ಬೆಂಗಳೂರು: ಬೆಂಗಳೂರಿನಲ್ಲಿನ ರಸ್ತೆಗುಂಡಿಗಳನ್ನು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಹೈಕೋರ್ಟ್ ನಿಂದ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಗೆ ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿತ್ತು. ಇಂದು ಕೋರ್ಟ್ ಗೆ ಹಾಜರಾದ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಎಸ್. ಪ್ರಭಾಕರ್ ಗೈರು ಹಾಜರಿಗೆ ಬೇಷರತ್ ಆಗಿ ನ್ಯಾಯಾಲಯದ ಕ್ಷಮೆ ಕೋರಿದರು.
ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ವಿಫಲವಾಗಿದ್ದ ಹಿನ್ನೆಲೆಯಲ್ಲಿ ಖುದ್ದು ಹಾಜರಾಗುವಂತೆ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಅವರಿಗೆ ನ್ಯಾಯಪೀಠವು ನಿರ್ದೇಶಿಸಿತ್ತು.
ಇಂದು ನ್ಯಾಯಲಯ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿರುವುದು ಗೊತ್ತಿದೆಯೇ? ನಿಮ್ಮ ಎಂಜಿನಿಯರ್ ಗಳು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ರಸ್ತೆ ಗುಂಡಿ ಸಮಸ್ಯೆ ಸರಿಪಡಿಸಲು ಏನು ಕ್ರಮ ಕೈಗೊಂಡಿದ್ದೀರಿ? ಜೈಲಿಗೆ ಕಳುಹಿಸದೇ ನಿಮಗೆ ಕರುಣೆ ತೋರಿದ್ದೇವೆ. ಗುಣಮಟ್ಟದ ಕಾಮಗಾರಿಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಛೀಮಾರಿ ರೀತಿಯಲ್ಲಿ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಗೆ ಹೈಕೋರ್ಟ್ ಪ್ರಶ್ನೆ ಮಾಡಿತು.
ಇದೇ ಮೊದಲ ಬಾರಿಗೆ ವಿಚಾರಣೆಗೆ ಹಾಜರಾಗಿದ್ದೀರಿ ಅಂತ ಸುಮ್ಮನಾಗಿದ್ದೀನಿ. ಇನ್ನು ಮುಂದೆ ಗುಂಡಿಗಳಿಂದ ಸಾವನ್ನಪ್ಪಿದರೆ ನಿಮ್ಮನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಬಿಬಿಎಂಪಿ ಪರ ಹಾಜರಾಗಿದ್ದ ವಕೀಲ ವಿ. ಶ್ರೀನಿಧಿ ಅವರು ರಸ್ತೆಗಳನ್ನು ಸರಿಪಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಪೈಥಾನ್ ಯಂತ್ರ ಬಳಸಲು ಟೆಂಡರ್ ಕರೆಯಲಾಗಿದೆ. 20 ವರ್ಷ ಬಾಳಿಕೆಯ ರಸ್ತೆಗಳನ್ನು ನಿರ್ಮಿಸಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಯಡಿಯೂ ಕಾಮಗಾರಿ ನಡೆಯುತ್ತಿದೆ ಎಂದು ಹೈಕೋರ್ಟ್ಗೆ ಹೇಳಿದರು.
ನ್ಯಾಯಾಲಯವು ನಿಮ್ಮ ಅಧೀನ ಇಂಜಿನಿಯರ್ಗಳೇ ಸಮಸ್ಯೆ ಸೃಷ್ಟಿಸಿದ್ದಾರೆ. ಬಾಳಿಕೆ ಬರುವಂತೆ ರಸ್ತೆ ದುರಸ್ತಿ ಮಾಡಬೇಕು. ದುರಸ್ತಿಯಾದ ರಸ್ತೆಗಳ ಪರಿಶೀಲನೆ ನಡೆಸುತ್ತೇವೆ. ರಸ್ತೆ ಗುಂಡಿಗಳಿಂದ ಸಾವು ಸಂಭವಿಸದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ರಸ್ತೆ ನಿರ್ವಹಣೆ ಹೊಣೆಯನ್ನು ಮಿಲಿಟರಿ ಇಂಜಿನಿಯರ್ಗಳಿಗೆ ನೀಡುವುದಾಗಿ ಬಿಬಿಎಂಪಿ ಪ್ರಧಾನ ಇಂಜಿನಿಯರ್ಗೆ ಎಚ್ಚರಿಕೆ ನೀಡಿದೆ.