ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಅಣ್ಣಾಮಲೈ ಬಂಧಿಸುವಂತೆ ಆಗ್ರಹ

ಚೆನ್ನೈ: ಶಾಲೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕಿರುಕುಳ ನೀಡಿದ್ದಕ್ಕಾಗಿ 17ರ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪವೊಂದು ತಮಿಳುನಾಡಿನಲ್ಲಿ ಕೇಳಿಬಂದಿತು. ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ತಿರುವು ಪಡೆದುಕೊಂಡಿದ್ದು, ವಿಡಿಯೋ ಒಂದರಲ್ಲಿ ಆಕೆ ತನಗೆ ಕಡಿಮೆ ಅಂಕಗಳು ದೊರೆಯಬಹುದೆಂದು ಭೀತಿಯಿಂದ ‘ವಿಷ ಸೇವಿಸಿರುವುದಾಗಿʼ ಹೇಳುವುದು ಕೇಳಿಸುತ್ತದೆ.

ಸಾಕಷ್ಟು ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಲಿಕೆಯಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ, ಹಾಸ್ಟೆಲ್ ವಾರ್ಡನ್ ತನಗೆ ಹಾಸ್ಟೆಲ್ ಶುಚಿಗೊಳಿಸುವುದು, ಲೆಕ್ಕಪತ್ರ ನೋಡಿಕೊಳ್ಳುವುದು ಹೀಗೆ ಬೇರೆ ಕೆಲಸ ವಹಿಸಿದ್ದರು ಎಂದು ಆಕೆ ಹೇಳುವುದು ಕೇಳಿಸುತ್ತದೆ. ಈ ವೀಡಿಯೋದ ಸತ್ಯಾಸತ್ಯತೆ ದೃಢಪಟ್ಟಿಲ್ಲ.

ಇದಕ್ಕೂ ಮುಂಚೆ ಹರಿದಾಡಿದ ಇನ್ನೊಂದು ವೀಡಿಯೋದಲ್ಲಿ ಆಕೆ ತನ್ನ ಹಾಸ್ಟೆಲ್ ವಾರ್ಡನ್ ತನ್ನನ್ನು ನಿಂದಿಸಿದ್ದಾರೆ ಹಾಗೂ ತನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೈಯ್ಯುವ ಯತ್ನದ ಬಗ್ಗೆ ಮಾತನಾಡಿದ್ದಳು.

ಬಾಲಕಿ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿ, ವಿದ್ಯಾರ್ಥಿನಿ ಪೋಷಕರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ರಾಜ್ಯದಲ್ಲಿ ಮತಾಂತರ ಚಟುವಟಿಕೆಗಳಲ್ಲಿ ತೊಡಗಿರುವ ಕ್ರಿಶ್ಚಿಯನ್ ಮ್ಯಾನೇಜ್‌ಮೆಂಟ್ ಶಾಲೆಗಳನ್ನು ಮುಚ್ಚಲು ಮತ್ತು ಶಾಲೆಯ ಆಡಳಿತವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

ಇದೀಗ ಈ ಪ್ರಕರಣ ಬಲವಂತದ ಮತಾಂತರ ಎಂದು ಬಿಂಬಿಸಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆರೋಪಗಳು ಸುಳ್ಳು  ಅವರನ್ನು ಬಂಧಿಸಬೇಕೆಂದು ಟ್ವಿಟರ್‌ನಲ್ಲಿ ನೆಟ್ಟಿಗರು ಆಗ್ರಹಿಸಿದ್ದಾರೆ. ಅಣ್ಣಾಮಲೈ ಎಡಿಟ್ ಮಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಅವರು ಧಾರ್ಮಿಕ ಗಲಭೆ ಸೃಷ್ಟಿಸುವ ಪಿತೂರಿ ನಡೆಸುತ್ತಿದ್ದಾರೆ. ಅವರನ್ನು ಬಂಧಿಸಬೇಕು ಎನ್ನುವ ಒತ್ತಾಯ ಟ್ವಿಟ್ಟರ್‌ನಲ್ಲಿ ಕೇಳಿಬರುತ್ತಿದೆ.

ಆದರೆ ಪೊಲೀಸರು ದಾಖಲಿಸಿಕೊಂಡಿರುವ ದೂರಿನಲ್ಲಿ ಮತಾಂತರದ ವಿಷಯ ಇಲ್ಲ. ವಾರ್ಡನ್‌ ತನ್ನ ಮನೆಯಲ್ಲಿ ಮನೆ ಕೆಲಸ ಮಾಡುವಂತೆ ನನಗೆ ಒತ್ತಾಯಿಸಿದ್ದರು. ಈ ಕಿರುಕುಳ ತಾಳಲಾಗದೇ ತಾನು ಅತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂಬ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.

ಆದರೆ ಟ್ವಿಟ್ಟರ್‌ ಬಳಕೆದಾರರಾದ ಸಾವುಕ್ಕು ಶಂಕರ್ ಟ್ವೀಟ್ ಒಂದನ್ನು ಮಾಡಿದ್ದು, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಮಾಡುತ್ತಿರುವ ಆರೋಪ ಸುಳ್ಳು, ಇತ್ತೀಚೆಗೆ ಬಿಡುಗಡೆಯಾದ ವಿಡಿಯೋ ಒಂದರಲ್ಲಿ ತಿರುಕಟ್ಟರುಪಲ್ಲೈ ವಿದ್ಯಾರ್ಥಿನಿ ನನಗೆ ಯಾವುದೇ ಕಿರುಕುಳ ಕೊಟ್ಟಿಲ್ಲ ಹಾಗೂ ನನ್ನ ಹಣೆಯ ಮೇಲಿನ ಸಿಂಧೂರ ಅಳಿಸುವಂತೆಯೂ ಹೇಳಿಲ್ಲ ಎಂದು ಹೇಳಿಕೆ ನೀಡಿದ್ದಳು ಎಂದು ಇದೆ.

ಆದರೆ ದುರಂತಕ್ಕೆ ಮತಾಂತರ ಯತ್ನವೇ ಕಾರಣ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸೇರಿದಂತೆ ಹಲವು ಬಿಜೆಪಿ ನಾಯಕರು ದೂರಿದ್ದಾರೆ. ಅಲ್ಲದೆ ಶಾಲೆಯ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈಗಾಗಲೇ ಪ್ರಕರಣ ಸಂಬಂಧಿಸಿದಂತೆ ಶಾಲಾ ಹಾಸ್ಟೆಲ್‌ ವಾರ್ಡನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಘಟನೆ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಮಿಳುನಾಡಿನ ಪೊಲೀಸ್‌ ಮಹಾ ನಿರ್ದೇಶಕರಿಗೆ ನೋಟಿಸ್ ನೀಡಿದೆ.

ಎನ್‌ಸಿಪಿಸಿಆರ್‌ಗೆ ಬಂದ ದೂರಿನ ಪ್ರಕಾರ ತಂಜಾವೂರಿನ ಬಾಲಕಿ ಸೇಕ್ರೆಡ್‌ ಹಾರ್ಟ್‌ ಶಾಲೆಯಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದಳು. ಶಾಲೆಯ ಹಾಸ್ಟೆಲ್‌ನ ವಾರ್ಡನ್‌ ಹಿಂದೂ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕ್ರೈಸ್ತಧರ್ಮಕ್ಕೆ ಮತಾಂತರವಾಗಲು ಒತ್ತಾಯಿಸುತ್ತಿದ್ದರು. ಮತಾಂತರವಾದರೆ ಆಕೆಯ ಮುಂದಿನ ಶಿಕ್ಷಣಕ್ಕೆ ನೆರವಾಗುವುದಾಗಿ ಭರವಸೆ ನೀಡಿದ್ದರು.

ಇದಕ್ಕೆ ಆಕೆ ಒಪ್ಪದಿದ್ದಾಗ ಆಕೆಗೆ ದೈಹಿಕ ಹಿಂಸೆ ನೀಡುತ್ತಿದ್ದರು. ಆಕೆಗೆ ಮನೆಗೆ ತೆರಳಲು ಬಿಡುತ್ತಿರಲಿಲ್ಲ. ಆಕೆಯ ಬಳಿ ಶೌಚಾಲಯ, ಪಾತ್ರೆ ತೊಳೆಸಲಾಗುತ್ತಿತ್ತು. ಇದರಿಂದ ಬೇಸತ್ತು ಆಕೆ ಜನವರಿ 9 ರಂದು ತಂಜಾವೂರಿನ ತನ್ನ ನಿವಾಸದಲ್ಲಿ ವಿಷ ಸೇವಿಸಿದ್ದರೆ, ಹತ್ತು ದಿನಗಳ ನಂತರ ಜನವರಿ 19ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು ಎಂದು ದೂರಿನಲ್ಲಿ ಹೇಳಲಾಗಿದೆ.

ಆಕೆಯ ಹೆತ್ತವರ ಹೇಳಿಕೆಯನ್ನು ದಾಖಲಿಸುವಂತೆ ಮದ್ರಾಸ್ ಹೈಕೋರ್ಟ್‍ನ ಮಧುರೈ ಪೀಠ ಆದೇಶಿಸಿದೆ. ಆಕೆಯ ಹೇಳಿಕೆ ಕುರಿತ ವೀಡಿಯೋ ಚಿತ್ರೀಕರಿಸಿದ ವ್ಯಕ್ತಿ ತನ್ನ ಫೋನ್ ಅನ್ನು ಫೊರೆನ್ಸಿಕ್ ತಪಾಸಣೆಗೆ ಹಾಜರುಪಡಿಸಬೇಕೆಂದೂ ನ್ಯಾಯಾಲಯ ಸೂಚಿಸಿದೆ. ಈಗ ಆ ಫೋನ್ ಪೊಲೀಸರ ವಶದಲ್ಲಿದೆ. ಹುಡುಗಿಯ ಹೇಳಿಕೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ವ್ಯಕ್ತಿಗೆ ಯಾವುದೇ ಕಿರುಕುಳ ನೀಡದಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆಯಲ್ಲದೆ, ಆಕೆಯ ಆತ್ಮಹತ್ಯೆಗೆ ಕಾರಣಗಳೇನು ಎಂಬ ಕುರಿತು ತನಿಖೆಗೆ ಒತ್ತು ನೀಡುವಂತೆ ಸೂಚಿಸಿದೆ.

Donate Janashakthi Media

Leave a Reply

Your email address will not be published. Required fields are marked *