ಬಲಗೊಳ್ಳುತ್ತಿದೆ ಸರ್ವಾಧಿಕಾರಿ ಪ್ರವೃತ್ತಿ-ಜಾತ್ಯತೀತ ಶಕ್ತಿಗಳು ಒಂದಾಗಬೇಕಿದೆ: ಸೀತಾರಾಮ್‌ ಯೆಚೂರಿ

ಬೆಂಗಳೂರು: ‘ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸರ್ವಾಧಿಕಾರಿ ರೀತಿಯಲ್ಲಿ ಸರಕಾರವನ್ನು ಮುನ್ನಡೆಸುತ್ತಿದ್ದು, ದೇಶವನ್ನು ಕತ್ತಲೆಯೆಡೆಗೆ ಕೊಂಡೊಯ್ಯಲು ಎಲ್ಲಾ ರೀತಿಯಲ್ಲಿ ಪ್ರಯತ್ನಗಳಿಗೆ ಮುಂದಾಗುತ್ತಿದ್ದಾರೆ. ಇದರ ವಿರುದ್ಧ ಎಲ್ಲ ಜಾತ್ಯತೀತ, ಪ್ರಗತಿಪರ ಶಕ್ತಿಗಳು ಒಗ್ಗೂಡಬೇಕಿದೆ’ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐಎಂ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸೀತಾಮ್‌ ಯೆಚೂರಿ ಕರೆ ನೀಡಿದರು.

ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ಅಂದು ಮತ್ತು ಇಂದು’ ವಿಷಯ ಕುರಿತ ಆನ್‌ಲೈನ್‌ನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ‘ಇಂದಿರಾಗಾಂಧಿ ಅವರು ತನ್ನ ನಿರಂತರ ಸೋಲು, ನ್ಯಾಯಾಂಗದಿಂದ ಆದ ಹಿನ್ನಡೆ ಮತ್ತು ಭ್ರಷ್ಟಾಚಾರ ವಿರುದ್ದ ಬೆಳೆದು ಬಂದ ತೀವ್ರ ಹೋರಾಟಗಳಿಗೆ ಹೆದರಿ ದೇಶದಲ್ಲಿ ಆಂತರಿಕ ತುರ್ತುಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಆದರೆ, ಇಂದು ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರವು ಸಂವಿಧಾನಾತ್ಮಕವಾಗಿ ನೀಡಲಾದ ಎಲ್ಲಾ ಹಕ್ಕುಗಳನ್ನು ನಾಶಪಡಿಸುವುದಕ್ಕೆ ಮುಂದಾಗಿದ್ದು, ಈ ಮೂಲಕ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯನ್ನು ಹೇರಿದ್ದಾರೆ’ ಎಂದು ಆರೋಪಿಸಿದರು.

ಇದನ್ನು ಓದಿ: ಪ್ರಜಾತಂತ್ರದ ಚೌಕಟ್ಟಿನಲ್ಲಿ 1975ರ ಅವಲೋಕನ

‘ಬಿಜೆಪಿ ನೇತೃತ್ವದ ಸರಕಾರವು ಸಂವಿಧಾನದ ಆಧಾರ ಸ್ತಂಭಗಳಾದ ಆರ್ಥಿಕ ಸಾರ್ವಭೌಮತ್ವ, ಜಾತ್ಯತೀತ ಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಒಕ್ಕೂಟ ವ್ಯವಸ್ಥೆಯನ್ನು, ಅದರೊಂದಿಗೆ ಜನತೆಗೆ ಸಿಕ್ಕಿರುವ ಹಕ್ಕುಗಳನ್ನು ಕೂಡ ಸಂಪೂರ್ಣ ನಾಶಪಡಿಸುತ್ತಿದೆ’ ಎಂದರು.

‘ನಮ್ಮ ಸ್ವಾತಂತ್ರ್ಯ ಚಳವಳಿಯ‌ ಆಶೋತ್ತರಗಳ ಭಾಗವಾಗಿ ನಮ್ಮ ಸಂವಿಧಾನ ಬೆಳೆದು ಬಂದಿದೆ. ಅದರಲ್ಲಿ ಬಸವಣ್ಣನಿಂದ ಹಿಡಿದು ಶಂಕರಾಚಾರ್ಯರ ತತ್ವಗಳಿಗೂ ಅವಕಾಶ ಕಲ್ಪಿಸಿದೆ. ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿ ಪ್ರತಿಯೊಂದನ್ನು ಪ್ರಶ್ನಿಸುವ ಅವಕಾಶವನ್ನು ನೀಡಿದೆ. ಆದರೆ ಮೋದಿ ಸರಕಾರ ನೂತನ ಶಿಕ್ಷಣ ನೀತಿಯನ್ನು ರೂಪಿಸಿ ಅವೈಚಾರಿಕ, ಅವೈಜ್ಞಾನಿಕ ಅಂಶಗಳನ್ನು ಅದರಲ್ಲಿ ಸೇರಿಸಿ ಜನತೆಯನ್ನು ಮತ್ತು ದೇಶವನ್ನು ಮನುಸ್ಮೃತಿ ಕಾಲದತ್ತ ತಳ್ಳುವ ಹುನ್ನಾರ ನಡೆಸಿದೆ. ಇದು ಭವಿಷ್ಯದ ಭಾರತವನ್ನೇ ನಾಶಪಡಿಸುವ ಸಂಘಪರಿವಾರದ ಕಾರ್ಯತಂತ್ರವೇ ಆಗಿದೆ’ ಎಂದು ಅವರು ಆರೋಪಿಸಿದರು.

ಇದನ್ನು ಓದಿ: ತುರ್ತು ಪರಸ್ಥಿತಿ ಅಂದು! ಇಂದು?!

‘34 ತಿಂಗಳುಗಳಿಂದ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಹಲವಾರು ಜನರನ್ನು ಬಂಧಿಸಲಾಗಿದೆ. ಆ ಪ್ರಕರಣ ದಲ್ಲಿ ಬಂಧಿತರಾದವರ ಮೇಲೆ ಇದುವರೆಗೆ ಒಂದೂ ಪ್ರಕರಣಗಳು ಸಾಬೀತಾಗಿಲ್ಲ. ಅಲ್ಲದೆ ತುರ್ತು ಪರಿಸ್ಥಿತಿಯನ್ನು ಸಂಘ ಪರಿವಾರವೇ ಬೆಂಬಲಿಸಿದ ಇತಿಹಾಸ ಇರುವಾಗ ನರೇಂದ್ರ ಮೋದಿ ಅವರಿಗೆ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿ ಭಾಷಣ ಮಾಡುವ ನೈತಿಕತೆ ಇದೆಯೇ’ ಎಂದು ಸೀತಾರಾಮ್ ಯೆಚೂರಿ ಪ್ರಶ್ನಿಸಿದರು.

ಸಮಿತಿಯ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಉಪ ಸಮಿತಿ ಸಂಚಾಲಕ ಡಾ. ಕೆ.ಪ್ರಕಾಶ ನಿರೂಪಿಸಿದರು.

Donate Janashakthi Media

Leave a Reply

Your email address will not be published. Required fields are marked *