‘ರಂಗ್‌ ದ ಬರ್ಸ’ ಕಾರ್ಯಕ್ರಮಕ್ಕೆ ಬಜರಂಗದಳ ಅಡ್ಡಿ : 6 ಮಂದಿ ವಶಕ್ಕೆ

ಮಂಗಳೂರು: ನಗರದ ಮರೋಳಿಯಲ್ಲಿ ಹೋಳಿ ಆಚರಣೆ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ‘ರಂಗ್‌ ದ ಬರ್ಸ 2023’ ಕಾರ್ಯಕ್ರಮಕ್ಕೆ ಬಜರಂಗದಳದ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ಈ ಸಂಬಂಧ ಆರು ಮಂದಿಯನ್ನು ಪೊಲೀಸರು  ವಶಕ್ಕೆ ಪಡೆದಿದ್ದಾರೆ.

‘ರಂಗ್‌ ದ ಬರ್ಸ ಕಾರ್ಯಕ್ರಮದ ಆರನೇ ಆವೃತ್ತಿಯು ಮಧ್ಯಾಹ್ನ ನಡೆಯುತ್ತಿತ್ತು. ಅರ್ಜುನ್ ಎಂಬುವರು ಈ ಕಾರ್ಯಕ್ರಮಕ್ಕೆ ಅನುಮತಿ ಪಡೆದಿದ್ದರು. ಕೆಲ ಯುವಕ-ಯುವತಿಯರು ಹೋಳಿ ಆಚರಣೆಯಲ್ಲಿ ತೊಡಗಿದ್ದಾಗ ಬಜರಂಗ ದಳದ ಕಾರ್ಯಕರ್ತರು ನುಗ್ಗಿ ದಾಂದಲೆ ನಡೆಸಿ, ಆಲಂಕಾರಿಕ ಪರಿಕರಗಳನ್ನು ಮುರಿದಿದ್ದಾರೆ. ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಕೆಲವರು, ಯುವಕ-ಯುವತಿಯರು ಧರಿಸಿದ್ದ ಉಡುಪಿನ ಬಗ್ಗೆ ಹಾಗೂ ಧ್ವನಿ ವರ್ಧಕ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆಯೋಜಕರ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದೆವು. ದಾಂದಲೆ ನಡೆಸಿದ ಆರು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಈ ಘಟನೆಯಿಂದ ಬೇಸತ್ತು ಆಯೋಜಕರು ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ’ ಎಂದು ಕಂಕನಾಡಿ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದರು.

ಇದನ್ನೂ ಓದಿ : ಮುಸ್ಲಿಂ ಯುವಕನನ್ನು ಕೊಲೆ ಮಾಡಿ ಪೊಲೀಸರಿಗೆ ಆವಾಜ್ ಹಾಕಿದ್ದ ಬಜರಂಗದಳದ ಸಂಜು ನಾಲ್ವಡೆ ಅರೆಸ್ಟ್!

‘ಘಟನೆಗೆ ಸಂಬಂಧಿಸಿದಂತೆ ಗಣೇಶ್‌ ಅತ್ತಾವರ, ಜೈಪ್ರಶಾಂತ್‌, ಬಾಲಚಂದ್ರ, ಅಕ್ಷಯ್‌, ಚಿರಾಗ್‌ ಹಾಗೂ ಮಿಥುನ್‌ ಅವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *