯಕನಾಗಿ ರಾಘವ್ ಚಡ್ಡಾರನ್ನು ನೇಮಿಸಲು ನಿರಾಕರಿಸಿದ ಸ್ಪೀಕರ್ ಜಗದೀಪ್ ಧಂಖರ್
“ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಉದ್ಯೋಗ ಮೇಳ ಆಯೋಜಿಸಲಾಗುವುದು. ಉದ್ಯೋಗಾಕಾಂಕ್ಷಿಗಳ ಕೌಶಲ್ಯ ಮತ್ತು ಕೈಗಾರಿಕೆಗಳ ಅಗತ್ಯತೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಚಿವರು ಕೈಗಾರಿಕೆಗಳೊಂದಿಗೆ ಚರ್ಚೆ ನಡೆಸಿ ದೂರಗಾಮಿ ಕಾರ್ಯಕ್ರಮಗಳನ್ನು ರೂಪಿಸಲು ಶಿಫಾರಸುಗಳನ್ನು ಮಾಡುತ್ತಾರೆ” ಎಂದು ಸಿದ್ದರಾಮಯ್ಯ ಹೇಳಿದ್ದು, ವಿದೇಶದಲ್ಲಿ ಉದ್ಯೋಗಾವಕಾಶಗಳನ್ನು ಪರಿಶೀಲಿಸುವಂತೆ ಅವರು ಸಲಹೆ ನೀಡಿದ್ದಾರೆ.
“ಬಿಜೆಪಿ ಸರ್ಕಾರವು ಉದ್ಯೋಗವನ್ನು ನೀಡಲು ಸಾಧ್ಯವಾಗಲಿಲ್ಲ, ಇದನ್ನು ರಾಹುಲ್ ಗಾಂಧಿಯವರು ತಮ್ಮ ಭಾರತ್ ಜೋಡೋ ಯಾತ್ರೆಯಲ್ಲಿ ಎತ್ತಿ ತೋರಿಸಿದರು. ನಾವು ಕನ್ನಡಿಗರಿಗೆ ಉದ್ಯೋಗ ನೀಡಲು ಬಯಸುತ್ತೇವೆ, ಅದಕ್ಕಾಗಿ ನಾವು ಕಾರ್ಯಕ್ರಮವನ್ನು ಯೋಜಿಸಿದ್ದೇವೆ” ಎಂದು ಪೂರ್ವಸಿದ್ಧತಾ ಸಭೆಯ ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ರಾಯರೆಡ್ಡಿ, ಬಿ.ಆರ್.ಪಾಟೀಲ್, ದೇಶಪಾಂಡೆಗೆ ‘ಸಂಪುಟ ದರ್ಜೆ ಸ್ಥಾನಮಾನ’
“ಇದು ಸಾಮಾನ್ಯ ಉದ್ಯೋಗ ಮೇಳವಾಗುವುದು ಸರ್ಕಾರಕ್ಕೆ ಇಷ್ಟವಿಲ್ಲ. ಇದು ಹೊಸ ವಿನ್ಯಾಸದೊಂದಿಗೆ ನಡೆಸುವ ಮೆಗಾ ಉದ್ಯೋಗ ಮೇಳವಾಗಲಿದೆ. ಮೊದಲಿಗೆ ಇದು ಬೆಂಗಳೂರಿನಲ್ಲಿ ನಡೆಯಲಿದ್ದು, ನಂತರ ಇತರ ಸ್ಥಳಗಳಿಗೆ ಮೇಳವನ್ನು ಕೊಂಡೊಯ್ಯಲಾಗುವುದು. ಉದ್ಯೋಗ ಮೇಳವು ಆತಿಥ್ಯ, ಉತ್ಪಾದನೆ ಮತ್ತು ಐಟಿ / ಬಿಟಿಯಂತಹ ಕ್ಷೇತ್ರಗಳನ್ನು ಒಳಗೊಳ್ಳುತ್ತದೆ. ನಾವು ಗ್ರಾಮೀಣ ಅಭ್ಯರ್ಥಿಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡಲು ಬಯಸುತ್ತೇವೆ” ಎಂದು ಶಿವಕುಮಾರ್ ಹೇಳಿದ್ದಾರೆ.
ಯುವ ನಿಧಿಗಾಗಿ 10,000 ಅರ್ಜಿಗಳು
ಶುಕ್ರವಾರ ಸಂಜೆ 6 ಗಂಟೆಯವರೆಗೆ ಯುವ ನಿಧಿ ಯೋಜನೆಗೆ ಕಾಂಗ್ರೆಸ್ ಸರ್ಕಾರ 10,834 ಅರ್ಜಿಗಳನ್ನು ಸ್ವೀಕರಿಸಿದೆ. ಈ ಯೋಜನೆಯಡಿಯಲ್ಲಿ, ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರು ಎರಡು ವರ್ಷಗಳವರೆಗೆ ಕ್ರಮವಾಗಿ ರೂ 3,000 ಮತ್ತು ರೂ 1,500 ರ ಮಾಸಿಕ ಭತ್ಯೆಯನ್ನು ಪಡೆಯುತ್ತಾರೆ. ಭತ್ಯೆ ಪಾವತಿ ಜನವರಿ 12 ರಂದು ಶಿವಮೊಗ್ಗದಲ್ಲಿ ಸಾರ್ವಜನಿಕ ಕಾರ್ಯಕ್ರಮದಿಂದ ಪ್ರಾರಂಭವಾಗುತ್ತದೆ ಎಂದು ವರದಿಯಾಗಿದೆ.
ವಿಡಿಯೊ ನೋಡಿ: ಸಂಸದರನ್ನು ಅಮಾನತು ಮಾಡಿ ಕರಾಳ ಶಾಸನಕ್ಕೆ ಅನುಮೋದನೆ: ನವ ವಸಾಹತೀಕರಣದ ಮತ್ತೊಂದು ರೂಪ!? Janashakthi Media