ಬೆಂಗಳೂರು: ಹೋಟೆಲ್ ಊಟ, ತಿಂಡಿ-ತಿನಿಸುಗಳ ಬೆಲೆಯನ್ನು ಸದ್ಯಕ್ಕೆ ಹೆಚ್ಚಿಸದಿರಲು ಸೋಮವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.
‘ಹೋಟೆಲ್ ಉದ್ಯಮಕ್ಕೆ ಬೇಕಾಗುವ ಅಡುಗೆ ಅನಿಲ ಸೇರಿ ಇತರೆ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಗ್ರಾಹಕರ ಹಿತದೃಷ್ಟಿಯಿಂದ ತಿಂಡಿ-ತಿನಿಸುಗಳ ಬೆಲೆಯನ್ನು ಏರಿಕೆ ಮಾಡುವುದಿಲ್ಲ. ಮುಂದಿನ ಎರಡು ತಿಂಗಳಲ್ಲಿ ಕಚ್ಚಾ ವಸ್ತುಗಳ ದರಗಳ ಬದಲಾವಣೆಯನ್ನು ಗಮನಿಸಿ ತಿಂಡಿ-ತಿನಿಸುಗಳ ದರ ಏರಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ಮಾಹಿತಿ ನೀಡಿದರು.
ಇದನ್ನೂ ಓದಿ : ಹೋಟೆಲ್‌ಗಳಲ್ಲಿ ಇನ್ಮುಂದೆ ಊಟ ತಿಂಡಿ ಬೆಲೆ ಇನ್ನಷ್ಟು ಹೆಚ್ಚಳ!
‘ಇದೇ ಶನಿವಾರ ವಾಣಿಜ್ಯ ಅಡುಗೆ ಅನಿಲದ ಬೆಲೆ ₹91ರಷ್ಟು ಇಳಿಕೆಯಾಗಿತ್ತು. ಆದರೆ, ಏಕಕಾಲಕ್ಕೆ ಹೆಚ್ಚಿನ ಸಿಲಿಂಡರ್ ಖರೀದಿ ಮಾಡುತ್ತಿದ್ದವರಿಗೆ ರಿಯಾಯಿತಿ ರದ್ದು ಮಾಡಲಾಗಿದ್ದು, ಇದರಿಂದ ಮತ್ತಷ್ಟು ಹೊರೆಯಾಗಿದೆ. ಇದನ್ನು ಮುಂದುವರಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಸಚಿವಾಲಯಕ್ಕೆ ಪತ್ರ ಬರೆದರೂಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.