ಹೋರಾಟಗಾರರ ಬಂಧನ, ಬಿಡುಗಡೆ, ಪೊಲೀಸರಿಗೆ ನೀಡಲಾದ ಊಟದಲ್ಲಿ ಇಲಿ ಪತ್ತೆ!
ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬೆಂಗಳೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ ಕಾಲೇಜುಗಳಿಗೂ ರಜೆ ನೀಡಲಾಗಿತ್ತು. ಸಿನಿಮಾ, ಟ್ಯಾಕ್ಸಿ, ಐಟಿ-ಬಿಟಿ, ಹೋಟೆಲ್ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ಸೂಚಿಸಿದ್ದರು. 150ಕ್ಕೂ ಹೆಚ್ಚು ಸಂಘಟನೆಗಳು ಬೆಂಗಳೂರು ಬಂದ್ ಅನ್ನು ಬೆಂಬಲಿಸಿವೆ. ಬಿಜೆಪಿ, ಜನತಾದಳ ಹಾಗೂ ಆಮ್ ಆದ್ಮಿ ಪಕ್ಷಗಳು ಬಂದ್‌ನಲ್ಲಿ ಭಾಗಿಯಾಗಿದ್ದವು.
ಔಷಧಾಲಯ ಮಳಿಗೆಗಳನ್ನು ಹೊರತುಪಡಿಸಿ ನಗರದ ಕೆಲವು ಭಾಗಗಳಲ್ಲಿ ಹಲವಾರು ಅಂಗಡಿಗಳನ್ನು ಮುಚ್ಚಲಾಗಿತ್ತು. ವಸತಿ ಪ್ರದೇಶಗಳಲ್ಲಿನ ಅಂಗಡಿಗಳು ಮತ್ತು ಬೀದಿ ವ್ಯಾಪಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬಿಎಂಟಿಸಿ ಬಸ್‌ಗಳು, ನಮ್ಮ ಮೆಟ್ರೋ, ಕ್ಯಾಬ್‌ಗಳು ಮತ್ತು ಆಟೋ-ರಿಕ್ಷಾಗಳಂತಹ ಸಾರಿಗೆ ಸೇವೆಗಳು ಸಹ ಕಾರ್ಯನಿರ್ವಹಿಸಿದವು. ಆದಾಗ್ಯೂ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ನಗರದ ರಸ್ತೆಗಳಲ್ಲಿನ ದಟ್ಟಣೆಯು ಗಮನಾರ್ಹವಾಗಿ ಕಡಿಮೆಯಾಗಿತ್ತು.
ಟೌನ್ ಹಾಲ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿರು. ಬಹಳಷ್ಟು ಕಡೆ ರಸ್ತೆ ತಡೆ ನಡೆಸಲು ಮುಂದಾಗಿದ್ದ ಕಾರ್ಯಕರ್ತರನ್ನು ಬಂಧಿಸಿ ಸಂಜೆವೇಳೆ ಬಿಡುಗಡೆ ಮಾಡಿದರು. ಫ್ರೀಡಂ ಪಾರ್ಕ್‌ಗೆ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ರಾಮಲಿಂಗಾ ರೆಡ್ಡಿ ಮನವಿ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು. ಕಾವೇರಿ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಮೂರು ದಿನಗಳ ಗಡುವನ್ನು ಹೋರಾಟಗಾರರು ನೀಡಿದ್ದಾರೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರಕ್ಕೆ ಒತ್ತಾಯ ಪತ್ರ ಸಲ್ಲಿಕೆ ಮಾಡಿದ ಹೋರಾಟಗಾರರು, ತಕ್ಷಣ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಹಾಗೂ ರೈತ ಮುಖಂಡರ ಮೇಲೆ ಇರುವ ಕೇಸ್ ಗಳನ್ನ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಬೆಂಗಳೂರು ಬಂದ್
ಇದನ್ನೂ ಓದಿ : ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ – ಪ್ರತಿಭಟನೆಕಾರರ ಬಂಧನ, ಸೆಕ್ಷನ್ 144 ಜಾರಿ
ಹೋಟೆಲ್ ತೆರೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ : ಬಂದ್ ವೇಳೆ ಹೋಟೆಲ್ ತೆರೆದಿದ್ದಕ್ಕೆ ಮಾಲೀಕ ಹಾಗೂ ಸಿಬ್ಬಂದಿ ಮೇಲೆ ಎಂಟಕ್ಕೂ ಹೆಚ್ಚು ಹೋರಾಟಗಾರರು ಹಲ್ಲೆ ನಡೆಸಿರುವ ಪ್ರಕರಣ ಜಯನಗರದಲ್ಲಿ ನಡೆದಿದೆ. ಜಯನಗರದ ಮೂರನೇ ಹಂತದಲ್ಲಿ ಹೋಟೆಲ್‍ನ್ನು ತೆರದಿದ್ದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್‍ಗೆ ಬೈಕ್‍ನಲ್ಲಿ ಬಂದಿದ್ದ ಹೋರಾಟಗಾರರು ಏಕಾಏಕಿ ಒಳಗೆ ನುಗ್ಗಿದ್ದಾರೆ. ಬಳಿಕ ಚೇರ್ ಹಾಗೂ ಗ್ಲಾಸ್‍ಗಳನ್ನು ಒಡೆದು ಹಾಕಿದ್ದಾರೆ.
ಈ ವೇಳೆ ಹೋಟೆಲ್‍ನಲ್ಲಿದ್ದ ಸಿಬ್ಬಂದಿ ಹೋರಾಟಗಾರರ ಕೃತ್ಯವನ್ನು ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದಾರೆ. ಇದರಿಂದ ಕೆರಳಿದ ಗುಂಪು ವೀಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಇದಾದ ಬಳಿಕ ಸಿಬ್ಬಂದಿ ಹೋಟೆಲ್‍ನ್ನು ಮುಚ್ಚಿದ್ದಾರೆ.
ಊಟದಲ್ಲಿ ಇಲಿ ಪತ್ತೆ : ಬೆಂಗಳೂರು ಬಂದ್ ಡ್ಯೂಟಿಗೆ ನಿಯೋಜನೆಯಾದ ಪೊಲೀಸರಿಗೆ ನೀಡಲಾದ ಊಟದಲ್ಲಿ ಇಲಿ ಪತ್ತೆಯಾಗಿದೆ. ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ನಿಯೋಜನೆಯಾಗಿದ್ದ ಸಿಬ್ಬಂದಿಗೆ ನೀಡಲಾದ ಆಹಾರದಲ್ಲಿ ಇಲಿ ಸಿಕ್ಕಿದೆ.
ಸಿಬ್ಬಂದಿಗೆ ಇಲಿ ಇದ್ದ ಊಟ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸಂಚಾರಿ ಕಮಿಷನರ್ ಗರಂ ಆಗಿದ್ದಾರೆ. ಪೊಲೀಸ್ ಸಿಬ್ಬಂದಿಗೆ ಊಟ ಸಪ್ಲೈ ಮಾಡಿದವರಿಗೆ ಎ.ಎನ್.ಅನುಚೇತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಊಟದಲ್ಲಿ ಇಲಿ ಕೊಟ್ಟ ಹೋಟೆಲ್ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗಿದೆ.
ಈ ವಿಚಾರವಾಗಿ ಯಶವಂತಪುರ ಸಂಚಾರ ಮತ್ತು ಟ್ರಾಫಿಕ್ ಇನ್ಸ್ ಪೆಕ್ಟರ್‍ಗಳಿಗೆ ನೋಟಿಸ್ ನೀಡಲಾಗಿದೆ. ಅಶೋಕ್ ಟಿಫಿನ್ ಸೆಂಟರ್ ಒಟ್ಟು 180 ಊಟ ಕೊಟ್ಟಿತ್ತು. ಪೊಲೀಸ್ ಸಿಬ್ಬಂದಿಗೆ ನೀಡುವ 2 ಹೊತ್ತಿನ ಊಟಕ್ಕೆ ರಾಜ್ಯ ಸರ್ಕಾರ 200 ರೂ. ನೀಡುತ್ತದೆ. ಗುಣಮಟ್ಟದ ಊಟ ಏಕೆ ನೀಡಿಲ್ಲವೆಂದು ಅಧಿಕಾರಿಗಳ ಮೇಲೆ ಅನುಚೇತ್ ಗರಂ ಆಗಿದ್ದಾರೆ. ಸದ್ಯ ಯಾರೂ ಕಳಪೆ ಊಟ ಸೇವಿಸಿಲ್ಲ. ಒಂದು ವೇಳೆ ಇಲಿ ಇದ್ದ ಊಟ ಸೇವಿಸಿದ್ರೆ ಅನಾಹುತ ಆಗೋ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ. ಬೆಂಗಳೂರು ಬಂದ್
ಮೋದಿ ಮಧ್ಯಸ್ಥಿಕೆ ವಹಿಸಬೇಕು: ಸಿಎಂ ಸಿದ್ದರಾಮಯ್ಯ ಆಗ್ರಹ : ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಈ ವಿವಾದದ ಇತ್ಯರ್ಥಕ್ಕೆ ಪ್ರಧಾನಿ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾವೇರಿ ವಿಷಯವನ್ನು ರಾಜಕೀಯಗೊಳಿಸುತ್ತಿರುವುದು ಸ್ವಂತ ಲಾಭಕ್ಕೆ ಹೊರತು ಜನರ ಹಾಗೂ ನಾಡಿನ ಹಿತದೃಷ್ಟಿಯಿಂದ ಅಲ್ಲ. ಬಂದ್ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶವಿದೆ. ಆದರೆ ನ್ಯಾಯಾಲಯ ಯಾವುದೇ ಸಭೆ, ಮೆರವಣಿಗೆಯನ್ನು ನಡೆಸಬಾರದು, ಪ್ರತಿಭಟನೆ ಮಾಡಬಾರದು ಎಂದು ಹೇಳಿದೆ. ನಾವು ನಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುವಾಗ ಇತರರ ಮೂಲಭೂತ ಹಕ್ಕುಗಳನ್ನು ಕೂಡ ಗಮನದಲ್ಲಿರಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.
‘ರಾಜ್ಯ ಕಾಂಗ್ರೆಸ್ ಸರ್ಕಾರ ಡಿಎಂಕೆ ‘ಬಿ ಟೀಮ್’ ಎಂಬ ಬಿಜೆಪಿ ಆರೋಪ ರಾಜಕೀಯಪ್ರೇರಿತವಾದುದ್ದು. ಡಿಎಂಕೆ ತಮಿಳುನಾಡಿನವರು. ಬಿಜೆಪಿ ಪಕ್ಷ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತ್ತು. ಅವರನ್ನು ಏನೆಂದು ಹೇಳಬೇಕು? ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಿಗಳಿಗೆ ಪತ್ರ ಬರೆದಿರುವುದು ಸಂತೋಷದ ವಿಷಯ. ಅದನ್ನು ನಾನು ಸ್ವಾಗತಿಸಿದ್ದೇನೆ. ಆದರೆ ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವುದು ಸುಳ್ಳು. ರಾಜ್ಯ ಸರ್ಕಾರ ಈ ರಾಜ್ಯದ ರೈತರ ಹಾಗೂ ರಾಜ್ಯದ ಹಿತರಕ್ಷಣೆಗೆ ಯಾವತ್ತೂ ಹಿಂದೆ ಬಿದ್ದಿಲ್ಲ, ಬೀಳುವುದೂ ಇಲ್ಲ. ನಮಗೆ ಅಧಿಕಾರ ಮುಖ್ಯವಲ್ಲ. ರಾಜ್ಯದ ಜನರ ಹಿತ ಮುಖ್ಯ. ಇದರಲ್ಲಿ ನಾವು ಬಲವಾದ ನಂಬಿಕೆ ಇಟ್ಟುಕೊಂಡಿರುವವರು. ಜನರು ಬಂದ್ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ ಆದರೆ ಬಂದ್, ಮೆರವಣಿಗೆ, ಪ್ರತಿಭಟನೆ ಮಾಡಬಾರದು ಎಂದು ಸರ್ವೋಚ್ಛ ನ್ಯಾಯಾಲಯ ಆದೇಶ ಮಾಡಿದೆ. ಪ್ರತಿಭಟನೆ ಮಾಡುವವರು ಇದನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಹೇಳಿದ್ದಾರೆ. ಬೆಂಗಳೂರು ಬಂದ್
ಈ ವಿಡಿಯೋ ನೋಡಿ : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧಿಸಿ ಬೃಹತ್ ಪ್ರತಿಭಟನೆ, ಮಂಡ್ಯ ಮದ್ದೂರು ಬಂದ್